ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಹೊಯ್ಸಳರ ಕಾಲದ 4 ಸ್ಮಾರಕ ಸಂಶೋಧನೆ

ಹೊಸಹಳ್ಳಿಯ ನಿರ್ವಾಣಸ್ವಾಮಿ ಮಠ
Last Updated 12 ಅಕ್ಟೋಬರ್ 2021, 17:01 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಹೊಸಹಳ್ಳಿಯ ನಿರ್ವಾಣಸ್ವಾಮಿ ಮಠದ ಆವರಣದಲ್ಲಿ ಹೊಯ್ಸಳರ ಕಾಲದ ಮೂರು ವೀರಗಲ್ಲು, ಒಂದು ವೀರ ಮಹಾಸತಿ ಕಲ್ಲು ಸಂಶೋಧಿಸಲಾಗಿದೆ ಎಂದು ಪುರಾತತ್ವ ಸಂಶೋಧಕ ಎಚ್.ಆರ್.ಪಾಂಡುರಂಗ ತಿಳಿಸಿದ್ದಾರೆ.

ಹೊಯ್ಸಳರ ಕಾಲದ ತಳಿಗೆನಾಡು ಸಾವಿರ ಭೂಮಿಯ, ಹೊರವಲೆ ನಾಡಿನ ಸ್ಮಾರಕಗಳನ್ನು ಅಧ್ಯಯನ ಮಾಡಿದ್ದಾರೆ.

ಮಠದ ಎದುರು ಬಲ ಭಾಗದಲ್ಲಿ ಹೊಯ್ಸಳ ಲಾಂಛನ ಸಹಿತ ಪ್ರಥಮ ವೀರಗಲ್ಲು ಇದೆ. ಇದು ಬಳಪದ ಕಲ್ಲಿನದ್ದು. ನಾಲ್ಕು ಫಲಕ ಇವೆ. ವೀರಗಲ್ಲಿನ ಅಗ್ರಭಾಗವು ದೇವಾಲಯದ ಪ್ರತಿರೂಪವಾಗಿದ್ದು ಮೇಲೆ ಗೋಪುರ ಇದೆ.

ಕೆಳಗೆ ಮಂಟಪದಲ್ಲಿ ದ್ವಾರಪಾಲಕರ ಸಹಿತ ವಿಷ್ಣುವಿನ ಚಿತ್ರಣ, ಎರಡೂ ಬದಿ ಹೊಯ್ಸಳರ ಲಾಂಛನವಾದ ಹುಲಿಯನ್ನು ಕೊಲ್ಲುತ್ತಿರುವ ಹೊಯ್ಸಳರ ಮೂಲಪುರುಷ ಸಳನ ಚಿತ್ರಣವಿದೆ. ಹೊಯ್ಸಳರ ಲಾಂಛನದ ವೀರಗಲ್ಲು‌ ಎಂಬ ಹೆಗ್ಗಳಿಕೆ ಹೊಂದಿದೆ.

ಈ ವೀರಗಲ್ಲಿನಲ್ಲಿ‌ ಹೊಯ್ಸಳ ಲಿಪಿ ಸಾದೃಶ್ಯದ ಹಳೆಗನ್ನಡ ಅಕ್ಷರಗಳಿದ್ದು ಅಸ್ಪಷ್ಟವಾಗಿವೆ. ಈ ವೀರಗಲ್ಲು ವಿಷ್ಣುವರ್ಧನನ ಆಡಳಿತದ ಆರಂಭಕಾಲದ (12ನೇ ಶತಮಾನದ ಆರಂಭ) ‘ಹೊಯ್ಸಳ ಲಾಂಛನ ಸಹಿತ ದೊರೆತ ವೀರಗಲ್ಲು’ ಎಂದು ಹೇಳಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ಎರಡನೇ ಸ್ಮಾರಕ ಬಿಲ್ಗಾರ ಯೋಧನ ವೀರಗಲ್ಲು ಇದೆ. ಇದು ಬಳಪದ ಕಲ್ಲಿನದ್ದು. ಬಲಭಾಗದ ಅಂಚು ಒಡೆದಿದೆ. ಯುದ್ಧದಲ್ಲಿ ಮಡಿದ ವೀರನ ಸ್ಮಾರಕವಾಗಿ ಇದನ್ನು ಸ್ಥಾಪಿಸಲಾಗಿದೆ. ಶಿಲ್ಪ ಲಕ್ಷಣದಿಂದ ಹೊಯ್ಸಳರ ಕಾಲದ ಸ್ಮಾರಕ ಎಂದು ಊಹಿಸಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ಮೂರನೇ ಸ್ಮಾರಕ ವೀರಮಹಾಸತಿ ಕಲ್ಲು ಇದೆ. ಇದು ಬಳಪದ ಕಲ್ಲಿನದ್ದು. ಶಿಲ್ಪ ಅಧ್ಯಯನದ ಪ್ರಕಾರ ತಳಿಗೆನಾಡು ಸಾವಿರದ ಬಿಲ್ಗಾರ ವೀರ ಕಾಳಗದಲ್ಲಿ ಮಡಿದಾಗ ಆತನ ಪತ್ನಿಯು ಪತಿಯ ಪಾರ್ಥಿವ ಶರೀರದೊಂದಿಗೆ ಚಿತೆಯೇರಿದ ನಿಮಿತ್ತ ಸ್ಥಾಪಿಸಿದ ಈ ವೀರಮಹಾಸತಿ ಕಲ್ಲು ಹೊಯ್ಸಳರ ಕಾಲದ್ದು ಎಂದು ಊಹಿಸಬಹುದಾಗಿದೆ.

ಮಠದ ಎದುರು ಬಲಭಾಗದಲ್ಲಿ ನಾಲ್ಕನೇ ಸ್ಮಾರಕ ಸಂಗೀತಗಾರನ ವೀರಗಲ್ಲು ಇದೆ.

ಸೊಂಟದಲ್ಲಿ ಕಠಾರಿ ಧರಿಸಿದ ವೀರನೊಬ್ಬ ಎತ್ತಿದ ಬಲಗೈನಲ್ಲಿ ‘ಕಿನ್ನರಿ’ ಸಂಗೀತವಾದ್ಯ ಹಿಡಿದಿದ್ದು ಎಡಗೈನಲ್ಲಿ ‘ತಾಳಚಿಟಿಕೆ’ ಹಿಡಿದ ಚಿತ್ರಣ ಇದೆ. ಸಂಗೀತಗಾರನ ಎಡಗಡೆ ಕಾಲಬುಡದಲ್ಲಿ ಕಾಡುಹಂದಿ ಬಿದ್ದಿರುವ ಚಿತ್ರಣ ಇದೆ. ಶಿಲ್ಪ ಚಿತ್ರಣದ ಆಧಾರದಲ್ಲಿ ಹಂದಿಬೇಟೆಯಲ್ಲಿ ‘ಕಿನ್ನರಿ ವೀರ’ ಮರಣಹೊಂದಿದಾಗ ಸ್ಥಾಪಿಸಿದ ವಿಶೇಷ ವೀರಗಲ್ಲು ಎನ್ನಬಹುದಾಗಿದೆ ಎಂದು ಪಾಂಡುರಂಗ ತಿಳಿಸಿದ್ದಾರೆ.

ಮಠದ ಮಹೇಶ್, ಅರ್ಚಕ ಶಿವಮೂರ್ತಯ್ಯ, ಟಿ.ಪಿ.ಪ್ರಭಾಕರ್, ಎಚ್.ಕೆ.ಮಯೂರ್ ಮಾಹಿತಿ ನೀಡಿದರು. ಸ್ಮಾರಕಗಳ ಅಧ್ಯಯನಕ್ಕೆ ಇತಿಹಾಸ ತಜ್ಞರಾದ ಬೆಂಗಳೂರಿನ ಎಚ್.ಎಸ್.ಗೋಪಾಲರಾವ್, ಆರ್.ಶೇಷಶಾಸ್ತ್ರಿ, ಮೈಸೂರಿನ ಎಂ.ಜಿ ಮಂಜುನಾಥ್ ಮಾರ್ಗದರ್ಶನ ನೀಡಿದರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT