ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು|ಎಂಟಿಎಂ ಭದ್ರತೆ ನಿರ್ಲಕ್ಷ್ಯ ಬೇಡ: ಎಸ್‌ಪಿ

ಆರ್‌ಬಿಐ ನಿಯಮ ಪಾಲನೆ ಕಡ್ಡಾಯ ಪಾಲನೆಗೆ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚನೆ
Published 17 ಆಗಸ್ಟ್ 2023, 15:35 IST
Last Updated 17 ಆಗಸ್ಟ್ 2023, 15:35 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಎಟಿಎಂಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಿಬೇಕು. ರಿಸರ್ವ್ ಬ್ಯಾಂಕ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹೇಳಿದರು.

ಬ್ಯಾಂಕ್, ಎಟಿಎಂ ಭದ್ರತೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ಗುರುವಾರ ನಡೆದ ಸಭೆ ನಡೆಸಿದ ಅವರು, ‘ಸೈಬರ್ ಅಪರಾಧಗಳ ತನಿಖೆಯಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದರು.

‘ರಾಜ್ಯದ ಎಲ್ಲೆಡೆ ಎಂಟಿಎಂಗಳಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ಬ್ಯಾಂಕುಗಳು ಎಂಟಿಎಂ ಹೊಂದಿವೆ. ಕೆಲವೊಂದು ದಿನದ 24 ಗಂಟೆಯೂ ತೆರೆದಿರಲಿವೆ. ಸುರಕ್ಷತೆ ದೃಷ್ಟಿಯಿಂದ ಎಟಿಎಂನಲ್ಲಿ ಕಡ್ಡಾಯವಾಗಿ ಗುಣಮಟ್ಟದ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಕನಿಷ್ಠ 1 ವರ್ಷ ಅವಧಿಯ ಬ್ಯಾಕಪ್ ಹೊಂದಿರುವಂತಹ ಉತ್ತಮ ದರ್ಜೆಯ ಕ್ಯಾಮಾರಗಳನ್ನು ಅಳವಡಿಸಬೇಕು’ ಎಂದು ತಿಳಿಸಿದರು.

ಎಟಿಎಂ ಕೇಂದ್ರಗಳಲ್ಲಿ ಮತ್ತು ಬ್ಯಾಂಕ್‍ಗಳಲ್ಲಿ ಅಲಂರಾಮ್‍ಗಳನ್ನು ಇರಿಸಬೇಕು. ಪ್ರತಿ ಎಟಿಎಂ ಕೇಂದ್ರಗಳಲ್ಲಿ ಕೈಗೊಂಡಿರುವ ಭದ್ರತೆ ಕುರಿತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಆರ್‌ಬಿಐ ನಿಯಾಮವಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚನೆ ನೀಡಿದರು.

‘ಎಂಟಿಎಂ ಕಾವಲಿಗೆ ನಿಯೋಜಿಸುವ ಸಿಬ್ಬಂದಿಯ ಮಾಹಿತಿ ಪಡೆದಿಟ್ಟುಕೊಳ್ಳಬೇಕು. ಬ್ಯಾಂಕ್‌ ವ್ಯವಸ್ಥಾಪಕರು ಕಾಲಕಾಲಕ್ಕೆ ಸಭೆ ನಡೆಸಿ ಸಲಹೆ, ಮಾರ್ಗದರ್ಶನ ನೀಡಬೇಕು. ಎಟಿಎಂಗಳಲ್ಲಿ ಸದಾಕಾಲ ಬೆಳಕಿನ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು. ಭದ್ರತಾ ಸಿಬ್ಬಂದಿ ಇಲ್ಲದ ಸ್ಥಳದಲ್ಲಿ ರಾತ್ರಿ ವೇಳೆ ಎಟಿಎಂಗಳನ್ನು ಮುಚ್ಚಬೇಕು’ ಎಂದು ಸಲಹೆ ನೀಡಿದರು.

‘ಎಟಿಎಂಗಳಲ್ಲಿ ಸಿಬ್ಬಂದಿ ಇಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇದರಿಂದ ರಾತ್ರಿ ಗಸ್ತಿನಲ್ಲಿ ಪೊಲೀಸರು ತೆರಳಿ ಪರಿಶೀಲನೆ ಮಾಡಲು ಅನುಕೂಲವಾಗಲಿದೆ. ಸಾರ್ವಜನಿಕರ ಹಣದ ಸುರಕ್ಷತೆ ಮಾಡುವುದು ಬ್ಯಾಂಕುಗಳ ಕರ್ತವ್ಯ. ಕಳ್ಳತನ ಪ್ರಕರಣ ಆದಾಗ ಗ್ರಾಹಕರು ಬ್ಯಾಂಕಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಜತೆಗೆ ಆರ್ಥಿಕ ಅಭದ್ರತೆಗೂ ಕಾರಣವಾಗಲಿದೆ ’ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಮೂಲಕ ಹಣ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಬ್ಯಾಂಕುಗಳು ಗ್ರಾಹಕರಲ್ಲಿ ಜಾಗೃತಿ ಮೂಡಿಸಬೇಕು. ವಂಚನೆ ಅಪರಾಧ ಪ್ರಕರಣಗಳಲ್ಲಿ ಸೈಬರ್ ಪೊಲೀಸರೊಂದಿಗೆ ತನಿಖೆಗಳಲ್ಲಿ ಸಹಕರಿಸಬೇಕು ಎಂದು ಹೇಳಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೃಷ್ಣಮೂರ್ತಿ, ಲೀಡ್ ಬ್ಯಾಂಕ್‌ ವ್ಯವಸ್ಥಾಪಕ ಸುರೇಶ್ ಇದ್ದರು.

ಭದ್ರತಾ ಸಿಬ್ಬಂದಿ ಇಲ್ಲದ ಎಟಿಎಂ ಜಿಲ್ಲೆಯಲ್ಲಿ ವಿವಿಧ 25 ಬ್ಯಾಂಕ್‍ಗಳು ಕಾರ್ಯನಿರ್ವಹಿಸುತ್ತಿದ್ದು 218 ಬ್ರಾಂಚ್‍ಗಳಿವೆ. 218 ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ 5 ಬ್ಯಾಂಕ್‍ಗಳ ಎಟಿಎಂಗಳಿಗೆ ಮಾತ್ರ ತಮ್ಮ ಎಟಿಎಂಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿದೆ ಎಂದು ಎಸ್‌ಪಿ ಬೇಸರ ವ್ಯಕ್ತಪಡಿಸಿದರು. ‘ಉಳಿದ ಎಟಿಎಂ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿ ನಿಯೋಜಿಸಿಲ್ಲ. ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT