ಸೋಮವಾರ, ಜನವರಿ 24, 2022
20 °C
12 ಎಕರೆ ಜಮೀನಿನಲ್ಲಿ ಮಿಶ್ರ ಬೆಳೆ– ಕೈಹಿಡಿದ ಕಾರ್ನಿಷಿಯಾ ಹೂವು ಕೃಷಿ

ಬ್ಯಾಂಕ್ ನಿವೃತ್ತ ಅಧಿಕಾರಿಯ ಕೃಷಿ ಪ್ರೀತಿ

ಬಾಲು ಮಚ್ಚೇರಿ Updated:

ಅಕ್ಷರ ಗಾತ್ರ : | |

Prajavani

ಕಡೂರು: ‘ಕೃಷಿಯಲ್ಲಿ ನೆಮ್ಮದಿ ಮತ್ತು ಲಾಭ ಎರಡೂ ಇದೆ. ಆದರೆ, ಅದಕ್ಕೆ ಬೇಕಿರುವುದು ಆಸಕ್ತಿ ಮತ್ತು ಬದ್ಧತೆ’ ಎನ್ನುತ್ತಾರೆ ಪ್ರಗತಿಪರ ಕೃಷಿಕ ಬಿ.ಎಸ್. ಸ್ವಾಮಿ.

ಬೀರೂರಿನ ಬಿ.ಎಸ್.ಸ್ವಾಮಿ ಅವರು ಕೆನರಾ ಬ್ಯಾಂಕ್‌ ನಲ್ಲಿ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿ ದವರು. ಸದಾ ಚಟುವಟಿಕೆಯಿಂದ ಇದ್ದವರಿಗೆ ಎದುರಾದ ಏಕತಾನತೆ ಹೋಗಲಾಡಿಸಲು ಏನು ಮಾಡಬೇಕೆಂದು ಯೋಚಿಸಿದಾಗ ಅವರು ಆಯ್ಕೆ ಮಾಡಿಕೊಂಡಿದ್ದು ಕೃಷಿ ಕಾಯಕ. ಬಾಲ್ಯದಿಂದಲೂ ಕೃಷಿ ಬಗ್ಗೆ ಆಸಕ್ತಿ ಹೊಂದಿದ್ದ ಸ್ವಾಮಿ ಅವರು ಕಡೂರಿನ ಬಳಿಯ ಉಳಿನಾಗರಿನ ಹತ್ತಿರದಲ್ಲಿ 12 ಎಕರೆ ಜಮೀನಿನಲ್ಲಿ ಕೃಷಿ ಕಾಯಕಕ್ಕೆ ತೊಡಗಿದರು. ಒಂದೇ ಬೆಳೆಗೆ ಜೋತು ಬೀಳದೆ ವಿವಿಧ ಬಗೆಯ ಬೆಳೆಯತ್ತ ಗಮನ ಹರಿಸಿ ಪ್ರಯತ್ನ ಆರಂಭಿಸಿದರು. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಪ್ರಸ್ತುತ ಅವರ ಜಮೀನಿನಲ್ಲಿ 1,200 ಅಡಿಕೆ ಗಿಡಗಳಿವೆ‌. ಅದರ ಸುತ್ತ ಸುಮಾರು 50 ತೆಂಗಿನ ಗಿಡಗಳಿವೆ. ಒಂದು ಎಕರೆಯಲ್ಲಿ ದಾಳಿಂಬೆ ಬೆಳೆಯಲಾಗಿದೆ. ಅರ್ಧ ಎಕರೆ ವಿಸ್ತೀರ್ಣದಲ್ಲಿ ಪಾಲಿಹೌಸ್ ಮಾಡಿ ಅದರಲ್ಲಿ ಕಾರ್ನಿಷಿಯಾ ಹೂವು ಬೆಳೆದಿದ್ದಾರೆ. ಅದಕ್ಕೆ ಸದಾ ಕಾಲವೂ ಬೇಡಿಕೆ. ಹೂವುಗಳನ್ನು ಬೆಂಗಳೂರಿಗೆ ಮಾರಾಟ ಮಾಡುತ್ತಾರೆ.

ನೀರಿಗಾಗಿ ಕೊಳವೆಬಾವಿ ಇದೆ. ಅದರ ಜೊತೆ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ 52 ಮೀಟರ್ ಅಗಲ ಮತ್ತು ಉದ್ದವಿರುವ ಹಾಗೂ 4.5 ಮೀಟರ್ ಆಳವಿರುವ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಎಲ್ಲದಕ್ಕೂ ಹನಿನೀರಾವರಿ ಮತ್ತು ತುಂತುರು ನೀರಾವರಿ ವ್ಯವಸ್ಥೆ ಕಲ್ಪಿಸಿದ್ದಾರೆ. ಕೃಷಿಹೊಂಡಕ್ಕೆ ನೀಲಿ ಟಾರ್ಪಾಲ್ ಅಳವಡಿಸಿ ಅದರಲ್ಲಿ ಮೀನು ಸಾಕಣೆ ಮಾಡಿದ್ದಾರೆ. ಜೊತೆಗೆ 14 ಹಸುಗಳನ್ನು ಸಾಕಿದ್ದು, ಹಾಲಿನಿಂದಲೂ ಆದಾಯ ಗಳಿಸುತ್ತಾರೆ. ಸಗಣಿ ಗೊಬ್ಬರವನ್ನು ತೋಟಕ್ಕೆ ಉಪಯೋಗಿಸುತ್ತಾರೆ. ಮೆಕ್ಕೆ ಜೋಳ, ರಾಗಿ ಬೆಳೆಯುತ್ತಾರೆ. ಈ ಎಲ್ಲ ಕಾರ್ಯಗಳಲ್ಲಿ ಸ್ವಾಮಿ ಅವರಿಗೆ ಪತ್ನಿ ಮಂಜುಳಾ ಸಾಥ್‌ ನೀಡುತ್ತಿದ್ದಾರೆ.

ಕೃಷಿಯಲ್ಲಿ ನೈಜ ಆಸಕ್ತಿಯಿದ್ದರೆ ಯಶಸ್ಸು ಗಳಿಸಬಹುದು. ಆದರೆ, ಏಕ ಬೆಳೆಗೆ ಜೋತು ಬೀಳುವುದಕ್ಕಿಂತ ಮಿಶ್ರಬೆಳೆ ಪದ್ಧತಿಯಲ್ಲಿ ಹೆಚ್ಚಿನ ಲಾಭವಿದೆ. ಕೃಷಿಯೆಡೆಗಿನ ಪ್ರೀತಿಯ ಜೊತೆ ಬದ್ಧತೆ, ಅಧ್ಯಯನ ಹಾಗೂ ಪ್ರಯೋಗಶೀಲತೆ ಯಶಸ್ಸಿಗೆ ರಹದಾರಿ ಎನ್ನುವ ಸ್ವಾಮಿ, ಕೃಷಿಯಲ್ಲಿ ಲಾಭವಿಲ್ಲ ಎನ್ನುವವರಿಗೆ ಮಾದರಿಯಾಗಿದ್ದಾರೆ.

ಕಡೂರು– ಬೀರೂರು ನಡುವೆ ಉಳಿನಾಗರು ಬಳಿಯಿರುವ ಸ್ವಾಮಿಯವರ ತೋಟಕ್ಕೆ ಆಸಕ್ತರು ಭೇಟಿ ನೀಡುತ್ತಾರೆ. ಕೃಷಿ ಬಗ್ಗೆ ಪ್ರೀತಿ ಇರುವವರಿಗೆ ಮಾರ್ಗದರ್ಶನ ನೀಡುವ ಹುಮ್ಮಸ್ಸು ಅವರಲ್ಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು