ಬುಧವಾರ, ಸೆಪ್ಟೆಂಬರ್ 23, 2020
20 °C
ವಿಜ್ಞಾನಿಗಳು– ರೈತರ ಸಂವಾದ: ಕೃಷಿ ಇಲಾಖೆ ಉಪ ನಿರ್ದೇಶಕ ಲೋಕೇಶ್ ಹೇಳಿಕೆ

ಶೂನ್ಯ ಬಂಡವಾಳದಲ್ಲಿ ಕೃಷಿ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಳಸ: ‘ದೇಶದಲ್ಲಿ ಶೇ 75ರಷ್ಟು ಜನರು ಹಿಂದೆ ಕೃಷಿಯ ಮೇಲೆ ಅವಲಂಬಿತರಾಗಿದ್ದರು. ಆದರೆ, ಈಗ ಕೃಷಿ ಲಾಭದಾಯಕವಲ್ಲ ಎಂದು ಜನರು ನಗರಗಳತ್ತ ವಲಸೆ ಹೋಗುತ್ತಿದ್ದಾರೆ. ಇದೀಗ ಶೂನ್ಯ ಬಂಡವಾಳದ ಕೃಷಿ ಪದ್ಧತಿಯ ಬಗ್ಗೆ ಪ್ರತಿ ತಾಲ್ಲೂಕಿನಲ್ಲಿ 100 ಎಕರೆಯಲ್ಲಿ ಪ್ರಯೋಗ ಮಾಡಲಾಗುತ್ತಿದೆ’ ಎಂದು ಕೃಷಿ ಇಲಾಖೆಯ ಉಪ ನಿರ್ದೇಶಕ ಲೋಕೇಶ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ನಡೆದ ವಿಜ್ಞಾನಿಗಳೊಂದಿಗಿನ ರೈತರ ಸಂವಾದದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕೃಷಿಕರಿಗೆ ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡ, ಸ್ಪ್ರಿಂಕ್ಲರ್, ಡೀಸೆಲ್ ಪಂಪ್‍ಸೆಟ್ ಕೊಳ್ಳಲು ಸಹಾಯಧನ ಲಭ್ಯವಿದೆ ಎಂದೂ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಆರ್.ಪ್ರಭಾಕರ್ ಸಂವಾದ ಉದ್ಘಾಟಿಸಿದರು. ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರಜ್ಞ ಡಾ.ಗಿರೀಶ್ ಕಾಳುಮೆಣಸು, ಅಡಿಕೆ, ಭತ್ತದ ಬೆಳೆಗಳಿಗೆ ಪೋಷಕಾಂಶ ನಿರ್ವಹಣೆ ಮತ್ತು ಕೀಟ ರೋಗ ಬಾಧೆ ನಿರ್ವಹಣೆ ಬಗ್ಗೆ ಉಪನ್ಯಾಸ ನೀಡಿದರು.

ಹಂದಿಗೋಡು ರಾಮಚಂದ್ರಯ್ಯ ತಮ್ಮ ಅಡಿಕೆ ತೋಟಕ್ಕೆ ಹಳದಿ ರೋಗ ಬಾಧಿಸಿರುವ ಬಗ್ಗೆ ವಿಜ್ಞಾನಿಯ ಸಲಹೆ ಬಯಸಿದರು. ಹಳದಿ ಎಲೆ ರೋಗ ಮತ್ತು ಬೇರುರೋಗಕ್ಕೆ ಅನೇಕ ಔಷಧಿ ಮತ್ತು ಜೈವಿಕ ಕ್ರಮಗಳನ್ನು ವಿವರಿಸಿದ ಡಾ.ಗಿರೀಶ್, ಈವರೆಗೂ ಈ ಎರಡೂ ರೋಗಗಳನ್ನು ಸಂಪೂರ್ಣವಾಗಿ ಗುಣಪಡಿಸಿದ ಉದಾಹರಣೆ ಕಡಿಮೆ ಎಂದು ಒಪ್ಪಿಕೊಂಡರು.

ತೆಕ್ಕನ್ ಕಾಳುಮೆಣಸಿನ ತಳಿಯ ಬಗ್ಗೆ ಮಹೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಾ.ಗಿರೀಶ್, ಸದ್ಯಕ್ಕೆ ಉತ್ತಮ ಫಸಲು ನೀಡುತ್ತಿರುವ ಆ ತಳಿಯ ಲಭ್ಯತೆ ಮತ್ತು ಎಷ್ಟು ಕಾಲ ಇದು ಉತ್ತಮ ಫಸಲು ನೀಡಬಹುದು ಎಂಬ ಅಂಶದಲ್ಲಿ ಅನಿಶ್ಚಿತತೆ ಇದೆ ಎಂದರು.

ನರ್ಸರಿ ಗಿಡಗಳನ್ನು ತಯಾರು ಮಾಡುವ ಹಂತದಲ್ಲೇ ಮಣ್ಣಿನಲ್ಲಿ ಟ್ರೈಕೋಡರ್ಮಾದಂತಹ ಜೀವಾಣು ಸೇರಿಸುವುದು ಉತ್ತಮ ಫಲ ನೀಡುತ್ತದೆ ಎಂದು ತಿಳಿಸಿದರು. ಗದ್ದೆಯಲ್ಲಿ ತೋಟ ಮಾಡಿರುವಲ್ಲಿ ಕಾಳುಮೆಣಸಿನ ಬಳ್ಳಿಗಳ ಬುಡಕ್ಕೆ 4x4 ಅಳತೆಯ ಮಲ್ಚಿಂಗ್ ಪ್ಲಾಸ್ಟಿಕ್ ಶೀಟ್ ಬಳಸಿ ಬಳ್ಳಿಗೆ ಮಳೆಗಾಲದಲ್ಲಿ ಹಾನಿ ಆಗದಂತೆ ತಡೆಯಬಹುದಾಗಿದೆ ಎಂದರು.

ತೋಟಗಳಿಗೆ ಸುಣ್ಣದ ಬಳಕೆಯ ಮಹತ್ವದ ಬಗ್ಗೆ ತಿಳಿಸಿದ ಅವರು, ಕಾಳುಮೆಣಸಿನ ಬಳ್ಳಿಗಳಿಗೆ ವರ್ಷಕ್ಕೆ ಎರಡು ಬಾರಿ ಮಳೆಗಾಲದ ಆರಂಭಕ್ಕೆ ಮುನ್ನ ಮತ್ತು ಮಳೆಗಾಲದ ನಂತರ ಎಲೆಗಳಿಗೆ ರಸಗೊಬ್ಬರದ ದ್ರಾವಣ ಸಿಂಪಡಿಸುವುದನ್ನು ತಪ್ಪಿಸಬಾರದು ಎಂದು ವಿವರಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕುಮುದ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಫೀಕ್, ರಾಜೇಂದ್ರ ಪ್ರಸಾದ್, ಮೀನಾಕ್ಷಿ, ಕೃಷಿಕ ಸಮಾಜದ ಅಧ್ಯಕ್ಷ ನಾಗೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.