ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದಾಯ ಜಾಗ ಸುಪರ್ದಿಗೆ ತೆಗೆದುಕೊಳ್ಳಲು ಸೂಚನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌
Last Updated 24 ಜೂನ್ 2019, 15:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಂಟಿ (ಕಂದಾಯ, ಅರಣ್ಯ) ಸಮೀಕ್ಷೆ ಮುಗಿದಿರುವ ಕಡೆಗಳಲ್ಲಿ ಕಂದಾಯ ಜಾಗವನ್ನು ಸುಪರ್ದಿಗೆ ತೆಗೆದುಕೊಂಡು ಪುನರ್ವಸತಿ, ಕಟ್ಟಡ, ವಸತಿ ಯೋಜನೆಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಸಮೀಕ್ಷೆ ಕಾರ್ಯಕ ಪೂರ್ಣವಾಗುವವರೆಗೆ ಕಾಯವುದು ಬೇಡ. ಜಂಟಿ ಸಮೀಕ್ಷೆ ಮಾಡಿ ಗಡಿ ಗುರುತಿಸಿರುವ ಕಡೆಗಳಲ್ಲಿ ಜಾಗವನ್ನು ಸುಪರ್ದಿಗೆ ತೆಗೆದುಕೊಂಡು, ಕ್ರಮ ವಹಿಸಿ ಜಿಲ್ಲಾಧಿಕಾರಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ 1.07 ಲಕ್ಷ ಹೆಕ್ಟೇರ್‌ ಜಾಗವು ಕಂದಾಯ, ಗೋಮಾಳ(ಅರಣ್ಯ) ಒಂದೇ ಆರ್‌ಟಿಸಿನಲ್ಲಿ ಇದ್ದು, ಅರಣ್ಯ ಮತ್ತು ಕಂದಾಯ ಗಡಿ ಗುರುತು ನಿಟ್ಟಿನಲ್ಲಿ ಕ್ಷೇತ್ರಮಟ್ಟದಲ್ಲಿ ಜಂಟಿ ಸಮೀಕ್ಷೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 90 ಸಾವಿರ ಹೆಕ್ಟೇರ್‌ ಸಮೀಕ್ಷೆ ಮುಗಿದಿದೆ’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿಗೌತಮ್‌ ತಿಳಿಸಿದರು.

‘ಕಂದಾಯ ಮತ್ತು ಅರಣ್ಯ ಗಡಿ ಗುರುತಿಸದಿರುವುದರಿಂದ ‘94’, ‘94ಎ’, ‘94ಸಿ’, ‘94ಸಿಸಿ’, ಪುನರ್ವಸತಿ, ಅಂಗನವಾಡಿ, ಶಾಲೆ, ಆಸ್ಪತ್ರೆ ಇತರ ಉದ್ದೇಶಗಳಿಗೆ ಜಾಗ ನೀಡುವುದು ಕಷ್ಟವಾಗಿದೆ. ಸಮೀಕ್ಷೆ ಮುಗಿದರೆ ಕಂದಾಯ ಜಾಗ 52 ಸಾವಿರ ಹೆಕ್ಟೇರ್‌ ಲಭ್ಯವಾಗುತ್ತದೆ. ಅರಣ್ಯ ಜಾಗ 55 ಸಾವಿರ ಹೆಕ್ಟೇರ್‌ ಇದೆ’ ಎಂದು ಸಭೆಗೆ ತಿಳಿಸಿದರು.

‘ಈಗ ಕೆಲವು ಕಡೆ ಮಳೆಯಿಂದಾಗಿ ಸಮೀಕ್ಷೆಗೆ ತೊಂದರೆಯಾಗಿದೆ. ಇನ್ನೊಂದು ವಾರದಲ್ಲಿ ಸಮೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಇನ್ನು 10 ದಿನಗಳಲ್ಲಿ ಸಮೀಕ್ಷೆಗೆ ಸಂಬಂಧಿಸಿದಂತೆ ಸಭೆ ನಡೆಸಲಾಗುವುದು. ಸಮೀಕ್ಷೆ ವರದಿ ಪಡೆದು ದಾಖಲೆ ಸಿದ್ಧಪಡಿಸಿ, ಜಾಗವನ್ನು ಸುಪರ್ದಿಗೆ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಸೆಕ್ಷನ್‌–4 (ಪ್ರಸ್ತಾವಿತ ಅರಣ್ಯ)ದ ಬಗ್ಗೆ ಗಮನ ಹರಿಸಬೇಕು. ಈ ಜಾಗ ಇಂಥ ಉದ್ದೇಶಕ್ಕೆ ಎಂದು ಮೀಸಲಿಡಬೇಕು. ಸ್ಮಶಾನ, ಶಾಲೆ, ಆಟದ, ಮೈದಾನ, ವಸತಿ ಮೊದಲಾದ ಉದ್ದೇಶಗಳಿಗೆ ಜಾಗ ಮೀಸಲಿಡಬೇಕು ಎಂದು ಶಾಸಕ ರಾಜೇಗೌಡ ಗಮನ ಸೆಳೆದರು.

ಕುದುರೆಮುಖದ 1657 ಎಕರೆ ಹಸ್ತಾಂತರ ಆದೇಶ ವಾಪಸ್‌ಗೆ ಮನವಿ
ಹುಬ್ಬಳ್ಳಿ–ಅಂಕೋಲಾ ರೈಲ್ವೆ ಮಾರ್ಗಕ್ಕೆ ಭೂಸ್ವಾಧೀನಕ್ಕೆ ಪರ್ಯಾಯವಾಗಿ ಜಿಲ್ಲಯ ಮೂಡಿಗೆರೆ ತಾಲ್ಲೂಕಿನ ಕಳಸ ಹೋಬಳಿಯ ಸಂಸೆ ಗ್ರಾಮದ ಕುದುರೆಮುಖ ‍ಪ್ರದೇಶದಲ್ಲಿರು 1657.36 ಎಕರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಹಿಂಪಡೆಯಬೇಕು ಎಂದು ಭೋಜೇಗೌಡ ಹೇಳಿದರು.

ನಿರಾಶ್ರಿತರ ಪುನರ್ವಸತಿಗೆ ಜಾಗ ಅಗತ್ಯ ಇದೆ. ಅದನ್ನು ವಾಪಸ್‌ ಪಡೆಯಬೇಕು ಎಂದು ಪ್ರಾಣೇಶ್‌ ದನಿಗೂಡಿಸಿದರು.

ನಾಲ್ಕು ದಶಕಗಳಿಂದ ಬೇರೆ ಜಿಲ್ಲೆಗಳ ಕಾಮಗಾರಿಗಳಿಗೆ ಪರ್ಯಾಯವಾಗಿ ಈ ಜಿಲ್ಲೆಯ ಯಾವ್ಯಾವ ಜಾಗವನ್ನು ಒದಗಿಸಲಾಗಿದೆ ಎಂದು ಮಾಹಿತಿ ತರಿಸಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದರು.

ಜಾಗದ ಅಗತ್ಯವಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟು ಆದೇಶ ಹಿಂಪಡೆಯುವಂತ ಪ್ರಯತ್ನ ಮಾಡೋಣ. ಆದರೆ, ಬೇರೆ ಜಿಲ್ಲೆ ಕಾಮಗಾರಿಗೆ ಕೊಡಬಾರದು ಎಂಬ ಸಂಕುಚಿತ ಭಾವ ತಳೆಯುವುದು ಬೇಡ ಎಂದು ಜಾರ್ಜ್ ಹೇಳಿದರು.

ಹೊಸದಾಗಿ ಘೋಷಣೆಯಾಗಿರುವ ಕಳಸ ತಾಲ್ಲೂಕು ಕೇಂದ್ರದ ಕಚೇರಿಗಳನ್ನು ಕುದುರೆಮುಖ ಟೌನ್‌ಶಿ‌ಪ್‌ನಲ್ಲಿನ ಕಟ್ಟಡಗಳಲ್ಲಿ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಇನ್ನು ಎರಡು ವಾರಗಳಲ್ಲಿ ಪ್ರಸ್ತಾವ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
‘ಕೇಂದ್ರ ಪರಿಸರ ಸಮಿತಿಯಲ್ಲಿ (ಸಿಇಸಿ) ಕುದುರೆಮುಖದ ಟೌನ್‌ಶಿಪ್‌ ಸಹಿತವಾಗಿ ಆ ಜಾಗವನ್ನು ಅರಣ್ಯ ಇಲಾಖೆಗೆ ನೋಟಿಫೈ ಮಾಡಿದ್ದಾರೆ. ಟೌನ್‌ಶಿಪ್‌ ಅನ್ನು ಕಂದಾಯ ಇಲಾಖೆಗೆ ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನವಾಗಿಲ್ಲ’ ಎಂದು ಸಹಾಯಕ ಅರಣ್ಯಸಂಕ್ಷಣಾಧಿಕಾರಿ ಸಭೆಗೆ ತಿಳಿಸಿದರು.

‘ಕುದುರೆಮುಖದ ಟೌನ್‌ಶಿಪ್‌ನಲ್ಲಿ ಪೊಲೀಸ್‌ ತರಬೇತಿ ಅಕಾಡೆಮಿ ಮಾಡಬೇಕು ಎಂಬ ಪ್ರಸ್ತಾಪ ಇತ್ತು. ಈಗ ನೋಟಿಫಿಕೇಷನ್‌ನಿಂದ ಹೊರತೆಗೆಯುವ ಬಗ್ಗೆ ಕ್ರಮವಹಿಸಬೇಕು’ ಎಂದು ಸಿ.ಟಿ.ರವಿ ಹೇಳಿದರು.

‘ಸಂಬಂಧಪಟ್ಟ ಇಲಾಖೆಯವರೊಂದಿಗೆ ಚರ್ಚಿಸುತ್ತೇನೆ. ಮಾರ್ಪಾಡು ಮಾಡಿ ಪ್ರಸ್ತಾವವನ್ನು ಸಲ್ಲಿಸಬೇಕು. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸೋಣ’ ಎಂದು ಜಾರ್ಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT