ಮಂಗಳವಾರ, ಜನವರಿ 26, 2021
25 °C

ಮಲೆನಾಡಿನಲ್ಲಿ ಅಡಿಕೆ ಧಾರಣೆ ಏರಿಕೆ; ಬೆಳೆಗಾರರ ಮೊಗದಲ್ಲಿ ಮಂದಹಾಸ

ರವಿ ಕೆಳಂಗಡಿ Updated:

ಅಕ್ಷರ ಗಾತ್ರ : | |

Prajavani

ಕಳಸ: ಕೆಂಪಡಿಕೆ ಧಾರಣೆಯು ಕ್ವಿಂಟಲಿಗೆ ₹ 40 ಸಾವಿರ ಮುಟ್ಟಿದ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

ಮೂರು ವರ್ಷದ ಹಿಂದೆ ಕ್ವಿಂಟಲಿಗೆ ₹ 80 ಸಾವಿರಕ್ಕೆ ಏರಿಕೆ ಆಗಿದ್ದ ಅಡಿಕೆ ಬೆಲೆ ಆ ನಂತರ ₹ 40 ಸಾವಿರದ ಗಡಿ ದಾಟುತ್ತಿರುವುದು ಅಪರೂಪವೇ ಆಗಿದೆ. ಶಿವಮೊಗ್ಗ, ತೀರ್ಥಹಳ್ಳಿ, ಕೊಪ್ಪ ಮಾರುಕಟ್ಟೆಯಲ್ಲಿ ರಾಶಿ ಇಡಿ ಮತ್ತು ಬೆಟ್ಟೆ ಮಾದರಿ ಅಡಿಕೆ ಬೆಲೆಯು ಗರಿಷ್ಠ ಕ್ವಿಂಟಲಿಗೆ ₹ 40,500ವರೆಗೂ ಇತ್ತು. ಸರಕು ಅಡಿಕೆಯು ಗರಿಷ್ಠ ₹ 64 ಸಾವಿರ ಮಾನ್ಯತೆ ಪಡೆದಿದೆ. ಅಷ್ಟೇನೂ ಉತ್ತಮ ಗುಣಮಟ್ಟ ಅಲ್ಲದ ಗೊರಬಲು ಕೂಡ ₹ 30-31 ಸಾವಿರ ಬೆಲೆಯ ಗೌರವ ಪಡೆಯುತ್ತಿದೆ.

ಭಾರತದಲ್ಲಿ ಅಡಿಕೆಯ ಬಹುಪಾಲು ಗುಟ್ಕಾ ತಯಾರಿಗೆ ಬಳಕೆ ಆಗುತ್ತದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳು ಗುಟ್ಕಾ ತಿನ್ನುವುದರ ಮೇಲೆ ನಿರ್ಬಂಧ ಹೇರಿತ್ತು. ಆದರೆ, ಇದೀಗ ನಿರ್ಬಂಧ ಸಡಿಲ ಆಗಿದ್ದು, ಅಡಿಕೆ ಬೆಲೆ ಚೇತರಿಸುತ್ತಿದೆ.

‘ಪ್ರತಿವರ್ಷವೂ ವಿದೇಶದಿಂದ ಕಳ್ಳಮಾರ್ಗದಲ್ಲಿ ಅಮದಾಗುತ್ತಿದ್ದ ಅಡಿಕೆಯು ದೇಶಿ ಅಡಿಕೆಯೇ ಬೆಲೆ ಇಳಿಕೆಗೆ ಕಾರಣ ಆಗುತ್ತಿತ್ತು. ಈ ಬಾರಿ ಭಾರತ ಮತ್ತು ಚೀನಾ ನಡುವಿನ ಮುಸುಕಿನ ಗುದ್ದಾಟದಲ್ಲಿ ನೇಪಾಳ ಚೀನಾದ ಪರ ವಹಿಸಿತ್ತು. ಈ ಕಾರಣಕ್ಕೆ ನೇಪಾಳದಿಂದ ಭಾರತಕ್ಕೆ ಆಮದು ಆಗುವ ವಸ್ತುಗಳ ಮೇಲೂ ಹದ್ದಿನಕಣ್ಣು ಇರಿಸಲಾಗಿದೆ. ಈ ಕಾರಣಕ್ಕೆ ನೇಪಾಳದಿಂದ ಭಾರತಕ್ಕೆ ಅಡಿಕೆ ಅಕ್ರಮ ವಾಗಿ ಆಮದು ಆಗುತ್ತಿಲ್ಲ’ ಎಂದು ವ್ಯಾಪಾರಿ ಸಮುದಾಯ ಹೇಳುತ್ತದೆ.

ಈ ಪರಿಣಾಮವಾಗಿ ಅಡಿಕೆಯ ಧಾರಣೆ ಕಳೆದ ತಿಂಗಳಿನಿಂದಲೂ ನಿಧಾನಕ್ಕೆ ಏರುತ್ತಲೇ ಇದೆ. ಕೆಂಪಡಿಕೆ ಧಾರಣೆ ಏರಿಕೆ ಬೆನ್ನಲ್ಲೇ ಹಸಿ ಅಡಿಕೆಯ ಬೆಲೆ ಕೂಡ ಕೆಜಿಗೆ ₹ 45-50ಕ್ಕೆ ಏರಿದೆ. ಇದು ಹಸಿ ಅಡಿಕೆ ವ್ಯಾಪಾರ ಶುರು ಆದ 4-5 ವರ್ಷಗಳಲ್ಲೆ ಗರಿಷ್ಠ ಬೆಲೆ ಆಗಿದೆ. ಅಡಿಕೆ ಸಂಸ್ಕರಣೆ ಮಾಡಲಾರದ ಬೆಳೆಗಾರರು ಹಸಿ ಅಡಿಕೆ ಮಾರಾಟ ಮಾಡಿ ತಕ್ಷಣ ಹಣ ಎಣಿಸುತ್ತಿದ್ದಾರೆ.

‘ಸದ್ಯದ ಪರಿಸ್ಥಿತಿಯಲ್ಲಿ ಅಡಿಕೆ ಧಾರಣೆ ವಿಪರೀತ ಎಂಬಷ್ಟು ಏರಿಕೆ ಅಥವಾ ಇಳಿಕೆ ಕಾಣುವ ಲಕ್ಷಣ ಇಲ್ಲ. ಬೆಲೆಯು ಸ್ಥಿರತೆ ಕಾಯ್ದುಕೊಳ್ಳುವ ಅವಕಾಶ ಹೆಚ್ಚಿದೆ’ ಎಂದು ಕ್ಯಾಂಫ್ಕೊ ಅಡಿಕೆ ಖರೀದಿ ಕೇಂದ್ರದ ಕಳಸ ಶಾಖೆಯ ಸಿಬ್ಬಂದಿ ದಿನೇಶ್ ಬೀಡು ಅಂದಾಜಿಸುತ್ತಾರೆ.

‘ಅಡಿಕೆ ಬೆಲೆ ಏರಿದ ಬೆನ್ನಲ್ಲೇ ಅಡಿಕೆ ಗೊನೆ ತೆಗೆಯುವವರ ಸಂಬಳ, ಅಡಿಕೆ ಸುಲಿಯುವವರ ಮತ್ತು ಸಂಸ್ಕರಣೆ ಮಾಡುವವರ ವೇತನ ಕೂಡ ಏರಿದೆ. ಅಡಿಕೆ ತೋಟದ ಬೇಸಾಯಕ್ಕೆ ಬೇಕಾದ ಸಾವಯವ, ರಾಸಾಯನಿಕ ಗೊಬ್ಬರ, ಸುಣ್ಣ, ಸೂಕ್ಷ್ಮ ಪೋಷಕಾಂಶಗಳ ಬೆಲೆಯೂ ಈಗಾಗಲೇ ಏರುತ್ತಿದೆ’ ಎಂಬುದು ಬೆಳೆಗಾರರ ಅನಿಸಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು