ಶುಕ್ರವಾರ, ನವೆಂಬರ್ 22, 2019
19 °C
ಚಿಕ್ಕಮಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ

ಅತಿವೃಷ್ಟಿ: ನಾಲ್ಕೈದು ದಿನಗಳಲ್ಲಿ ಕೇಂದ್ರದಿಂದ ಅನುದಾನ ನಿರೀಕ್ಷೆ

Published:
Updated:
Prajavani

ಚಿಕ್ಕಮಗಳೂರು: ಅತಿವೃಷ್ಟಿ ಹಾನಿ ಪರಿಹಾರ ಕಾರ್ಯಕ್ಕೆ ಕೇಂದ್ರ ಸರ್ಕಾರವು ನಾಲ್ಕೈದು ದಿನಗಳಲ್ಲಿ ಅನುದಾನ ಘೋಷಿಸಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಏಳೆಂಟು ರಾಜ್ಯಗಳಲ್ಲಿ ಅತಿವೃಷ್ಟಿಯಾಗಿದೆ. ಇವೆಲ್ಲವಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡಲಿದೆ. ಕೇಂದ್ರದ ತಂಡವು ರಾಜ್ಯದಲ್ಲಿ ಹಾನಿ ಅಧ್ಯಯನ ಮಾಡಿ ವರದಿ ನೀಡಿದೆ’ ಎಂದು ಉತ್ತರಿಸಿದರು.

‘ಅತಿವೃಷ್ಟಿಯಲ್ಲಿ ಮನೆ ಪೂರ್ಣ ನಾಶವಾಗಿರುವ ಕುಟುಂಬಗಳಿಗೆ ಮನೆ ಕಟ್ಟಿಕೊಳ್ಳಲು ತಲಾ ₹ 5 ಲಕ್ಷ ಒದಗಿಸಲಾಗುವುದು. ಮನೆ ತಳಪಾಯಕ್ಕೆ ತಲಾ ₹ 1 ಲಕ್ಷ ನೀಡಲು ಆದೇಶ ನೀಡಿದ್ದೇನೆ. ಹಣ ಪಾವತಿ ಈಗಿನಿಂದಲೇ ಶುರುವಾಗಲಿದೆ’ ಎಂದು ಅವರು ಪ್ರತಿಕ್ರಿಯಿಸಿದರು. 

ಅತಿವೃಷ್ಟಿಯಿಂದಾಗಿ ಕಾಫಿ ಸಹಿತ ವಿವಿಧ ಬೆಳೆಗಳು ನಾಶವಾಗಿವೆ. ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ಬೆಳೆ ನಷ್ಟದ ವರದಿ ಪಡೆದು ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದರು.

ಪ್ರತಿಭಟನೆಗೆ ಅರ್ಥವಿಲ್ಲ: ಕಾಂಗ್ರೆಸ್‌ ಪ್ರತಿಪಕ್ಷವಾಗಿ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಕಾಂಗ್ರೆಸ್‌ ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ಟೀಕಿಸಿದರು.

ಯಡಿಯೂರಪ್ಪ ಅವರು ಶೃಂಗೇರಿಯಲ್ಲಿ ಶಾರದಾಂಬೆ ದರ್ಶನ ಪಡೆದು, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಗೌರಿಗದ್ದೆಯಲ್ಲೂ ಸ್ವಾಮೀಜಿಯ ಆಶೀರ್ವಾದ ಪಡೆದು, ಹೋಮ, ಯಾಗದಲ್ಲಿ ಪಾಲ್ಗೊಂಡರು.

ಪ್ರತಿಕ್ರಿಯಿಸಿ (+)