ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಾಡಿ ದನಗಳಿಗೆ ಆಹಾರವಾದ ಟೊಮೊಟೊ

ಕೊರೊನಾ ತಲ್ಲಣ: ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ
Last Updated 31 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಕಡೂರು: ಕೊರೊನಾ ತಲ್ಲಣವು ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಒಂದೆಡೆ ಈಗಾಗಲೇ ಬೆಳೆದ ಅಲ್ಪಾವಧಿ ತರಕಾರಿ ಬೆಳೆ ಕೊಯ್ಲು ಮಾಡಲು ಕಾರ್ಮಿಕರ ಕೊರತೆ, ಕೊಯ್ಲು ಮಾಡಿದರೂ ಸಾಗಾಣಿಕೆಯ ಚಿಂತೆ ಬೆಳೆಗಾರರನ್ನು ಕಾಡುತ್ತಿದೆ. ಮುಂಗಾರು ಆರಂಭಕ್ಕೆ ಮುನ್ನ ಹೊಲ ಉಳುಮೆಗೂ ತೊಂದರೆ... ಹೀಗೆ ತೊಂದರೆಗಳ ಸಾಲಿನಿಂದ ರೈತರು ಅಕ್ಷರಶಃ ಕಂಗೆಟ್ಟಿದ್ದು, ಕೃಷಿ ಚಟುವಟಿಕೆ ತೀವ್ರ ಕುಂಠಿತವಾಗಿದೆ.

ಡಿಸೆಂಬರ್ ಅಂತ್ಯದ ವೇಳೆಗೆ ನಾಟಿ ಮಾಡಿದ್ದ ಟೊಮೊಟೊ ಬೆಳೆಗೆ ಈಗ ಕೊಯ್ಲಿನ ಕಾಲ. ಇದೀಗ ಲಾಕ್‌ಡೌನ್‌ ಇರುವುದರಿಂದ ಟೊಮೆಟೊ ಬೆಳೆದ ರೈತರಿಗೆ ಕೈಗೆ ಬಂದದ್ದು ಬಾಯಿಗೆ ಬಾರದಂತಾಗಿದೆ.

ಟೊಮೆಟೊ ಬೆಳೆದ ರೈತರು ಕಡೂರು ಎಪಿಎಂಸಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಟೊಮೊಟೊ 12 ಕೆ.ಜಿ. ಕ್ರೇಟ್ ಒಂದಕ್ಕೆ ₹ 55 ರಿಂದ ₹ 60ಕ್ಕೆ ಹರಾಜಾಗಿದೆ. 30 ಕ್ರೇಟ್ ತಂದ ರೈತನಿಗೆ ಸಿಕ್ಕಿದ್ದು ₹ 1,800 ಮಾತ್ರ. ಮಾರುಕಟ್ಟೆಗೆ ತಂದ ಕೂಲಿಯೂ ಸಿಗಲಿಲ್ಲ. ಹೊರರಾಜ್ಯಗಳಿಗೆ ಹಣ್ಣು ಕಳುಹಿಸಲು ಸಾಧ್ಯವಾಗದಿರುವುದು ಇದಕ್ಕೆ ಕಾರಣ. ಕಂಗೆಟ್ಟ ರೈತರು ಸುಮಾರು 500 ಕ್ರೇಟ್ ಟೊಮೊಟೊ ಹಣ್ಣನ್ನು ನೆಲಕ್ಕೆ ಸುರಿದು ಹೋಗಿದ್ದಾರೆ. ಬಿಡಾಡಿ ದನಗಳು ಟೊಮೊಟೊ ತಿನ್ನುತ್ತಿರುವ ದೃಶ್ಯ ರೈತರ ಪರಿಸ್ಥಿತಿಯ ಕೈಗನ್ನಡಿಯಂತಿತ್ತು.

ಇನ್ನು ಸೊಪ್ಪು ಬೆಳೆದವರ ಕಥೆಯೂ ಇದಕ್ಕಿಂತ ಭಿನ್ನವಿಲ್ಲ. ಸಮೃದ್ಧವಾಗಿ ಬೆಳೆದ ಪಾಲಕ್, ದಂಟು, ಕೊತ್ತಂಬರಿ ಸೊಪ್ಪು ಕೊಯ್ಲಿಗೆ ಬಂದರೂ ಕೊಯ್ಯುವಂತಿಲ್ಲ. ಕಾರಣ ಮಾರುಕಟ್ಟೆಗೆ ಒಯ್ಯಲು ಸೌಕರ್ಯವಿಲ್ಲ.

ಇನ್ನೇನು ಮುಂಗಾರು ಹತ್ತಿರವಾಗುತ್ತಲಿದೆ. ಹೊಲಗಳು ಹಸನಾಗಬೇಕು. ಮುಂಗಾರು ಮಳೆ ಬಂದ ಕೂಡಲೇ ಹತ್ತಿ, ಈರುಳ್ಳಿ ಬಿತ್ತನೆಯಾಗಬೇಕು. ಟ್ರ್ಯಾಕ್ಟರ್‌ನಲ್ಲಿ ಉಳುಮೆ ಮಾಡಲು ಹೆಚ್ಚು ಹಣ ತೆರಬೇಕು. ಕೊರೊನಾ ವೈರಸ್ ಭೀತಿ ರೈತರನ್ನೂ ಆವರಿಸಿ ಬಾಡಿಗೆ ಬೇಸಾಯಕ್ಕೆ ಯಾರೂ ಹೋಗುತ್ತಿಲ್ಲ. ಹೊಲಗಳಿಗೆ ಹೋಗುವುದನ್ನೂ ಕಡಿಮೆ ಮಾಡಿದ್ದಾರೆ. ಒಟ್ಟಾರೆ, ತಾಲ್ಲೂಕಿನ ಕೃಷಿ ಬದುಕಿನ ಮೇಲೆ ಕೊರೊನಾ ತೀವ್ರ ವ್ಯತಿರಿಕ್ತ ಪರಿಣಾಮವುಂಟು ಮಾಡಿದೆ.

‘ಟೊಮೊಟೊ ಬೆಳೆಯಲು ಮಾಡಿದ ಖರ್ಚು ಸಿಗುವುದಿಲ್ಲ. ಎದೆ ಗಟ್ಟಿ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ ಮಚ್ಚೇರಿಯ ರೈತ ಎಂ.ಎಚ್. ಪರಮೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT