ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಗ್ನಿಪಥ್’ ವಿರೋಧಿಸಿ ಕೊಪ್ಪದಲ್ಲಿ ಕಾಂಗ್ರೆಸ್ ಪ್ರತಿಭಟನೆ

Last Updated 27 ಜೂನ್ 2022, 13:45 IST
ಅಕ್ಷರ ಗಾತ್ರ

‌ಕೊಪ್ಪ: ‘ಅಗ್ನಿಪಥ್ ಯೋಜನೆ ಜಾರಿಗೆ ತಂದು ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ, ಬಿಜೆಪಿಯವರಿಗೆ ಓದು ಮತ್ತು ವಿವೇಕ ಎರಡು ಭಾರಿ ದೂರವಿದೆ’ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರೂ ಆದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿ ಆರೋಪಿಸಿದರು.

ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಅಗ್ನಿಪಥ್ ಯೋಜನೆ ವಿರೋಧಿಸಿ ಧರಣಿ ಸತ್ಯಾಗ್ರಹ’ದಲ್ಲಿ ಅವರು ಮಾತನಾಡಿ, ‘ಗಾಂಧಿ ಮತ್ತು ಅಂಬೇಡ್ಕರ್‌ ಅವರ ಚಿಂತನೆಯನ್ನು ನಾಶ ಮಾಡುವ ಮತ್ತೊಂದು ಯೋಜನೆಯೇ ಅಗ್ನಿಪಥ್ ಆಗಿದೆ’ ಎಂದು ಆರೋಪಿದರು.

‘ಆರ್.ಎಸ್.ಎಸ್ ಹಾಗೂ ಬಿಜೆಪಿ ಕಚೇರಿ ಕಾಯಲು ನಮ್ಮ ಯುವಕರ ವಿದ್ಯಾಭ್ಯಾಸ ಮೊಟಕು ಮಾಡಬೇಡಿ. ಸಿ.ಟಿ.ರವಿ ಅವರು ಅಗ್ನಿಪಥ್ ಕುರಿತು ಸೇನೆಗೆ ನವಚೈತನ್ಯ ಎಂದು ಹೇಳಿದ್ದಾರೆ. ಬಿಜೆಪಿಯವರು ದೆಹಲಿಯಲ್ಲಿ ₹ 500 ಕೋಟಿ ಖರ್ಚು ಮಾಡಿ ಪಕ್ಷದ ಕಚೇರಿ ಸ್ಥಾಪನೆ ಮಾಡಿದ್ದಾರೆ. ಯುವಕರಿಗೆ ಹಲಾಲ್, ಜಟ್ಕಾ, ಹಿಜಾಬ್, ಶಾಲು ಕೊಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಬಿಜೆಪಿಗರು ಭ್ರಷ್ಟಾಚಾರದ ಬಗ್ಗೆ ಪ್ರತಿಭಟನೆಗೆ ಸಿದ್ಧವಾಗಿದ್ದಾರೆ. ಆದರೆ, ಕ್ಷೇತ್ರದ ಮೂರು ತಾಲ್ಲೂಕು ಕಚೇರಿಯಲ್ಲಿ ಜೀವರಾಜ್ ಅವರಿಗೆ ಕಮಿಷನ್ ಎಷ್ಟು ಹೋಗಿದೆ ಎಂಬುದರ ಬಗ್ಗೆಯೂ ಚರ್ಚೆ ನಡೆಯಬೇಕು’ ಎಂದು ಹೇಳಿದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯಿಂದ ಯುವಕರಿಗೆ ಮಂಕುಬೂದಿ ಎರಚುವ ಕೆಲಸಮಾಡಿದೆ ಹೊರತು, ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ. ಇದೊಂದು ಚುನಾವಣೆಯ ಗಿಮಿಕ್ ಆಗಿದೆ. ಅರಾಜಕತೆಯನ್ನು ಸೃಷ್ಟಿಸುವ ಯೋಜನೆಯನ್ನೇ ಬಿಜೆಪಿ ಜಾರಿಗೆ ತರುತ್ತಿದೆ’ ಎಂದು ಆರೋಪಿಸಿದರು.

‘ಕ್ಷೇತ್ರದಲ್ಲಿ ಆಯಕಟ್ಟಿನ ಜಾಗಗಳಿಗೆ ಜೀವರಾಜ್ ಅವರು ಅಧಿಕಾರಿಗಳನ್ನು ಹಾಕಿಸಿಕೊಂಡು ಬಂದಿದ್ದರು. ಅಂತಹ ಅಧಿಕಾರಿಗಳು ಭ್ರಷ್ಟಾಚಾರ ಎಸಗಿ ಜೈಲಿಗೆ ಹೋದವರು. ಶೃಂಗೇರಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಅಧ್ಯಕ್ಷೆಯೊಬ್ಬರ ಪತಿ ಜೈಲಿಗೆ ಹೋಗಿ ಬಂದಿದ್ದಾರೆ. ಕ್ಷೇತ್ರದ ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಜೀವರಾಜ್ ಕಾರಣ’ ಎಂದು ಆರೋಪಿಸಿದರು.

ಕಾಂಗ್ರೆಸ್ ವೀಕ್ಷಕ ಉಸ್ತುವಾರಿ ಪದ್ಮಪ್ರಸಾದ್ ಜೈನ್, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ.ಸತೀಶ್, ಬ್ಲಾಕ್ ಕಾಂಗ್ರೆಸ್ ವಕ್ತಾರ ಎಚ್.ಶಶಿಕುಮಾರ್, ಹರೀಶ್ ಭಂಡಾರಿ, ಎಚ್.ಎಂ.ನಟರಾಜ್, ಎ.ಎಸ್.ನಾಗೇಶ್, ಎಚ್.ದಿನೇಶ್, ಸಿ.ಕೆ.ಮಾಲತಿ, ಆನಂದ್, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ಇನೇಶ್, ನುಗ್ಗಿ ಮಂಜುನಾಥ್, ಬರ್ಕತ್ ಅಲಿ, ಶಿವಶಂಕರ್, ಸತೀಶ್ ಅಬ್ಬಿಗದ್ದೆ, ಪಟ್ಟಣ ಪಂಚಾಯಿತಿ ಸದಸ್ಯರಾದ ಮೈತ್ರಾ, ರಶೀದ್, ವಿಜಯಕುಮಾರ್, ಶೃಂಕೋನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಎನ್.ಕೆ.ವಿಜಯ್ ಪ್ರಮುಖರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT