‘ಪರ್ಯಾಯ ರಾಜಕೀಯ ಶಕ್ತಿ ಧ್ಯೇಯ’

7
ಸಿಪಿಐ(ಎಂಎಲ್‌) ರಾಜ್ಯ ಸಮ್ಮೇಳನ–ಪ್ರತಿನಿಧಿ ಅಧಿವೇಶನ

‘ಪರ್ಯಾಯ ರಾಜಕೀಯ ಶಕ್ತಿ ಧ್ಯೇಯ’

Published:
Updated:
Deccan Herald

ಚಿಕ್ಕಮಗಳೂರು: ಜನರ ಅಭಿವೃದ್ಧಿಗೆ ಪೂರಕವಾಗಿ ಪರ್ಯಾಯ ರಾಜಕೀಯ ಶಕ್ತಿ ಕಟ್ಟುವುದು ಸಿಪಿಐ(ಎಂಎಲ್‌) ಧ್ಯೇಯವಾಗಿದೆ. ಫ್ಯಾಸಿಸ್ಟ್‌ ವ್ಯವಸ್ಥೆ ಕಿತ್ತೊಗೆದು ಸಮಾಜವಾದದ ಹೊಸ ಸಮಾಜ ಹುಟ್ಟುಹಾಕುವುದು ಪಕ್ಷದ ಜವಾಬ್ದಾರಿಯಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಎನ್‌.ರಾಮಚಂದ್ರನ್‌ ಹೇಳಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆರಂಭವಾದ ಭಾರತ ಕಮ್ಯುನಿಸ್ಟ್‌ ಪಕ್ಷದ(ಮಾಕ್ಸ್‌ವಾದಿ– ಲೆನಿನ್‌ವಾದಿ) ರಾಜ್ಯ 9ನೇ ಸಮ್ಮೇಳನ ಮತ್ತು ಪ್ರತಿನಿಧಿ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. ಪಕ್ಷದಲ್ಲಿನ ಸಕಾರಾತ್ಮಕ ಅಂಶಗಳು, ದೌರ್ಬಲ್ಯ, ಹಿನ್ನಡೆ ಎಲ್ಲವನ್ನು ಅವಲೋಕಿಸಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ಪಕ್ಷ ಅಭಿವೃದ್ಧಿಯ ಹಾದಿಯಲ್ಲಿದೆ, 20 ರಾಜ್ಯಗಳಲ್ಲಿ ಕ್ರಿಯಾಶೀಲವಾಗಿದೆ. ರಾಜಕೀಯ ನಿರ್ಣಯಗಳನ್ನು ಸಮಾಜದ ಮುಂದಿಟ್ಟು ಪ್ರಜಾಸತ್ತಾತ್ಮಕವಾಗಿ ಚರ್ಚಿಸುತ್ತೇವೆ, ಏನನ್ನು ಮುಚ್ಚಿಟ್ಟಿಲ್ಲ. ಜನತಾ ಪರ್ಯಾಯ ರೂಪಿಸುವ ಕಾಯಕ ತೀವ್ರಗೊಳಿಸಲು ಸಂಗಾತಿಗಳು ಕಾರ್ಯಪ್ರವೃತರಾಗಬೇಕು ಎಂದು ಸಲಹೆ ನೀಡಿದರು.

ಮಾವೋವಾದಕ್ಕೂ ನಮಗೂ ಸಂಬಂಧ ಇಲ್ಲ. ಎಡ ಮತ್ತು ಬಲ ಪಂಥೀಯ ವಾದಗಳನ್ನು ಸಮಾನವಾಗಿ ವಿರೋಧಿಸುವುದು ನಮ್ಮ ನೀತಿ. ಜನಾಂದೋಲನದ ಮೂಲಕ ಸಮ ಸಮಾಜ ನಿರ್ಮಾಣ ನಮ್ಮ ಗುರಿ. ಬಲಪಂಥೀಯವಾದ ಮುನ್ನಡೆ ಸಾಧಿಸಿ ಎಲ್ಲ ಕಡೆ ಹಿಡಿತ ಸಾಧಿಸುತ್ತಿದೆ. ಜನರ ಹೋರಾಟದ ಮೂಲಕ ಪಡೆದ ಹಕ್ಕುಗಳ ಮೇಲೆ ಸವಾರಿ ಮಾಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

‘1991ರಲ್ಲಿ ದೇಶದಲ್ಲಿ ನವ ಆರ್ಥಿಕ ಮತ್ತು ಉದಾರೀಕರಣ ನೀತಿಗಳನ್ನು ಜಾರಿಗೊಳಿಸಲಾಯಿತು. ಆಗ ಪಿ.ವಿ.ನರಸಿಂಹರಾವ್‌ ಪ್ರಧಾನಿಯಾಗಿದ್ದರು ಮತ್ತು ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದರು. ಈ ನೀತಿಗಳನ್ನು ಎಲ್ಲ ಕ್ಷೇತ್ರಗಳಲ್ಲಿ ಜನರ ಮೇಲೆ ಅನ್ವಯಿಸುವ ಪ್ರಯೋಗ 26 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಕಾಂಗ್ರೆಸ್‌, ಇತರ ಪಕ್ಷಗಳು ಕೋಮುವಾದ ನೀತಿಗಳನ್ನು ಜನರ ಮುಂದಿಟ್ಟು ಒಡೆದು ಅಳುವ ನೀತಿ ಮೂಲಕ ಲೂಟಿ ಮುಂದುವರಿಸಿವೆ. ಎಡಪಕ್ಷಗಳು ಇದನ್ನೇ ಅನುಸರಿಸುತ್ತಿವೆ’ ಎಂದು ಕಿಡಿಕಾರಿದರು.

‘ಈ ನೀತಿಗಳು ಬೆಲೆ ಏರಿಕೆ, ನಿರುದ್ಯೋಗ, ಭ್ರಷ್ಟಾಚಾರಕ್ಕೆ ಎಡೆಮಾಡಿವೆ. ಸಂದಿಗ್ಧ ಪರಿಸ್ಥಿತಿ ಸೃಷ್ಟಿಸಿವೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಪೋಷಿತ ಬಿಜೆಪಿ 2014ರಲ್ಲಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸಾಮಾಜ್ಯಶಾಹಿ, ನವ ಉದಾರನೀತಿಗಳನ್ನು ಮುಕ್ತವಾಗಿ ಪ್ರಯೋಗ ಮಾಡುತ್ತಿದೆ. ಕಾರ್ಪೊರೇಟ್‌ ಶಕ್ತಿ, ಬಂಡವಾಳಿಗರು, ಸಾಮ್ರಾಜ್ಯವಾದಿಗಳು ಮೋದಿ ಬೆನ್ನಿಗೆ ನಿಂತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಪೊರೇಟ್‌ ಪರವಾಗಿವೆ’ ಎಂದರು.

‘ಕಾರ್ಮಿಕರ ಹಕ್ಕುಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕಿದೆ. ಶಿಕ್ಷಣ ಕ್ಷೇತ್ರದ ಖಾಸಗೀಕರಣದ ವಶವಾಗುತ್ತಿದೆ. ಶಿಕ್ಷಣ ಸಾಮಾನ್ಯರ ಕೈಗೆ ಎಟುಕದ ಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದರು.

‘ನೋಟು ಅಮಾನ್ಯೀಕರಣ ಕ್ರಮ, ಜಿಎಸ್‌ಟಿ ಜಾರಿ ದೇಶಕ್ಕೆ ಮಾರಕವಾಗಿದೆ. ಬ್ಯಾಂಕು, ವಿಮಾ ಕಂಪನಿಗಳು ಕಾರ್ಪೊರೇಟ್‌ ಶಕ್ತಿಗಳ ಪಾಲಾಗಿವೆ. ಭ್ರಷ್ಟಾಚಾರ ಹೆಚ್ಚಾಗಿದೆ. ಈ ನೀತಿಗಳಿಗೆ ಜನ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಹಿಂದುತ್ವ, ಕೋಮುವಾದ, ಜಾತಿವಾದಗಳನ್ನು ಬಿತ್ತಿ ಜನರ ಒಗ್ಗಟ್ಟು, ಹೋರಾಟಗಳನ್ನು ಹತ್ತಿಕ್ಕಿ ಕಾರ್ಯಸಾಧನೆ ಮಾಡುತ್ತಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಫ್ಯಾಸಿಸ್ಟ್‌ ವಾದ ದೇಶವನ್ನು ಆವರಿಸಿದೆ. ಮೋದಿ ಸರ್ಕಾರವನ್ನು ಕಿತ್ತೊಗೆಯಲು ಪಕ್ಷಗಳು ಒಕ್ಕೂಟ ಮಾಡಿಕೊಳ್ಳುತ್ತಿವೆ. ಅಧಿಕಾರದ ಚುಕ್ಕಾಣಿ ಹಿಡಿದರೆ ನವ ಆರ್ಥಿಕ ನೀತಿಗಳನ್ನು ಕೈಬಿಡಲಾಗುತ್ತದೆಯೇ, ಫ್ಯಾಸಿಸ್ಟ್‌ವಾದ ಕಿತ್ತೊಗೆಯಲಾಗುತ್ತದೆಯೇ ಎಂಬುದಕ್ಕೆ ಒಕ್ಕೂಟದ ಪಕ್ಷಗಳ ಬಳಿ ಉತ್ತರ ಇಲ್ಲ. ಹೀಗಾಗಿ, ಭಿನ್ನವಾದ ಮತ್ತು ಜಾತ್ಯತೀತ ಪರ್ಯಾಯ ಶಕ್ತಿ ರೂಪಿಸುವ ಸವಾಲು ನಮ್ಮ ಮುಂದಿದೆ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !