ಚಿಕ್ಕಮಗಳೂರು: ಜಿಲ್ಲೆಯಲ್ಲಿ 48 ಅಪಘಾತ ಸಂಭಾವ್ಯ ಸ್ಥಳ ಗುರುತು

ಶನಿವಾರ, ಮೇ 25, 2019
22 °C

ಚಿಕ್ಕಮಗಳೂರು: ಜಿಲ್ಲೆಯಲ್ಲಿ 48 ಅಪಘಾತ ಸಂಭಾವ್ಯ ಸ್ಥಳ ಗುರುತು

Published:
Updated:
Prajavani

ಚಿಕ್ಕಮಗಳೂರು: ಜಿಲ್ಲೆಯಲ್ಲಿ 48 ಅಪಘಾತ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಪೈಕಿ 15 ಚಿಕ್ಕಮಗಳೂರು ನಗರ ವ್ಯಾಪ್ತಿಯಲ್ಲಿವೆ.

ಅಪಘಾತ ಪ್ರಕರಣಗಳ ಅಂಕಿಅಂಶ ಆಧರಿಸಿ ಈ ಸ್ಥಳಗಳನ್ನು ಗುರುತಿಸಲಾಗಿದೆ. ಮೂರು ವರ್ಷಗಳಲ್ಲಿ ರಸ್ತೆಯೊಂದರ 500 ಮೀಟರ್‌ ವ್ಯಾಪ್ತಿಯಲ್ಲಿ ಮೃತ್ಯು ಸಂಭವಿಸಿದ ಐದು ಅಪಘಾತ ಅಥವಾ ತೀವ್ರ ಸ್ವರೂಪದ ಗಾಯಗಳಿಗೆ (ಮೃತ್ಯು ಒಳಗೊಂಡಂತೆ) ಎಡೆಮಾಡಿದ 10 ಅಪಘಾತ ಪ್ರಕರಣ ಘಟಿಸಿದ್ದ ಜಾಗವನ್ನು ಅಪಘಾತ ಸಂಭಾವ್ಯ ಸ್ಥಳ ಎಂದು ಗುರುತಿಸಲಾಗಿದೆ.

ಜಿಲ್ಲಾ ಪೊಲೀಸ್‌ ಇಲಾಖೆ ಅಂಕಿಅಂಶ ಪ್ರಕಾರ 2016ರಲ್ಲಿ (ಜನವರಿ– ಡಿಸೆಂಬರ್‌) 733 ಅಪಘಾತಗಳು ಘಟಿಸಿದ್ದು 161 ಮಂದಿ ಮೃತಪಟ್ಟು, 946 ಮಂದಿ ಗಾಯಗೊಂಡಿದ್ದರು. 2017ರಲ್ಲಿ 745 ಅಪಘಾತಗಳು ಘಟಿಸಿದ್ದು 142 ಮಂದಿ ಮೃತಪಟ್ಟು, 1,108 ಮಂದಿ ಗಾಯಗೊಂಡಿದ್ದರು. 2018ರಲ್ಲಿ 684 ಅಪಘಾತಗಳು ಘಟಿಸಿದ್ದು, 141 ಜನ ಸಾವಿಗೀಡಾಗಿ, 953 ಮಂದಿ ಗಾಯಗೊಂಡಿದ್ದರು.

ಜಿಲ್ಲಾ ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ ಇಲಾಖೆಯವರು ಜಂಟಿಯಾಗಿ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಈ ಸ್ಥಳಗಳಲ್ಲಿ ಅಪಘಾತ ನಿಯಂತ್ರಣ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಈಚೆಗೆ ನಡೆಸ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದೆ.

‘ಅಪಘಾತ ಸಂಭಾವ್ಯ ಸ್ಥಳಗಳ ಸಮೀಕ್ಷೆ ಮಾಡಿದ್ದೇವೆ. ಸೂಚನಾ ಫಲಕಗಳು, ಎಚ್ಚರಿಕೆ ಫಲಕಗಳು, ಪ್ರತಿಫಲನ (ಬ್ಲಿಂಕರ್ಸ್‌), ಕ್ಯಾಟ್‌ ಐಸ್‌ ಮೊದಲಾದವನ್ನು ಅಳವಡಿಸಲು, ಅಗತ್ಯ ಇರುವ ಕಡೆಗಳಲ್ಲಿ ರಸ್ತೆ ವಿಸ್ತರಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ’ ಎಂದು ಆರ್‌ಟಿಒ ಮುರುಗೇಂದ್ರ ಬಿ. ಶಿರೊಳ್ಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿ 15 ವರ್ಷಗಳ ಹಿಂದೆ ವಾಹನ ಸಾಂದ್ರತೆ ಇಷ್ಟೊಂದು ಇರಲಿಲ್ಲ. ಆಗಿನ ಸಾಂದ್ರತೆ ತಕ್ಕಂತೆ ರಸ್ತೆ ನಿರ್ಮಿಸಿದ್ದರು. ಜಿಲ್ಲೆಯಲ್ಲಿ ಈಗ ವರ್ಷಕ್ಕೆ ಸುಮಾರು 25 ಸಾವಿರ ವಾಹನಗಳು ನೋಂದಣಿಯಾಗಿ, ರಸ್ತೆಗಿಳಿಯುತ್ತವೆ. ಈಗಿನ ವಾಹನ ಸಾಂದ್ರತೆಗೆ ತಕ್ಕಂತೆ ರಸ್ತೆಗಳನ್ನು ಸುಧಾರಿಸುವ, ಒಗ್ಗಿಸುವ ಅಗತ್ಯ ಇದೆ’ ಎಂದು ತಿಳಿಸಿದರು.

‘ಮಲೆನಾಡು ಮತ್ತು ಬಯಲು ಸೀಮೆ ಭೌಗೋಳಿಕ ವೈಶಿಷ್ಟ್ಯದ ಜಿಲ್ಲೆ ಇದು. ಪ್ರವಾಸಿ ವಾಹನಗಳ ದಾಂಗುಡಿ ವರ್ಷಪೂರ್ತಿ ಇರುತ್ತದೆ. ಗಿರಿಶ್ರೇಣಿ,

ಘಾಟಿ ಮಾರ್ಗ, ಅರಣ್ಯ ರಸ್ತೆ, ಹಠಾತ್‌ ತಿರುವು, ಹೇರ್‌ಪಿನ್‌ ತಿರುವುಗಳಲ್ಲಿ ಅಪಘಾತಗಳು ಹೆಚ್ಚು ಸಂಭವಿಸಿವೆ. 48 ಅಪಘಾತ ಸಂಭಾವ್ಯ ಸ್ಥಳಗಳಲ್ಲಿ ಕೈಗೊಳ್ಳಬಹುದಾದ ಸುಧಾರಣಾ ವ್ಯವಸ್ಥೆಗಳ ಬಗ್ಗೆ ಪೊಲೀಸ್‌, ಪಿಡಬ್ಲುಡಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿ, ರಸ್ತೆ ಸುರಕ್ಷತಾ ಕೋಶಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಜಿಲ್ಲೆಯನ್ನು ಅಪಘಾತ ಮುಕ್ತವಾಗಿಸುವ ಉದ್ದೇಶ ಇದೆ’ ಎಂದು ತಿಳಿಸಿದರು.

*
ಅಪಘಾತ ಸಂಭಾವ್ಯ ಸ್ಥಳಗಳನ್ನು ಪರಿಶೀಲಿಸಿ ವರದಿ ನೀಡಲು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಆರ್‌ಟಿಒ, ಪಿಡಬ್ಲುಡಿ ಎಂಜಿನಿಯರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ಆಧರಿಸಿ ಸುಧಾರಣೆಗೆ ಕ್ರಮ ವಹಿಸಲಾಗುವುದು.
–ಹರೀಶ್‌ಪಾಂಡೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !