ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ವರ್ಷದ ಆದಾಯಕ್ಕೆ ಕತ್ತರಿ

Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಅಜ್ಜಂಪುರ: ಕೊರೊನಾ ತಲ್ಲಣ ತಾಲ್ಲೂಕಿನ ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಅಡ್ಡಿಯಾಗಿರುವ ಲಾಕ್‌ಡೌನ್, ರೈತರ ಆದಾಯಕ್ಕೆ ಕತ್ತರಿ ಹಾಕಿದೆ.

ತಾಲ್ಲೂಕಿನ ಪ್ರಮುಖ ಹಿಂಗಾರು ಬೆಳೆ ಕಡಲೆಕಾಳು. ಈಗಾಗಲೇ ಸುಗ್ಗಿ ಮುಗಿದು, ಸ್ವಚ್ಛಗೊಳಿಸಿದ ಕಡಲೆ ಕಾಳನ್ನು ಮನೆಯಲ್ಲಿ ಸಂಗ್ರಹಿಸಿದ್ದಾರೆ. ಮಾರುಕಟ್ಟೆಗೆ ಸಿದ್ಧಗೊಳಿಸಿದ್ದಾರೆ. ಆದರೆ, ಲಾಕ್‌ಡೌನ್‌ನಿಂದಾಗಿ ಪೊಲೀಸರ ಭಯದಿಂದಾಗಿ ಮಾರುಕಟ್ಟೆಗೆ ಸಾಗಿಸಲು ಹಿಂದೇಟು ಹಾಕುತ್ತಿದ್ದಾರೆ.

‘ಹಿಂಗಾರಿನ ಕಡಲೆಕಾಳಿನ ಆದಾಯಕ್ಕೆ ಎದುರು ನೋಡುತ್ತಿದ್ದೇವೆ. ಲಾಕ್‌ಡೌನ್ ಜಾರಿ ಹಿನ್ನೆಲೆ ಕಾಳು ಖರೀದಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ನಾವೇ ಮಾರುಕಟ್ಟೆಗೆ ಕೊಂಡೊಯ್ಯಲು ಭಯ ಕಾಡಿದೆ. ಇನ್ನು ಅಲ್ಲಿಯೂ ಗ್ರಾಹಕರ ಸಂಖ್ಯೆ ಕ್ಷೀಣಿಸಿದ್ದು, ಕಡಿಮೆ ದರಕ್ಕೆ ಕೇಳುತ್ತಾರೆ. ಹಾಗಾಗಿ, ಸ್ವಲ್ಪ ದಿನಗಳವರೆಗೆ ಕಾಳು ಸಂಗ್ರಹಿಸಿಡಲು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ಗೌರಾಪುರದ ರೈತ ಪ್ರಶಾಂತ್.

‘ಲಾಕ್‌ಡೌನ್‌ನಿಂದ ಕಡಲೆಕಾಳು ಮಾರಾಟ ಆಗಿಲ್ಲ. ಆದಾಯವೂ ಸಿಕ್ಕಿಲ್ಲ. ಇದು, ಮುಂಗಾರು ಬಿತ್ತನೆ ಪೂರ್ವದಲ್ಲಿ ಕೈಗೊಳ್ಳುವ ಹೊಲ ಹಸನಿಗೆ ಹಿನ್ನಡೆ ಉಂಟುಮಾಡಿದೆ. ಹಣದ ಕೊರತೆಯಿಂದ ಈರುಳ್ಳಿ ಬಿತ್ತನೆ ಬೀಜ, ಗೊಬ್ಬರ ಸಂಗ್ರಹಿಸಲು ಸಾಧ್ಯವಾಗಿಲ್ಲ’ ಎಂದು ಅಜ್ಜಂಪುರದ ಕೃಷಿಕ ತಿಮ್ಮಪ್ಪ ಹೇಳುತ್ತಾರೆ.

‘ಟೊಮೊಟೊ ಬೆಳೆದಿದ್ದೇವೆ. ಸ್ಥಳಕ್ಕೆ ಬಂದು ಖರೀದಿಸುತ್ತಿದ್ದ ವ್ಯಾಪಾರಸ್ಥರು, ಲಾಕ್‌ಡೌನ್‌ನಿಂದ ಹತ್ತಿರ ಸುಳಿಯುತ್ತಿಲ್ಲ. ದೂರದ ಮಾರುಕಟ್ಟೆಗೆ ಕೊಂಡೊಯ್ಯಲು ನಮ್ಮಲ್ಲಿ ಟೊಮೊಟೊ ತುಂಬುವ ಹೆಚ್ಚಿನ ‘ಟ್ರೇ’ ಗಳಿಲ್ಲ. ಅನಿವಾರ್ಯವಾಗಿ ತಿಪ್ಪೆಗೆ ಸುರಿಯುವಂತಾಗಿದೆ’ ಎಂದು ತಲಾ ಒಂದು ಎಕರೆಯಲ್ಲಿ ಟೊಮೊಟೊ ಬೆಳೆದಿರುವ ಎಂ.ಹೊಸಹಳ್ಳಿಯ ಪ್ರವೀಣ್ ಮತ್ತು ಆಸಂದಿಯ ರಾಮಪ್ಪ ಅಳಲು ತೋಡಿಕೊಂಡರು.

ವ್ಯಾಪಾರಸ್ಥರ ಕೊರತೆಯಿಂದ ಅಲ್ಲಲ್ಲಿ ಸಾಂಬಾರು ಸೌತೆ, ಕಲ್ಲಂಗಡಿ ಬೆಳೆದಿರುವ ರೈತರು ಹೊಲದಲ್ಲಿಯೇ ಬೆಳೆ ಬಿಟ್ಟಿದ್ದಾರೆ. ಹಣ್ಣಿನ ಅಂಗಡಿ ತೆರೆದಿದ್ದರೂ ಗ್ರಾಹಕರ ಕೊರತೆಯಿಂದ ಬಾಳೆಹಣ್ಣಿನ ಮಾರಾಟವೂ ತಗ್ಗಿದ್ದು, ಬಾಳೆಯನ್ನು ಕೇಳುವವರು ಇಲ್ಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT