ನಕಲಿ ಪ್ರಮಾಣ ಪತ್ರ ನೀಡಿ ಜಮೀನು ಖಾತೆ ಮಾಡಲು ಯತ್ನ

7

ನಕಲಿ ಪ್ರಮಾಣ ಪತ್ರ ನೀಡಿ ಜಮೀನು ಖಾತೆ ಮಾಡಲು ಯತ್ನ

Published:
Updated:
Deccan Herald

ಕಡೂರು: ಬದುಕಿರುವವರ ಮರಣ ಪ್ರಮಾಣ ಪತ್ರ ಮತ್ತು ವಂಶ ವೃಕ್ಷ ಸೃಷ್ಟಿಸಿ ಪೌತಿ ಖಾತೆ ಮಾಡಲೆತ್ನಿಸಿರುವ ಪ್ರಕರಣ ತಾಲ್ಲೂಕಿನ ಕೆ.ಬಿದರೆಯಲ್ಲಿ ಬೆಳಕಿಗೆ ಬಂದಿದೆ.

ಕೆ.ಬಿದರೆ ಗ್ರಾಮದ ಕೆ.ಬಿ.ಮಲ್ಲಪ್ಪ ಅವರು ತಂಗಲಿ ಗ್ರಾಮದ ಬಸವರಾಜು ಅವರಿಗೆ 1.2 ಎಕರೆ ಜಮೀನು ಮಾರಾಟ ಮಾಡಿದ್ದರು. ಆದರೆ, ಪಹಣಿಯಲ್ಲಿ ಕೆ.ಬಿ. ಮಲ್ಲಪ್ಪ (ಹಲವೆಡೆ ಇವರ ಹೆಸರು ಕೆ.ಬಿ.ಮಲ್ಲೇಶಪ್ಪ ಎಂದೂ ಇದೆ) ಎಂಬ ಹೆಸರು ಎಸ್.ಬಿ.ಮಲ್ಲೇಶಪ್ಪ ಎಂದು ತಪ್ಪಾಗಿ ನಮೂದಾಗಿರುವುದನ್ನು ಕಂಡ ಜಮೀನು ಖರೀದಿಸಿದ ಜಿ.ಬಸವರಾಜು, ಕೆ.ಬಿದರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ದೇವರಾಜಪ್ಪ ಅವರಿಗೆ ಇದನ್ನು ಸರಿಪಡಿಸಲು ಕೋರಿದ್ದಾರೆ.

ಪಹಣಿ ಸರಿಪಡಿಸಲು ಬಹಳ ದಿನಗಳ ಬೇಕಾಗುವುದರಿಂದ ಜಮೀನಿನ ಖಾತೆ ನೇರವಾಗಿ ಬಸವರಾಜು ಅವರ ಹೆಸರಿಗೇ ಬರುವಂತೆ ಮಾಡುತ್ತೇನೆ ಎಂದು ದೇವರಾಜು ತಿಳಿಸಿದ್ದರಿಂದ, ಕಾನೂನು ಪ್ರಕಾರವೇ ಖಾತೆಯಾಗಲಿ ಎಂದು ಬಸವರಾಜ್ ಸಮ್ಮತಿಸಿದ್ದರು.

ಇದೇ ಸಂದರ್ಭದಲ್ಲಿ ಜಮೀನು ಮಾರಾಟ ಮಾಡಿದ ಕೆ.ಬಿ.ಮಲ್ಲಪ್ಪ ಅವರು ನಿಧನರಾಗಿದ್ದು, ಅವರ ಮಗ ಗೋವಿಂದಪ್ಪ ಮತ್ತು ಗೋವಿಂದಪ್ಪನ ಮಗ ಬಸವರಾಜು ಎಂದಾಗಿದ್ದು, ಕೆ.ಬಿ.ಮಲ್ಲೇಶಪ್ಪ ಮತ್ತು ಗೋವಿಂದಪ್ಪ ಇಬ್ಬರೂ ಪೌತಿಯಾಗಿದ್ದಾರೆ. ಹಾಗಾಗಿ, ಈ ಜಮೀನನ್ನು ಬಸವರಾಜು ಹೆಸರಿಗೆ ಪೌತಿ ಖಾತೆ ಮಾಡಿಕೊಡಬೇಕೆಂದು ವಂಶವೃಕ್ಷ ಲಗತ್ತಿಸಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಗಮನಿಸಬೇಕಾದ ಅಂಶವೆಂದರೆ ಕೆ.ಬಿ.ಮಲ್ಲಪ್ಪ ಮತ್ತು ಬಸವರಾಜು ತಂದೆ ಗೋವಿಂದಪ್ಪ ಇನ್ನೂ ಬದುಕಿದ್ದಾರೆ. ವಂಶವೃಕ್ಷದಲ್ಲಿ ನಮೂದಾಗಿರುವ ಪ್ರಕಾರ ಜಮೀನು ಮಾರಾಟ ಮಾಡಿದ ಮಲ್ಲಪ್ಪ ಜಮೀನು ಖರೀದಿಸಿದ ಬಸವರಾಜು ಅವರ ಅಜ್ಜ!

ಸಿಂಗಟಗೆರೆ ನಾಡಕಚೇರಿ ಕಂದಾಯ ನಿರೀಕ್ಷಕರು ಸ್ಥಳ ಪರಿಶೀಲನೆಗಾಗಿ ಕೆ.ಬಿದರೆ ಗೆ ಹೋದಾಗ ಕೆ.ಬಿ.ಮಲ್ಲಪ್ಪ ಮತ್ತು ಜಿ.ಬಸವರಾಜ್ ಇಬ್ಬರು ತಂದೆಯ ಹೆಸರು ಗೋವಿಂದಪ್ಪ ಹಾಗೂ ಅವರಿಬ್ಬರೂ ಬದುಕಿದ್ದಾರೆ ಎಂಬ ಅಂಶ ಬಯಲಾಗಿದೆ. ಕೂಡಲೇ ಈ ವಿಚಾರವನ್ನು ಮೇಲಧಿಕಾರಿಗಳಿಗೆ ಮುಟ್ಟಿಸಲಾಗಿದೆ. ಮರಣ ಪ್ರಮಾಣ ಪತ್ರದ ಮೇಲೆ ಕೆ.ಬಿದರೆ ವೃತ್ತದ ಗ್ರಾಮ ಲೆಕ್ಕಾಧಿಕಾರಿ ದೇವರಾಜಪ್ಪ ಮತ್ತು ಶಿರಸ್ತೇದಾರ ತಿಪ್ಪೇಸ್ವಾಮಿ ಅವರ ಸಹಿಯಿದೆ. ತಿಪ್ಪೇಸ್ವಾಮಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಇತ್ತ ಬಸವರಾಜ್ ನಾನು ಅರ್ಜಿ ಸಲ್ಲಿಸಿಲ್ಲ ಎನ್ನುತ್ತಾರೆ. ಹಾಗಾದರೆ, ಅವರ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ದೇವರಾಜಪ್ಪ ಸಹ ಇದರ ಬಗ್ಗೆ ತನಗೇನೂ ತಿಳಿಯದು ಎನ್ನುತ್ತಾರೆ. ಆದರೆ, ಈ ನಕಲಿ ದಾಖಲೆಗಳನ್ನು ಸೃಷ್ಟಿಸಿದವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಈ ಸಂಬಂಧ ಜಮೀನು ಮಾರಾಟ ಮಾಡಿರುವ ಕೆ.ಬಿ.ಮಲ್ಲಪ್ಪ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ. ನಾನು ಬದುಕಿರುವಾಗಲೇ ಮರಣ ಪ್ರಮಾಣ ಪತ್ರ ಸೃಷ್ಟಿಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

 ಪಹಣಿ ನ್ಯೂನತೆಯನ್ನು ಸರಿಪಡಿಸುವಂತೆ ದೇವರಾಜಪ್ಪ ಅವರನ್ನು ಕೋರಿದ್ದೆ. ಈ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಬಗ್ಗೆ ನನಗೆ ತಿಳಿಯದು.
- ಜಿ.ಬಸವರಾಜು, ಆಸ್ತಿ ಖರೀದಿಸಿದವರು.

ತುರ್ತು ಕೆಲಸದಲ್ಲಿದ್ದಾಗ ಕಣ್ತಪ್ಪಿನಿಂದ ವಂಶವೃಕ್ಷಕ್ಕೆ ಪತ್ರಕ್ಕೆ ಸಹಿ ಹಾಕಿರಬಹುದಾದ ಸಾಧ್ಯತೆಗಳಿವೆ. ಆದರೆ, ನಕಲಿ ದಾಖಲೆಗಳ ಬಗ್ಗೆ ನನಗೇನೂ ಗೊತ್ತಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.
- ದೇವರಾಜಪ್ಪ, ಕೆ.ಬಿದರೆ ವೃತ್ತದ ಗ್ರಾಮಲೆಕ್ಕಾಧಿಕಾರಿ.

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !