ಬುಧವಾರ, ಅಕ್ಟೋಬರ್ 21, 2020
25 °C
ತೋಟಕ್ಕೆ ವಿಜ್ಞಾನಿಗಳ ಭೇಟಿ

ಅಡಿಕೆಗೆ ಶಿಲೀಂಧ್ರ ರೋಗ, ಸಾಮೂಹಿಕ ನಿಯಂತ್ರಣಕ್ಕೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳಸ: ತಾಲ್ಲೂಕಿನ ಮರಸಣಿಗೆ, ಸಂಸೆ, ಬಡಮನೆ ಪ್ರದೇಶದಲ್ಲಿ ಅಡಿಕೆಗೆ ವಿಚಿತ್ರ ರೋಗ ತಗುಲಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಡಿಕೆಗೆ ವಿಚಿತ್ರ ರೋಗ ತಗುಲಿ ರುವ ರೋಗ ತಗಲಿರುವ ಕುರಿತು ‘ಪ್ರಜಾವಾಣಿ’ಯಲ್ಲಿ ಇದೇ 5ರಂದು ವಿಶೇಷ ವರದಿ ‍ಪ್ರಕಟವಾಗಿತ್ತು. ಅದರ ಬೆನ್ನಲ್ಲೇ ಶಿವಮೊಗ್ಗ ಮತ್ತು ಶೃಂಗೇರಿ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಮೊದಲು ಸಂಸೆ ಸಮೀಪದ ಬಾಧಿತ ಅಡಿಕೆ ತೋಟಗಳಿಗೆ ಭೇಟಿ ನೀಡಿತು. ಅಲ್ಲಿ ನೆರೆದಿದ್ದ ರೈತರು 2 ವಾರದಲ್ಲೇ ಅಡಿಕೆ ಮರಗಳ ಗರಿಗಳೆಲ್ಲಾ ಒಣಗಿ ಅತಿ ವೇಗವಾಗಿ ರೋಗ ಹರಡು ತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿ ಸಿದರು. ಈ ರೋಗ ಹೀಗೇ ವ್ಯಾಪಿಸಿ ದರೆ ಅಡಿಕೆ ತೋಟಗಳ ಅವನತಿಗೆ ಕಾರ ಣವಾಗಬಹುದು. ಅಡಿಕೆ ಬೆಳೆಗಾರರ ಭವಿಷ್ಯ ಕರಾಳವಾಗಬಹುದು ಎಂದು ಭೀತಿ ಹೊರಹಾಕಿದರು.

ಶೃಂಗೇರಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾರಾಯಣ ಸ್ವಾಮಿ, ‘ಬೆಳೆಗಾರರು ಭಯಪಡುವುದು ಬೇಡ. ಇದು ಎಲೆಚುಕ್ಕಿ ರೋಗ ವಿಕೋಪಕ್ಕೆ ಹೋಗಿ ಬೆಂಕಿ ರೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊಲ್ಲೇಟೋಟ್ರೈಕಂ ಶಿಲೀಂಧ್ರ ಬಾಧೆಯಿಂದ ಈ ರೋಗ ಕಂಡು ಬಂದಿದೆ. ಕಡಿಮೆ ತಾಪ ಮಾನ ಮತ್ತು ಅಧಿಕ ತೇವಾಂಶದ ಕಾರಣಕ್ಕೆ ರೋಗ ಉಲ್ಬಣ ಆಗಿದೆ’ ಎಂದರು.

ಮಳೆಗಾಲಕ್ಕಿಂತ ಮೊದಲೇ ಈ ಶಿಲೀಂಧ್ರ ತೋಟದಲ್ಲಿ ಇರುತ್ತದೆ. ಮಳೆಗಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ಧಿ ಆಗಿರುತ್ತದೆ. ಮಳೆ ಕಡಿಮೆ ಆಗಿ ತಾಪಮಾನ ಹೆಚ್ಚಿದ ಕೂಡಲೇ ಗಾಳಿಯಲ್ಲಿ ಹರಡಿ ಎಲೆಗಳನ್ನು ಬಾಧಿಸಿದೆ. ಇದು ಈ ಸಾಲಿನ ಫಸಲಿಗೆ ಹೆಚ್ಚಿನ ಹಾನಿ ಮಾಡುವ ಸಾಧ್ಯತೆ ಕಡಿಮೆ. ಆದರೆ, ಎಲ್ಲ ಎಲೆಗಳು ಬಾಡಿ ಹೋದರೆ ಮುಂದಿನ ಸಾಲಿನ ಫಸಲಿಗೂ ಹಾನಿ ಅಗುವ ಅಪಾಯ ಇದೆ ಎಂದು ವಿಜ್ಞಾನಿಗಳು ತಿಳಿಸಿದರು.

‘ಈ ಶಿಲೀಂಧ್ರವನ್ನು ಮಳೆಗಾಲಕ್ಕಿಂತ ಮೊದಲೇ ನಿಯಂತ್ರಣ ಮಾಡಬೇಕು. ಮೊದಲ ಬೋರ್ಡೋ ಸಿಂಪಡಣೆ ಮಾಡುವಾಗ ಫಸಲಿನ ಗೊನೆಗಳ ಜೊತೆಗೆ ಎಲ್ಲ ಎಲೆಗಳಿಗೂ ಸಿಂಪಡಣೆ ಮಾಡಿದರೆ ಶಿಲೀಂಧ್ರದ ಅಭಿವೃದ್ಧಿಗೆ ತಡೆ ಹಾಕಿದಂತಾಗುತ್ತದೆ. ಈಗ ರೋಗಬಾಧೆ ತಗುಲಿರುವ ತೋಟದಲ್ಲಿ ತಕ್ಷಣ 200 ಲೀಟರ್ ನೀರಿಗೆ 500 ಗ್ರಾಂ ಕಾರ್ಬನ್‍ಡೈಜಿಮ್ ಮತ್ತು ಮಾಂಕೋಜೆಬ್ ಬೆರೆಸಿ ಎಲ್ಲ ಎಲೆಗಳಿಗೂ ತಾಗುವಂತೆ ಸಿಂಪಡಿಸಬೇಕು. ಆನಂತರ ರೋಗ ಪೀಡಿತ ಎಲೆಗಳನ್ನು ಕತ್ತರಿಸಿ ತೆಗೆದು ಸುಡಬೇಕು. ಇದೇ ಕೆಲಸವನ್ನು ರೋಗ ಪೀಡಿತ ಎಲ್ಲ ತೋಟಗಳ ಬೆಳೆಗಾರರೂ ಏಕಕಾಲಕ್ಕೆ ಮಾಡಿದರೆ ಶಿಲೀಂಧ್ರದ ಹತೋಟಿ ಮಾಡಬಹುದು. ನಿರ್ಲಕ್ಷ್ಯ ಮಾಡಿದರೆ ಮುಂದಿನ ವರ್ಷ ತೋಟಗಳಿಗೆ ರೋಗ ವ್ಯಾಪಿಸಿ ನಷ್ಟ ಆಗುವ ಅಪಾಯ ಇದೆ’ ಎಂದೂ ಡಾ.ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದರು.

ಆನಂತರ ಮರಸಣಿಗೆ ಸಮೀ ಪದ ತೋಟಗಳಿಗೂ ಭೇಟಿ ನೀಡಿದ ವಿಜ್ಞಾನಿಗಳ ತಂಡ ಅಲ್ಲಿನ ತೋಟ ಗಳಲ್ಲೂ ಇದೇ ರೋಗದ ಮಾಹಿತಿ ಪಡೆದು ಸೂಕ್ತ ಸಲಹೆ ನೀಡಿದರು.ಅಡಿಕೆ ಎಲೆಗಳ ಮಾದರಿ ಸಂಗ್ರಹಿಸಿದ ತಂಡ ಅದನ್ನು ಪ್ರಯೋಗಾಲಯದಲ್ಲಿ ಹೆಚ್ಚಿನ ಪರಿಶೀಲನೆಗೆ ಒಳಪಡಿಸು ವುದಾಗಿ ತಿಳಿಸಿತು. ಶಿವಮೊಗ್ಗ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ನಾಗರಾಜ್, ಸಿಬ್ಬಂದಿ, ತೋಟ ಗಾರಿಕಾ ಅಧಿಕಾರಿ ಚಂದ್ರಪ್ಪ ಇದ್ದರು.

ಇದನ್ನೂ ಓದಿ: ಕಳಸ: ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.