ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹವಾಗಿ ಬಡಾವಣೆ ನಿವಾಸಿಗಳಿಗೆ ತೊಂದರೆ: ದೂರು

ಚಿಕ್ಕಾನವಂಗಲ: ನಿರ್ಮಾಣಗೊಳ್ಳದ ಕಾಲುವೆ
Last Updated 16 ಜುಲೈ 2022, 4:01 IST
ಅಕ್ಷರ ಗಾತ್ರ

ಅಜ್ಜಂಪುರ: ಸೂಕ್ತ ಕಾಲುವೆ ವ್ಯವಸ್ಥೆಯಿಲ್ಲದೆ ಮನೆಗಳ ಆಸುಪಾಸಿನಲ್ಲಿಯೇ ಮಳೆ ನೀರು ಸಂಗ್ರಹಗೊಂಡು ತಾಲ್ಲೂಕಿನ ಚಿಕ್ಕಾನವಂಗಲ ಗ್ರಾಮದ ದೇವರಾಜ ಅರಸು ಬಡಾವಣೆಯ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ದೇವರಾಜ ಅರಸು ಬಡಾವಣೆಯಲ್ಲಿ ಸುಮಾರು 100 ಮನೆಗಳಿವೆ. ಮಳೆಗಾಲದಲ್ಲಿ ಇವುಗಳಲ್ಲಿನ 15 ಮನೆ ಆಸುಪಾಸಿನಲ್ಲಿ ನೀರು ನಿಲ್ಲುತ್ತಿದೆ. ಇದು, ಮನೆಯಿಂದ ಹೊರಹೋಗಲು ಮತ್ತು ಹಿಂತಿರುಗಲು ಮಕ್ಕಳು, ವೃದ್ಧರಿಗೆ ತೊಂದರೆ ಉಂಟುಮಾಡಿದೆ. ಜತೆಗೆ ನಿಂತ ನೀರು ಮನೆಗೋಡೆಗಳನ್ನು ಶಿಥಿಲಗೊಳಿಸುತ್ತಿದೆ.

‘ಬಡಾವಣೆಯಲ್ಲಿ ಬಡವರೇ ಹೆಚ್ಚಾಗಿದ್ದೇವೆ. ಅಧಿಕ ಮಂದಿ ಕೂಲಿಕಾರ್ಮಿಕರು. ಗರ್ಭಿಣಿಯರು, ಬಾಣಂತಿಯರು, ಚಿಕ್ಕ ಮಕ್ಕಳಿದ್ದಾರೆ. ಮನೆಯಂಗಳದಲ್ಲಿ ನಿಂತ ಮಳೆ ನೀರು, ಶೀತಾಂಶ ಹೆಚ್ಚಿಸಿದ್ದೂ ಅಲ್ಲದೆ ಸೊಳ್ಳೆ ಹಾವಳಿಯನ್ನು ಅಧಿಕಗೊಳಿಸಿದೆ. ಈ ಅಹಿತ ವಾತಾವರಣ, ಕೆಲವರನ್ನು ಕಾಯಿಲೆಯಿಂದ ನರಳುವಂತೆ ಮಾಡಿದೆ’ ಎಂದು ದೇವರಾಜ ಅರಸು ವಿಚಾರ ವೇದಿಕೆ ಮುಖಂಡ ಚಿಕ್ಕಾನವಂಗಲ ಬಸವರಾಜು ವಿವರಿಸುತ್ತಾರೆ.

‘ಮನೆ ತ್ಯಾಜ್ಯ ನೀರು ಹರಿಯಲು ಚರಂಡಿಯಿದೆ. ಆದರೆ, ಮಳೆಯ ಹೆಚ್ಚಿನ ನೀರು ಹರಿದು ಹೊರ ಹೋಗಲು ಕಾಲುವೆ ವ್ಯವಸ್ಥೆಯಿಲ್ಲ. ಇದರಿಂದ ಪ್ರತೀ ಮಳೆಗಾಲದಲ್ಲಿ ಸಮಸ್ಯೆ ಅನುಭವಿಸುವಂತಾಗಿದೆ’ ಎಂದು ಅಳಲು ತೋಡಿಕೊಳ್ಳುತ್ತಾರೆ ನಿವಾಸಿ ಚಂದ್ರಮ್ಮ.

‘ಸಮಸ್ಯೆಯನ್ನು ಪಂಚಾಯಿತಿ ಗಮನಕ್ಕೆ ತಂದಿದ್ದೇವೆ. ಮಳೆನೀರು ಹರಿಯಲು ಕಾಲುವೆ ನಿರ್ಮಿಸುವಂತೆ ತಾಲ್ಲೂಕು ಪಂಚಾಯಿತಿ ಮತ್ತು ಕಚೇರಿಗೂ ಮನವಿ ಸಲ್ಲಿಸಿದ್ದೇವೆ . ಇಒ ಮತ್ತು ತಹಶೀಲ್ದಾರ್ ಒಮ್ಮೆ ಭೇಟಿ ನೀಡಿದ್ದಾರೆ. ಆದರೆ, ಮಳೆನೀರಿಗೆ ಸೂಕ್ತ ವ್ಯವಸ್ಥೆ ಆಗಿಲ್ಲ’ ಎಂದು ಪಂಚಾಯಿತಿ ಮಾಜಿ ಸದಸ್ಯ ನಾಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಬಡಾವಣೆ ತಗ್ಗುಪ್ರದೇಶದಲ್ಲಿದೆ. ಜಮೀನುಗಳ ನೀರು ಬಡಾವಣೆಯಲ್ಲಿ ಸಂಗ್ರಹವಾಗಿ ಸಮಸ್ಯೆಯಾಗಿದೆ. ಪರಿಹಾರಕ್ಕೆ ಅಗತ್ಯ ಕಾಮಗಾರಿಗೆ ಶಾಸಕರು, ಅನುದಾನ ನೀಡಿ ಬಡಾವಣೆ ನಿವಾಸಿಗಳಿಗೆ ನೆರವಾಗಬೇಕು’ ಎಂದು ಪಂಚಾಯಿತಿ ಸದಸ್ಯೆ ಬಸಮ್ಮ ಮನವಿ ಮಾಡಿದ್ದಾರೆ.

ಜನರ ಆರೋಗ್ಯ ಮತ್ತು ಮನೆಗಳಿಗೂ ಅಪಾಯ ತಂದೊಡ್ಡುತ್ತಿರುವ ನೀರು ಹೊರಹರಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ನಿವಾಸಿಗಳ ಒಕ್ಕೊರಲ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT