ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಟರಮಕ್ಕಿ ಕೆರೆ ‘ನಡುಗಡ್ಡೆ’: ಅನೈತಿಕ ಚಟುವಟಿಕೆಗಳ ಅಡ್ಡೆ

ಕೆರೆಯೊಗಳಗಿನ ದಿಬ್ಬದಲ್ಲಿ ಪುಂಡರ ಹಾವಳಿ– ಪಾಳು ಬಿದ್ದ ಶೌಚಾಲಯ
Last Updated 20 ಮೇ 2019, 11:45 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ಕೆರೆಯೊಳಗಿನ ನಡುಗಡ್ಡೆ(ದಿಬ್ಬ) ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಈ ನಿರ್ಜನ ಪ್ರದೇಶವು ಪುಂಡ, ಪೋಕರಿಗಳ ದುಶ್ಚಟದ ಅಡ್ಡೆಯಾಗಿದೆ.

ನಗರದ ಕೊಳಚೆಯನ್ನೆಲ್ಲ ಹೊದ್ದುಕೊಂಡಿರುವ ಈ ಮಲಿನಮಯ ಕೆರೆ ಮಧ್ಯದಲ್ಲಿ ನಿರ್ಮಿಸಿರುವ ದಿಬ್ಬದ ಸುತ್ತ ಮದ್ಯದ ಬಾಟಲಿ– ಪೌಚುಗಳು, ಸಿಗರೇಟು, ಬೀಡಿ–ಗುಟ್ಕಾ ಪ್ಯಾಕೆಟ್ಟುಗಳು, ನೀರಿನ ಖಾಲಿ ಬಾಟಲಿಗಳು, ಪ್ಲಾಸ್ಟಿಕ್‌– ಕಾಗದ ಲೋಟಗಳು, ಕುರುಕಲು ತಿನಿಸು ಪೊಟ್ಟಣಗಳದ್ದೇ ಕಾರುಬಾರು. ಸಂಜೆ ಹೊತ್ತಿನಲ್ಲಿ ದಿಬ್ಬದಲ್ಲಿ ಪುಂಡ, ಪೋಕರಿಗಳದ್ದೇ ದರ್ಬಾರು. ಮದ್ಯಪಾನ, ಧೂಮಪಾನ, ‘ಡ್ರಗ್ಸ್‌’ ಸೇವನೆ ಮೊದಲಾದವು ಎಗ್ಗಿಲ್ಲದೆ ಸಾಗಿವೆ.

ದಿಬ್ಬವು ಜನ ಸಂಪರ್ಕದಿಂದ ದೂರ ಇರುವುದು, ಕಣ್ಗಾವಲು ಇಲ್ಲದಿರುವುದು, ಸುತ್ತ ಗಿಡ– ಬಿದಿರು ಮೆಳೆ ಬೆಳೆದಿರುವುದು ‘ಜೋಡಿ ಹಕ್ಕಿ’ಗಳ ‘ಚಿಲಿಪಿಲಿ’, ‘ಸ್ವಚ್ಛಂದ ವಿಹಾರ’ಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಣಯ ಪಕ್ಷಿಗಳು ಕಾಲೇಜು ಬಂಕ್‌ ಮಾಡಿ ಇಲ್ಲಿ ಕಾಲ ಕಳೆಯುತ್ತವೆ.

‘ಕೆರೆಯೊಗಳಗೆ ದಿಬ್ಬ ನಿರ್ಮಿಸಿ ನಗರಸಭೆಯೇ ಅನೈತಿಕ ಚಟುವಟಿಕೆಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಪುಡಾರಿಗಳು ಸಂಜೆಯಾಗುತ್ತಿದ್ದಂತೆ ಬೈಕುಗಳಲ್ಲಿ ದಿಬ್ಬಕ್ಕೆ ಬರುತ್ತಾರೆ. ಅವರ ಆಟಾಟೋಪ ಹೇಳತೀರದು. ಗಾಂಜಾ, ಡ್ರಗ್ಸ್‌ ಸೇವಿಸಿ, ಕುಡಿದು, ತಿಂದು ಮಜಾ ಉಡಾಯಿಸುತ್ತಾರೆ. ದಿಬ್ಬದಲ್ಲಿ ಪ್ರಣಯ ಪಕ್ಷಿಗಳು ಜಾಲಿಯಾಗಿ ಕಾಲ ಕಳೆಯುತ್ತಾರೆ. ಇಲ್ಲಿ ಯಾರೂ ಹೇಳುವರಿಲ್ಲ, ಕೇಳುವರಿಲ್ಲ ಆಡಿದ್ದೇ ಆಟ ಎನ್ನುವಂತಾಗಿದೆ’ ಎಂದು ದಂಟರಮಕ್ಕಿಯ ಡಿ.ಕೆ.ನಟರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆರೆಯ ದುಃಸ್ಥಿತಿ ಹೇಳಲಸಾಧ್ಯ. ಕೆರೆಯ ಸುತ್ತ ನಿರ್ಮಿಸಿದ್ದ ಡಾಂಬರು ರಸ್ತೆ ಅಧ್ವಾನವಾಗಿದೆ. ವಾಯುವಿಹಾರ ಪಥ ನಿರ್ಮಿಸಿ ಜನ ತಿರುಗಾಡುವಂತಾದರೆ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ’ ಎಂದು ಅವರು ಹೇಳುತ್ತಾರೆ.

ದಿಬ್ಬದಲ್ಲಿನ ಸ್ವಾಮಿ ವಿವೇಕಾನಂದರ ಪ್ರತಿಮೆ ನಿರ್ಮಾಣ ‘ಕತೆ’ ಬಗೆಹರಿದಿಲ್ಲ. ಪ್ರತಿಮೆಯ ವಿರೂಪ ಸರಿಪಡಿಸುವ ಕೆಲಸ ಅರೆಬರೆಯಾಗಿದೆ. ದಿಬ್ಬದಲ್ಲಿ ಆಸನ, ಪಥ ನಿರ್ಮಾಣ, ಮಂಟಪ ನಿರ್ಮಾಣ ಎಲ್ಲವೂ ಅರ್ಧಂಬರ್ಧವಾಗಿವೆ. ಪಂಪ್‌ಸೆಟ್‌ ಸ್ಟಾರ್ಟರ್‌ ಬಾಕ್ಸ್‌ ಬಾಗಿಲು ಹಾಳಾಗಿದೆ. ಆವರಣದಲ್ಲಿ ಕಸಕಡ್ಡಿಗಳು ಬಿದ್ದಿವೆ.

‘ನಡುಗಡ್ಡೆ, ತಳಪಾಯ, ಪ್ರತಿಮೆ ನಿರ್ಮಾಣಕ್ಕೆ ಈವರೆಗೆ ₹ 30 ಲಕ್ಷಕ್ಕೂ ಹೆಚ್ಚು ಖರ್ಚಾಗಿದೆ. ಎರಡೂವರೆ ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಬೆಂಗಳೂರಿನ ಮಧುಸೂದನ್‌ ಎಂಬವರು ಪ್ರತಿಮೆ ಸರಿಪಡಿಸುವುದಾಗಿ ಹಣ ಪಡೆದು ಪರಾರಿಯಾಗಿದ್ದಾರೆ. ಈಗ ಮಂಗಳೂರಿನಿಂದ ಹೊಸ ಪ್ರತಿಮೆ ತಂದು ಅಳವಡಿಸುವ ಯೋಚನೆ ಇದೆ’ ಎಂದು ಪ್ರತಿಮೆ ಸಮಿತಿಯ ಮುತ್ತಯ್ಯ ತಿಳಿಸಿದರು.

ಕೆರೆ ಅಂಗಳವು ಜೊಂಡು, ಕಳೆ ಸಸ್ಯ, ಕಸಕಡ್ಡಿ ಮಯವಾಗಿದೆ. ಕೆರೆಯ ನೀರು ಗಲೀಜುಮಯವಾಗಿದೆ. ದಂಟರಮಕ್ಕಿ ಬಳಿ ಕೆರೆಗೆ ಹೊಂದಿಕೊಂಡಂತಿರುವ ಶೌಚಾಲಯ ಪಾಳು ಬಿದ್ದಿದೆ. ಶೌಚಾಗೃಹವು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಗಣೇಶ ವಿಸರ್ಜನೆಗೆ ನಿರ್ಮಿಸಿದ್ದ ಕೊಳವು ಕೊಳಕುಮಯವಾಗಿದೆ. ಕೆರೆಯೊಳಗೆ ಕಸ ಸುರಿಯಲಾಗಿದೆ.

‘ದಿಬ್ಬದಲ್ಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ, ನಗರಸಭೆ, ಸಣ್ಣ ನೀರಾವರಿ ಇಲಾಖೆ, ಪೊಲೀಸರು, ಜನಪ್ರತಿನಿಧಿಗಳು ಗಮನಹರಿಸಬೇಕು. ಕೆರೆಯ ಅಭಿವೃದ್ಧಿಗೆ ಕ್ರಮ ವಹಿಸಬೇಕು’ ಎಂದು ಜ್ಯೋತಿನಗರ ನಿವಾಸಿ ಸುಶೀಲಮ್ಮ ಒತ್ತಾಯಿಸಿದರು.

ಮುಖ್ಯಾಂಶಗಳು

ಮದ್ಯದ ಬಾಟಲಿ, ಸಿಗರೇಟು– ಗುಟ್ಕಾ ಪ್ಯಾಕೆಟ್‌ಗಳ ರಾಶಿ

ಕೆರೆಯ ಸುತ್ತ ನಿರ್ಮಿಸಿದ್ದ ಡಾಂಬರು ರಸ್ತೆ ಅಧ್ವಾನ

ಎರಡೂವರೆಗಳಿಂದ ಚಾಲ್ತಿಯಲ್ಲಿರುವ ಕಾಮಗಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT