ಭಾನುವಾರ, ಸೆಪ್ಟೆಂಬರ್ 19, 2021
30 °C
ಪರಿಸರವಾದಿ ಗಿರೀಶ್‌ ಹಲ್ಲೆ ಪ್ರಕರಣ: 7 ಆರೋಪಿಗಳ ಬಂಧನ

ಕಾರ್ಯಾಚರಣೆ ತಂಡಕ್ಕೆ ಬಹುಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಕಂಬಿಹಳ್ಳಿಯಲ್ಲಿ ಪರಿಸರವಾದಿ ಡಿ.ವಿ.ಗಿರೀಶ್‌, ಇತರರ ಮೇಲೆ ಈಚೆಗೆ ಹಲ್ಲೆ ನಡೆಸಿದ್ದ ಆರೋಪಿಗಳನ್ನು ಬಂಧಿಸಿದ ತಂಡಗಳಿಗೆ ನಗದು ಬಹುಮಾನ, ಪ್ರಶಂಸೆ ಪತ್ರ ನೀಡಲಾಯಿತು.

ಜಿಲ್ಲಾ ಪೊಲೀಸ್‌ ಅಕ್ಷಯ್‌ ಎಂ.ಹಾಕೆ ಅವರು ಕಾರ್ಯಾಚರಣೆ ತಂಡಗಳಲ್ಲಿದ್ದ ಪ್ರೊಬೇಷನರಿ ಡಿವೈಎಸ್‌ಪಿ ಜಿ.ತಲಕಟ್ಟಿ, ಇನ್‌ಸ್ಪೆಕ್ಟರ್‌ ಜಿ.ಎಸ್‌.ಸ್ವರ್ಣ, ಪಿಎಸ್‌ಐಗಳಾದ ಎನ್‌.ಎನ್‌.ರವಿ, ಅನಿಲ್‌ಕುಮಾರ್‌ ಟಿ.ನಾಯಕ್‌, ರಫೀಕ್‌, ಎಎಸ್‌ಐ ಸುರೇಶ್‌, ಕಾನ್‌ಸ್ಟೆಬಲ್‌
ಗಳಾದ ಹಾಲಪ್ಪ, ರಮೇಶ್‌, ಭರತ್ ಭೂಷಣ, ಸಿದ್ದೇಶ್‌, ಗಿರೀಶ, ಮಂಜುನಾಥ, ನಾಗರತ್ನ , ಬಸವರಾಜ್‌ ಅವರಿಗೆ ಬಹುಮಾನ, ಪ್ರಶಂಸೆ ಪತ್ರ ವಿತರಿಸಿದರು.

‘ಆರೋಪಿಗಳ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿತ್ತು. ತಂಡಗಳು ಹಗಲುರಾತ್ರಿ ಕಾರ್ಯಾಚರಣೆ ನಡೆಸಿ ಏಳು ಆರೋಪಿಗಳನ್ನು 48 ಗಂಟೆಗಳಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಕಂಬಿಹಳ್ಳಿ,
ಹೊಸಪೇಟೆ, ಸಂತವೇರಿ ಗ್ರಾಮದವರು’ ಎಂದು ಎಸ್ಪಿ ಅಕ್ಷಯ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಿಕ್ಕಮಗಳೂರಿನ ಸಂತವೇರಿ ಬಳಿಯ ಗುಡ್ಡ, ಬಳ್ಳಾರಿ ಜಿಲ್ಲೆ, ಕೊಡಗು ಜಿಲ್ಲೆ, ಬೆಂಗಳೂರು, ವೈಟ್‌ಫೀಲ್ಡ್‌ನಲ್ಲಿ ಆರೋಪಿಗಳು ಅಡಗಿದ್ದರು. ಆರೋಪಿಗಳು ಟಿಂಬರ್‌, ಇತರ ಕೂಲಿ ಕೆಲಸಗಾರರು’ ಎಂದು ತಿಳಿಸಿದರು.

‘ಜೀಪಿನಲ್ಲಿದ್ದ ಬಾಲಕಿಯನ್ನು ಆರೋಪಿಗಳು ಕಿಚಾಯಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ(ಪೊಕ್ಸೊ) ಸಹಿತ ಇತರ ಪ್ರಕರಣಗಳನ್ನು ದಾಖಲಾಗಿದೆ. ಮದ್ಯ ಸೇವಿಸಿದ ಅಮಲಿನಲ್ಲಿ ಕೃತ್ಯ ಎಸಗಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದರು. ‘ಸಮಾಜಘಾತುಕ ಚಟುವಟಿಕೆಗಳು ಕಂಡುಬಂದರೆ ಸಾರ್ವಜನಿಕರು ತಕ್ಷಣವೇ ತಕ್ಷಣವೇ 112ಗೆ ಕರೆ ಮಾಡಿ ತಿಳಿಸಬಹುದು. 9480805100 (ಕಂಟ್ರೋಲ್‌ ರೂಂ) ಸಂಖ್ಯೆಗೆ ವ್ಯಾಟ್ಸ್‌ ಅಪ್‌ನಲ್ಲಿ ಫೋಟೊ ವಿವರ ಹಾಕಬಹುದು, ಕರೆ ಮಾಡಿಯೂ ಮಾಹಿತಿ ನೀಡಬಹುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.