ಚಿಕ್ಕಮಗಳೂರು: ಕಾಡಾನೆ ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಗುರುವಾರ ಚಾಲನೆ ದೊರೆತಿದೆ. ಆದರೆ, ಕಾಡಾನೆಯ ಗುಂಪಿನಲ್ಲಿರುವ ಆನೆಯೊಂದು ಮರಿ ಹಾಕಿದ್ದು, ಕಾರ್ಯಾಚರಣೆಗೆ ತೊಡಕಾಗಿದೆ.
ಮೂಡಿಗೆರೆ, ಆಲ್ದೂರು ಭಾಗದಲ್ಲಿ ಬೀಡುಬಿಟ್ಟಿರುವ ಏಳು ಕಾಡಾನೆ ಗುಂಪಿಗೆ ಅರಣ್ಯ ಇಲಾಖೆ ಭುವನೇಶ್ವರಿ ಎಂದು ಹೆಸರಿಟ್ಟಿದೆ. ಈ ತಂಡದ ಸಲಗವೊಂದು ಬೇರ್ಪಟ್ಟಿದ್ದು, ಬುಧವಾರ ಗಾಳಿಗುಂಡಿ ಗ್ರಾಮದ ಯುವತಿಯನ್ನು ಬಲಿ ಪಡೆದುಕೊಂಡಿದೆ. ಎರಡು ತಿಂಗಳ ಹಿಂದೆಯೂ ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಿ ಬಲಿ ತೆಗೆದುಕೊಂಡಿತ್ತು.
ಈ ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಲು ಮತ್ತು ಉಳಿದ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಅನುಮತಿ ನೀಡಿದೆ. ಶಿವಮೊಗ್ಗ ಜಿಲ್ಲೆಯ ಸಕ್ರೈಬೈಲು ಆನೆ ಬಿಡಾರದಿಂದ ಮೂರು ಸಾಕಾನೆಗಳನ್ನು ಕರೆಸಲಾಗಿದ್ದು, ಸೋಮಣ್ಣ, ಬಹದ್ದೂರ್, ಅಲಿ ಎಂಬ ಮೂರು ಗಂಡಾನೆಗಳು ಬಂದಿಳಿದಿವೆ. ಸಕ್ರೇಬೈಲು ಸೋಮಣ್ಣ ಎಂಬ ಆನೆಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ. ಮತ್ತಾವರ ಸಸ್ಯಕ್ಷೇತ್ರದ ಬಳಿ ಗುರುವಾರ ಪೂಜೆ ನೆರವೇರಿಸಿ ಕಾರ್ಯಾಚರಣೆಗೆ ಅಧಿಕಾರಿಗಳು ಚಾಲನೆ ನೀಡಿದರು.
ಮೊದಲಿಗೆ ಗುಂಪಿನಲ್ಲಿರುವ ಆನೆಗಳನ್ನು ಹಿಮ್ಮೆಟ್ಟಿಸಿ ಬಳಿಕ ಒಂಟಿ ಸಲಗ ಸೆರೆ ಹಿಡಿಯುವ ಆಲೋಚನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡಿದ್ದರು. ಗುರುವಾರ ಬೆಳಿಗ್ಗೆ ಕಾಡಿಗೆ ಹೋಗಿದ್ದ ಅಧಿಕಾರಿಗಳ ತಂಡಕ್ಕೆ ಆನೆಯೊಂದು ಮರಿ ಹಾಕಿರುವುದರ ಕುರುಹುಗಳು ಪತ್ತೆಯಾಗಿವೆ.
ಗುರುವಾರ ತಾನೆ ಜನಿಸಿರುವ ಮರಿಯಾನೆ ಇರುವ ಗುಂಪನ್ನು ಏಕಾಏಕಿ ಹಿಮ್ಮೆಟ್ಟಿಸಲು ಆಗುವುದಿಲ್ಲ. ಮರಿಯಾನೆ ಹೆಜ್ಜೆ ಹಾಕುತ್ತಿದೆಯೇ, ಅದನ್ನು ರಕ್ಷಣೆ ಮಾಡಿಕೊಂಡು ಮುಂದೆ ಸಾಗಲು ತಾಯಿ ಆನೆ ಶಕ್ತಿಯುತವಾಗಿ ಇದೆಯೇ ಎಂಬುದನ್ನು ಗಮನಿಸಬೇಕು. ಏಕಾಏಕಿ ಹಿಮ್ಮೆಟ್ಟಿಸಲು ಪ್ರಯತ್ನಿಸಿದರೆ ತಾಯಿ ಆನೆ ಘಾಸಿಗೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಪರಿಸ್ಥಿತಿ ಅರಿತು ನಂತರ ನಿಧಾನವಾಗಿ ಕಾಡಿನ ಕಡೆಗೆ ಕಳುಹಿಸಬೇಕಾಗುತ್ತದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಇನ್ನೊಂದೆಡೆ ಬುಧವಾರ ಯುವತಿಯನ್ನು ಬಲಿ ಪಡೆದ ಸಲಗ ಗುರುವಾರ ಕಂಚಿನಕಲ್ಲು ದುರ್ಗಾದಿಂದ ಬಾಸ್ತಿ ಮೀಸಲು ಅರಣ್ಯದ ಕಡೆ ಸಂಚರಿಸುತ್ತಿದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಲೆಹಾಕಿದ್ದಾರೆ. ಹಿಂಬಾಲಿಸಿ ಡ್ರೋನ್ ಮೂಲಕ ಆನೆಯ ಹೆಜ್ಜೆ ಗುರುತು ಆಧರಿಸಿ ಹುಡುಕಾಟ ನಡೆಸಿದರು. ಹೆಜ್ಜೆ ಗುರುತು ಪತ್ತೆಯಾದ ಸುತ್ತಮುತ್ತ ಡ್ರೋನ್ ಹಾರಿಸಿ ಹುಡುಕಾಟ ನಡೆಸಿದರೂ ಆನೆ ಪತ್ತೆಯಾಗಲಿಲ್ಲ. ಶುಕ್ರವಾರ ಕೂಡ ಸಲಗಕ್ಕಾಗಿ ಹುಡುಕಾಟ ಮುಂದುವರಿಯಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ.
ಆನೆ ಮರಿ ಹಾಕಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಾಚರಣೆ ನಡೆಯಲಿದೆ. ಜನವಸತಿ ಪ್ರದೇಶದ ಕಡೆಗೆ ಕಾಡಾನೆಗಳು ಬರದಂತೆ ನಿಗಾ ವಹಿಸಲಾಗುವುದು.–ಕೆ.ಎಸ್.ಮೋಹನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.