ಶನಿವಾರ, ಆಗಸ್ಟ್ 13, 2022
26 °C
ಪರಿಸರ ಪ್ರಿಯರು, ಸಾರ್ವಜನಿಕರ ಆಕ್ರೋಶ

ಚಿಕ್ಕಮಗಳೂರು: ಅಮೃತ್ ಮಹಲ್ ಕೇಂದ್ರದಲ್ಲಿ ಮರಗಳ ಹನನ!

ಜೆ.ಒ.ಉಮೇಶ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಅಜ್ಜಂಪುರ: ಸಸ್ಯ ಕಾಶಿಯಂತಿದ್ದ ಪಟ್ಟಣದ ಅಮೃತ್ ಮಹಲ್ ಕೇಂದ್ರದಲ್ಲಿ ಮರಗಳ ಹನನ ಮುಂದುವರಿದಿದೆ. ಕೇಂದ್ರದ ಸನಿಹವೇ ಇದ್ದ ಕೆಲವು ಮರಗಳನ್ನು ಅಧಿಕಾರಿಗಳೇ ಮುಂದೆ ನಿಂತು ನೆಲಕ್ಕುರುಳಿಸಿದ್ದಾರೆ. ಇದು ಪರಿಸರ ಪ್ರಿಯರ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಅಮೃತ್ ಮಹಲ್ ಕೇಂದ್ರದ ಬಲಬದಿಯ ನೌಕರರ ವಸತಿಗೃಹದ ಪಕ್ಕದಲ್ಲಿದ್ದ 15-20 ವರ್ಷದ ಹತ್ತಾರು ಮರಗಳನ್ನು ಜೆಸಿಬಿ ಬಳಿಸಿ ಉರುಳಿಸಲಾಗಿದೆ. ಇನ್ನು ಹಲವಾರು ವರ್ಷ ಬದುಕಿ ಪ್ರಾಣಿ-ಪಕ್ಷಿಗಳಿಗೆ ಹಣ್ಣು, ಆಶ್ರಯ, ನೆರಳು, ಗಾಳಿ ಪೂರೈಸಲು ಶಕ್ತವಾಗಿದ್ದ ಮರಗಳು ಬಡಮೇಲಾಗಿವೆ. ಇದರಿಂದ ಕೇಂದ್ರದ ಹಸಿರು ವಾತಾವರಣಕ್ಕೆ ಧಕ್ಕೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅರಣ್ಯ ಇಲಾಖೆ ಅನುಮತಿ ಪಡೆಯದೇ ಮರ ತೆರವುಗೊಳಿಸಿರುವುದು ಅಪರಾಧ. ಅಕ್ರಮವಾಗಿ ಮರ ಮಾರಾಟಕ್ಕೆ ಅಧಿಕಾರಿಗಳು ಕೈಹಾಕಿರುವ ಶಂಕೆ ಇದೆ. ಈ ಬಗ್ಗೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ಗುರುಮೂರ್ತಿ ಒತ್ತಾಯಿಸಿದ್ದಾರೆ.

‘ಬೇವು, ಅರಳಿ, ಹುಣಸೆ, ಕರಿಜಾಲಿ ಮರಗಳಿಗೆ ಕೊಡಲಿಪೆಟ್ಟು ಬಿದ್ದಿರುವುದು ನೋವಿನ ಸಂಗತಿ. ಗಿಡ ನೆಟ್ಟು, ಪೋಷಿಸಿ ಮರವಾಗಿ ಬೆಳೆಸಬೇಕಾದ ಅಧಿಕಾರಿಗಳೇ ಬೆಳೆದು ನಿಂತ ಮರಗಳನ್ನು ಕಡಿಸಿರುವುದು- ರಕ್ಷಕರೇ ಭಕ್ಷಕರಾದಂತಾಗಿದೆ’ ಎಂದು ಚಿಂತನ ಫೌಂಡೇಶನ್ ನಿರ್ದೇಶಕ ಚನ್ನಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಗೋವಿನ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಸರ್ಕಾರಕ್ಕೆ ಅಮೃತ್ ಮಹಲ್ ರಕ್ಷಣೆ ಬೇಕಿಲ್ಲ. ಕೇಂದ್ರದ ಅಧಿಕಾರಿಗಳಿಗೆ ಇಚ್ಛಾಶಕ್ತಿ ಕೊರತೆಯಿದೆ. ಅವರು, ಅಮೃತ್ ಮಹಲ್ ಕೇಂದ್ರದ ಸಂಪೂರ್ಣ ಅವನತಿಗೆ ಅಗತ್ಯವಿರುವ ಎಲ್ಲಾ ಕೆಲಸ ಮಾಡುತ್ತಿದ್ದಾರೆ’ ಎಂದು ಅಮೃತ್ ಮಹಲ್ ಉಳಿಸಿ ಹೋರಾಟ ಸಮಿತಿ ಸಂಚಾಲಕ ಶಿವಾನಂದ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಕನಿಷ್ಠ 15 ಮರಗಳು ನೆಲಕ್ಕುರುಳಿದ್ದರೂ, ಕೇವಲ ಮೂರು ಮರ ಮಾತ್ರ ತೆರವುಗೊಳಿಸಲಾಗಿದೆ ಎಂಬ ಉಪನಿರ್ದೇಶರ ಹೇಳಿಕೆ ಸತ್ಯಕ್ಕೆ ದೂರವಾದುದು ಹಾಗೂ ದೋಷಪೂರಿತ’ ಎಂದು ಶಿವಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮರ ತೆರವಿಗೆ ಅಮೃತ್ ಮಹಲ್ ಕೇಂದ್ರದಿಂದ ಅರ್ಜಿ ಬಂದಿಲ್ಲ. ಇಲಾಖೆಯಿಂದ ಅನುಮತಿ ನೀಡಿಲ್ಲ. ಮರಗಳ ಹನನದ ಬಗ್ಗೆ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡಲು ಸಿಬ್ಬಂದಿಗೆ ಸೂಚಿಸಿದ್ದೇನೆ. ವರದಿಯನ್ವಯ ಕ್ರಮ ಜರುಗಿಸಲು ಹಿರಿಯ ಅಧಿಕಾರಿಗೆ ಮನವಿ ಮಾಡುವುದಾಗಿ ಅರಣ್ಯ ಇಲಾಖಾ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು