ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಶ್ರೇಣಿ ಮಾರ್ಗದಲ್ಲಿ ಪ್ಲಾಸ್ಟಿಕ್‌ ಕಾರುಬಾರು; ಬಳಕೆ ನಿಷೇಧ ಕಡತ–ಫಲಕಕ್ಕೆಷ್ಟೇ

ಗಿರಿಶ್ರೇಣಿ ಮಾರ್ಗದಲ್ಲಿ ಪ್ಲಾಸ್ಟಿಕ್‌ ಕಾರುಬಾರು
Last Updated 23 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪ್ರವಾಸಿಗರ ದಾಂಗುಡಿಯಿಂದ ಗಿರಿ ಶ್ರೇಣಿಯಲ್ಲಿ ಪ್ಲಾಸ್ಟಿಕ್‌ ಹಾವಳಿ ಮಿತಿಮೀರಿದೆ. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಬಳಕೆ ಎಗ್ಗಿಲ್ಲದೆ ಸಾಗಿದೆ.

ಪ್ಲಾಸ್ಟಿಕ್‌ ಬಳಕೆ ನಿಷೇಧ ಆದೇಶವು ಫಲಕ, ಕಡತಗಳಿಗೆ ಸೀಮಿತವಾಗಿದೆ. ಜಿಲ್ಲೆಯ ‘ಪ್ರವಾಸಿ ತಾಣ, ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಮತ್ತು ಮದ್ಯಪಾನ ಬಳಕೆ ಕಡ್ಡಾಯವಾಗಿ ನಿಷೇಧಿಸಲಾಗಿದೆ,ತಪ್ಪಿದ್ದಲ್ಲಿ ₹ 1000 ದಂಡ ವಿಧಿಸಲಾಗುವುದು’ಎಂಬ ಫಲಕಗಳನ್ನು ಗಿರಿ ಶ್ರೇಣಿ ಮಾರ್ಗದಲ್ಲಿ ಅಲ್ಲಲ್ಲಿ ಅಳವಡಿಸಲಾಗಿದೆ. ಈ ಆದೇಶಕ್ಕೆ ಕವಡೆ ಕಿಮ್ಮತ್ತು ಇಲ್ಲವಾಗಿದೆ.

ಗಿರಿ ಶ್ರೇಣಿಯ ಮಾರ್ಗದಲ್ಲಿ, ದರ್ಗಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ಲಾಸ್ಟಿಕ್‌ ಲೋಟ, ಬಾಟಲಿ, ತಟ್ಟೆ, ಚೀಲ, ಪೊಟ್ಟಣಗಳದ್ದೇ ಕಾರುಬಾರು. ಪ್ಲಾಸ್ಟಿಕ್‌ ತ್ಯಾಜ್ಯ ರಾರಾಜಿಸುತ್ತಿದೆ. ಇಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕುವುದು ಸವಾಲಾಗಿದೆ.

‘ಪ್ಲಾಸ್ಟಿಕ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಬಯಲಲ್ಲೇ ಬಿಸಾಕುತ್ತಾರೆ. ಮದ್ಯ ಸೇವಿಸಿ ಬಾಟಲಿಗಳನ್ನು ಎಸೆಯುತ್ತಾರೆ. ಕಸ ತೊಟ್ಟಿಗೂ ಹಾಕುವುದಿಲ್ಲ. ಗಿರಿ ಪ್ರದೇಶದಲ್ಲಿ ಮಲಮೂತ್ರ ವಿಸರ್ಜಿಸುತ್ತಾರೆ. ಪ್ರವಾಸಿಗರ ಆಟಾಟೋಪಗಳಿಗೆ ಕಡಿವಾಣ ಇಲ್ಲದಂತಾಗಿದೆ’ ಎಂದು ಎಂದು ಪ್ರವಾಸಿ ಮಿತ್ರ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಟ್ಟಸಾಲಿನ ಸೊಬಗು ಕಣ್ತುಂಬಿಕೊಳ್ಳಲು, ದತ್ತಪೀಠ, ದರ್ಗಾ ದರ್ಶನಕ್ಕೆ ನಾಡಿನ ವಿವಿಧೆಡೆಗಳಿಮದ ಸಹ್ರಸಾರು ಮಂದಿ ನಿತ್ಯ ಇಲ್ಲಿಗೆ ಬರುತ್ತಾರೆ. ವಾರಾಂತ್ಯದಲ್ಲಂತೂ ಗಿರಿಮಾರ್ಗವು ಪ್ರವಾಸಿಗರ ವಾಹನಗಳಿಂದ ಗಿಜಿಗುಡುತ್ತದೆ.

ಊಟ ಉಪಹಾರಕ್ಕೆ ಪ್ಲಾಸ್ಟಿಕ್‌ ತಟ್ಟೆಲೋಟ ಬಳಸಿ, ಎಲ್ಲೆಂದರಲ್ಲಿ ಬಿಸಾಕಿದ್ದಾರೆ. ಕುರುಕುಲು ತಿನಿಸು ತಿಂದು ಪೊಟ್ಟಣಗಳನ್ನು ಎಸೆದಿದ್ದಾರೆ. ಗಾಳಿಗೆ ಅವು ತೂರಾಡುತ್ತವೆ, ಮೈಮುಖಕ್ಕೆ ರಾಚುತ್ತವೆ. ಕೆಲವು ಕಡೆ ಮದ್ಯದ ಬಾಟಲಿಗಳು ಬಿದ್ದಿವೆ. ಕೆಲವು ಕಡೆ ಪ್ಲಾಸ್ಟಿಕ್‌ ತಿಪ್ಪೆಗಳೇ ನಿರ್ಮಾಣವಾಗಿವೆ.

‘ಇದೊಂದು ಅಪೂರ್ವ ತಾಣ. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌, ಜೈನ ಎಲ್ಲ ಸಮುದಾಯದವರು ಇಲ್ಲಿಗೆ ಬರುತ್ತಾರೆ. ಸ್ವಚ್ಛತೆ ಕಾಪಾಡುವುದು ಆದ್ಯ ಕರ್ತವ್ಯ ಎಂಬುದನ್ನು ಪ್ರವಾಸಿಗರು ತಿಳಿದುಕೊಳ್ಳಬೇಕು. ನಿಯಮ ಪಾಲಿಸದವರ ವಿರುದ್ಧ ಸಂಬಂಧಪಟ್ಟವರು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು’ ಎಂದು ಪ್ರವಾಸಿ ಸಯ್ಯದ್‌ ಹುಸೇನ್‌ ಹೇಳುತ್ತಾರೆ.

‘ದರ್ಗಾ ಪ್ರದೇಶ, ಆಸುಪಾಸಿನ ಅಂಗಡಿಗಳ ಜಾಗದ ಸ್ವಚ್ಛತೆ ನಿರ್ವಹಣೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಸ್ವಚ್ಛತಾ ಕಾರ್ಯ ಇಲ್ಲಿಗೆ ಒಬ್ಬ ಸಿಬ್ಬಂದಿ ನೇಮಿಸಲಾಗಿದೆ. ಪ್ಲಾಸ್ಟಿಕ್‌, ಕಸಕಡ್ಡಿ, ತ್ಯಾಜ್ಯ ತೆರವು ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು’ ಎಂದು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲವರು ಮೋಜುಮಸ್ತಿಗಾಗಿ ಗಿರಿಶ್ರೇಣಿಗೆ ಪ್ರವಾಸಕ್ಕೆ ಬರುತ್ತಾರೆ. ಮೋಜು ಮಸ್ತಿ ಮಾಡಿ, ಗಿರಿಗೆ ಪ್ಲಾಸ್ಟಿಕ್‌ ‘ಕೊಡುಗೆ’ ನೀಡುತ್ತಾರೆ. ವಾರಾಂತ್ಯದಲ್ಲಿ ವಾಹನಗಳ ದಟ್ಟಣೆ ನಿರ್ವಹಿಸುವುದು ಬಹಳ ಕಷ್ಟ. ನಿರ್ವಹಣೆಗೆ ಇಬ್ಬರು, ಮೂವರು ಪೊಲೀಸರನ್ನು ಮಾತ್ರ ನಿಯೋಜಿಸುತ್ತಾರೆ. ಕಾಟಾಚಾರಕ್ಕೆ ವಾಹನ ತಪಾಸಣೆ ನಡೆಯುತ್ತದೆ. ಪ್ಲಾಸ್ಟಿಕ್‌ ಬಳಸಿದರೆ ದಂಡ ವಿಧಿಸಲು ಅವಕಾಶ ಇದೆ. ಆದರೆ, ಈವರೆಗೆ ದಂಡ ವಿಧಿಸಿದ ನಿದರ್ಶನ ಇದ್ದಂತಿಲ್ಲ’ ಎಂದು ಪರಿಸರವಾದಿಯೊಬ್ಬರು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ಗಿರಿ ಶ್ರೇಣಿ ಮಾರ್ಗದಲ್ಲಿ ಈ ಹಿಂದೆ ಕೆಲವು ಕಡೆ ಆಸ್ಪತ್ರೆ ತ್ಯಾಜ್ಯ ಎಸೆದಿದ್ದ ನಿದರ್ಶನಗಳು ಇವೆ. ಪ್ಲಾಸ್ಟಿಕ್‌, ತ್ಯಾಜ್ಯವನ್ನು ವಾಹನಗಳಲ್ಲಿ ಒಯ್ದು ಮಾರ್ಗ ಮಧ್ಯೆ ಬಿಸಾಡುತ್ತಾರೆ. ಗಿರಿ ಪರಿಸರಕ್ಕೆ ಧಕ್ಕೆ ಎದುರಾಗಿದೆ. ಗಿರಿಯಲ್ಲಿ ಪ್ಲಾಸ್ಟಿಕ್‌ ಬಳಕೆ ತಡೆಗಟ್ಟುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT