ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು| ಬಯಲುಸೀಮೆಯ 60 ಗ್ರಾಮಗಳಲ್ಲಿ ನೀರಿಗೆ ಬವಣೆ: ಟ್ಯಾಂಕರ್‌ನಲ್ಲಿ ನೀರು

ನೀಗದ ನೀರಿನ ಬವಣೆ
Last Updated 28 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯ ಬಯಲುಸೀಮೆ ಭಾಗದಲ್ಲಿ ಮಳೆಗಾಲದಲ್ಲೂ ನೀರಿನ ಬವಣೆ ನೀಗಿಲ್ಲ. ಈ ಭಾಗದ 60 ಗ್ರಾಮಗಳಿಗೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ.

ಪ್ರತಿದಿನ ಚಿಕ್ಕಮಗಳೂರು ತಾಲ್ಲೂಕಿನಲ್ಲಿ 19 ಗ್ರಾಮಗಳಿಗೆ 77 ಟ್ಯಾಂಕರ್‌ ಹಾಗೂ ಕಡೂರು ತಾಲ್ಲೂಕಿನ 41ಹಳ್ಳಿಗಳಿಗೆ 163 ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಐದು ಸಾವಿರದಿಂದ ಎಂಟು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಐದು ಸಾವಿರ ಲೀಟರ್‌ ಟ್ಯಾಂಕರ್‌ಗೆ ಟ್ರಿಪ್‌ಗೆ ₹ 1200 ನಿಗದಿಪಡಿಸಲಾಗಿದೆ.

ಈ ತಾಲ್ಲೂಕಿನ ಅಣೇಗೆರೆ ಗ್ರಾಮ ಪಂಚಾಯಿತಿಯ ಎಂ.ಗೊಲ್ಲರ ಹಟ್ಟಿ, ಹರಳಘಟ್ಟ ಗ್ರಾಮ ಪಂಚಾಯಿತಿಯ ಪಾರ್ವತಿನಗರ ಮತ್ತು ಶ್ರೀರಾಂಪುರ ಊರುಗಳಲ್ಲಿ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ.

ತಾಲ್ಲೂಕು ಪಂಚಾಯಿತಿ ಅಂಕಿಅಂಶ ಪ್ರಕಾರ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪಂಚಾಯಿತಿವಾರು ಹಿರೇಗೌಜ ಹಾಗೂ ಲಕ್ಯಾ ತಲಾ ಆರು, ಬೆಳವಾಡಿ ಮತ್ತು ಸಿಂಧಿಗೆರೆ ತಲಾ ಎರಡು, ತೇಗೂರು, ಲಕ್ಕುಮನಹಳ್ಳಿ ಮತ್ತು ಮಾಚೇನಹಳ್ಳಿ ವ್ಯಾಪ್ತಿಯಲ್ಲಿ ತಲಾ ಒಂದು ಗ್ರಾಮಗಳಲ್ಲಿ ಟ್ಯಾಂಕರ್‌ನಲ್ಲಿ ನೀರು ಒದಗಿಸಲಾಗುತ್ತಿದೆ. ಕಡೂರು ತಾಲ್ಲೂಕಿನಲ್ಲಿ ಎಸ್‌.ಬಿದರೆ ಮತ್ತು ನಿಡಘಟ್ಟ ತಲಾ 5, ವಿ.ಯರದಕೆರೆ, ಚೀಲನಹಳ್ಳಿ, ದೇವನೂರು, ನಾಗೇನಹಳ್ಳಿ ತಲಾ 4, ಹುಲಿಕೆರೆ – 3, ಬಾಣೂರು, ಚಿಕ್ಕದೇವನೂರು, ಸಿಂಗಟಗೆರೆ, ಅಣ್ಣೀಗೆರೆ ತಲಾ 2, ಮತ್ತಿಘಟ್ಟ, ಬಳ್ಳೇಕೆರೆ, ಮಲ್ಲೇಶ್ವರ, ಬಾಸೂರು ಗ್ರಾಮಗಳಿಗೆ ತಲಾ ಒಂದು ಟ್ಯಾಂಕರ್‌ ನೀರು ಒದಗಿಸಲಾಗುತ್ತಿದೆ.

ಚಿಕ್ಕಮಗಳೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಾರನಾಥ್‌ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ‘ಬಯಲು ಸೀಮೆಭಾಗದಲ್ಲಿ ಮಳೆಯಾಗಿದೆ. ಕೆರೆಕಟ್ಟೆಗಳು ತುಂಬಿ ಅಂತರ್ಜಲ ಮರುಪೂರಣವಾಗುವಷ್ಟು ಮಳೆಯಾಗಿಲ್ಲ. ಕೊಳವೆಬಾವಿಗಳಲ್ಲಿ ಜಲ ಬರುತ್ತಿಲ್ಲ. ಹೀಗಾಗಿ, ಕೆಲ ಗ್ರಾಮಗಳಿಗೆ ಮಳೆಗಾಲದಲ್ಲಿಯೂ ಟ್ಯಾಂಕರ್‌ನಲ್ಲಿ ನೀರು ಪೂರೈಸಬೇಕಾಗಿದೆ’ ಎಂದು ತಿಳಿಸಿದರು.

ಬಯಲು ಸೀಮೆಯಲ್ಲಿ ಹಲವಾರು ಗ್ರಾಮಗಳಿಗೆ ಮಾರ್ಚ್‌ನಿಂದಲೂ ಟ್ಯಾಂಕರ್‌ನಲ್ಲಿ ನೀರು ಪೂರೈಸಲಾಗುತ್ತಿದೆ. ಕೆಲ ಊರುಗಳಲ್ಲಿ ಕೊಳವೆ ಬಾವಿಗಳಲ್ಲಿ ಬರಿದಾಗಿವೆ. ಕೆಲವೆಡೆ ಗ್ರಾಮದಿಂದ ನಾಲ್ಕೈದು ಕಿಲೋ ಮೀಟರ್‌ ದೂರದಿಂದ ನೀರು ತರಬೇಕಾದ ಸ್ಥಿತಿ ಇದೆ.

‘ಬೇಸಿಗೆಯಿಂದಲೂ ಇದೇ ಸ್ಥಿತಿ ಇದೆ. ಎರಡ್ಮೂರು ದಿನಗಳಿಗೊಮ್ಮೆ ಟ್ಯಾಂಕರ್‌ನಲ್ಲಿ ನೀರು ಪೂರೈಲಾಗುತ್ತಿದೆ. ದಿನಕ್ಕೆ ಮೂರ್ನಾಲ್ಕು ಟ್ಯಾಂಕರ್‌ ಬೇಕಾಗುತ್ತದೆ’ ಎಂದು ಪಂಚಾಯಿತಿ ಸದಸ್ಯ ಕ್ಯಾತನಬೀಡಿನ ಬಸವರಾಜು ಹೇಳುತ್ತಾರೆ.

‘ನಮ್ಮ ಭಾಗದಲ್ಲಿ ನೀರಿನದ್ದೇ ದೊಡ್ಡ ಸಮಸ್ಯೆ. ನೀರಿನ ಸಮಸ್ಯೆಯಿಂದಾಗಿ ದನಕರುಗಳನ್ನು ಸಾಕುವುದು ಕಷ್ಟವಾಗಿದೆ. ಪ್ರತಿದಿನ ಹೊಲದಿಂದ ನೀರು ತರುತ್ತೇವೆ’ ಎಂದು ಸಾದರಹಳ್ಳಿ ಗ್ರಾಮಸ್ಥ ಚಂದ್ರಪ್ಪ ಬವಣೆ ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT