ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣುರಾಶಿ ಅರೆಬರೆ ತೆರವು; ಸಂಚಾರ ತಾಪತ್ರಯ

ಗಿರಿ ಶ್ರೇಣಿ ಮಾರ್ಗ; ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮಣ್ಣು
Last Updated 20 ಅಕ್ಟೋಬರ್ 2018, 15:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಗಿರಿಶ್ರೇಣಿಯಲ್ಲಿ ಎರಡು ತಿಂಗಳ ಹಿಂದೆ ಮಳೆಯಿಂದಾಗಿ ಗುಡ್ಡದ ಮಣ್ಣು ಅಲ್ಲಲ್ಲಿ ಕುಸಿದಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮಣ್ಣಿನ ರಾಶಿಯನ್ನು ಅರೆಬರೆ ತೆರವುಗೊಳಿಸಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ತ್ರಾಸವಾಗಿದೆ.

ಮಳೆಯ ರುದ್ರನರ್ತನಕ್ಕೆ ಗಿರಿಶ್ರೇಣಿಯಲ್ಲಿ ಗುಡ್ಡದ ಮಣ್ಣು ಕೆಲವು ಕಡೆ ಕುಸಿದಿತ್ತು. ರಸ್ತೆಗೆ ಅಡ್ಡಲಾಗಿ ಮಣ್ಣುರಾಶಿ ಬಿದ್ದು ವಾಹನ ಸಂಚಾರಕ್ಕೆ ತೊಡಕಾಗಿತ್ತು. ಸಂಚಾರಕ್ಕೆ ಅನುವು ಮಾಡಲು ಕ್ರಮವಹಿಸಿ ರಸ್ತೆಯಲ್ಲಿನ ಮಣ್ಣಿನ ರಾಶಿಯನ್ನು ಅರ್ಧಂಬರ್ಧ ತೆರವು ಮಾಡಲಾಗಿತ್ತು. ಒಂದು ವಾಹನ (ಕಾರು, ಜೀಪು, ಬಸ್ಸು…) ಸಂಚರಿಸುವಷ್ಟು ವ್ಯವಸ್ಥೆ ಮಾಡಲಾಗಿತ್ತು. ವಾಹನಗಳು ಎದುರುಬದರಾಗಿ ಸಾಗಲು ಹರಸಾಹಸಪಡಬೇಕಾಗಿದೆ.

ಕವಿಗಲ್‌ ಗಂಡಿ ಅರಣ್ಯ ತನಿಖಾ ಠಾಣೆಯಿಂದ ಅನತಿ ದೂರದಲ್ಲಿ ಸೇತುವೆಯೊಂದರ ಬಳಿ ರಸ್ತೆ ಗುಂಡಿಮಯವಾಗಿದೆ. ಇಲ್ಲಿ ದ್ವಿಚಕ್ರವಾಹನ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ವಾರಾಂತ್ಯ, ದಸರಾ ರಜೆಯಿಂದಾಗಿ ಕಾಫಿನಾಡಿಗೆ ಪ್ರವಾಸಿಗರ ದಂಡು ಹರಿಯುತ್ತಿದೆ. ಕೈಮರದ ಚಂದ್ರದ್ರೋಣ ಅರಣ್ಯ ತನಿಖಾ ಠಾಣೆ ದಾಖಲೆ ಪ್ರಕಾರ ಇದೇ 20ರಂದು1,902 ವಾಹನಗಳು, 19ರಂದು 1,988 ವಾಹನಗಳು ಗಿರಿಶ್ರೇಣಿ ಮಾರ್ಗದಲ್ಲಿ ಸಂಚರಿಸಿವೆ. ವಾಹನಗಳ ನೂಕುನುಗ್ಗಲು ನಿರ್ವಹಣೆಯೇ ಪೊಲೀಸರಿಗೆ ಸವಾಲಾಗಿದೆ.

ಘಟ್ಟಸಾಲಿನ ಈ ರಸ್ತೆಯಲ್ಲಿ ವಾಹನ ಚಾಲನೆ ಪ್ರಯಾಸದ ಕೆಲಸ. ನಿಯಂತ್ರಣ ಕಳೆದುಕೊಂಡರೆ ಪ್ರಪಾತ ದರ್ಶನ. ಮಾರ್ಗದಲ್ಲಿ ಜಾಮಾದರೆ ವಾಹನಗಳು ಎರಡು ಕಡೆಗಳಲ್ಲಿ ಕಿಲೋ ಮೀಟರ್‌ಗಟ್ಟಲೆ ಸಾಲುಗಟ್ಟಿ ನಿಲ್ಲುತ್ತವೆ. ನಡುವೆ ಸಿಲುಕಿದರೆ ಹಿಂದಕ್ಕೂ, ಮುಂದಕ್ಕೂ ಸಾಗಲಾಗದೆ ತಾಸುಗಟ್ಟಲೆ ಕಾಯಬೇಕಾಗುತ್ತದೆ.

‘ಗುಡ್ಡದ ಮಣ್ಣು ರಸ್ತೆಗೆ ಅಡ್ಡಲಾಗಿ ಬಿದ್ದಾಗ ‘ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ’ ತರಾತುರಿಯಲ್ಲಿ ಅರೆಬರೆ ಕೆಲಸ ಮಾಡಿಸುತ್ತಾರೆ. ಮತ್ತೆ ಆ ಕಡೆಗೆ ಗಮನಹರಿಸುವುದಿಲ್ಲ. ಈ ರಸ್ತೆಯ ಕಂದಕ, ಮಣ್ಣಿನರಾಶಿ, ಕೊರಕಲು, ತಿರುವುಗಳನ್ನು ಹಾದು ಸಾಗುವ ಕಷ್ಟ ಹೇಳತೀರದು’ ಎಂದು ಪ್ರವಾಸಿ ಬಾಡಿಗೆ ಜೀಪು ಚಾಲಕ ಕೃಷ್ಣ ಗೋಳು ತೋಡಿಕೊಂಡರು.

‘ಈ ವರ್ಷ ಗಿರಿಯಲ್ಲಿ ಪ್ರವಾಸಿ ವಾಹನಗಳ ದಟ್ಟಣೆ ಅತೀವವಾಗಿದೆ. ಹಿಂದೆಂದೂ ಇಷ್ಟೊಂದು ವಾಹನಗಳು ಬರುತ್ತಿರಲಿಲ್ಲ. 12 ವರ್ಷಗಳಿಗೊಮ್ಮೆ ಅರಳುವ ಕುರಿಂಜಿ ಹೂವ ಅರಳಿದೆ ಎಂಬ ಗಾಳಿ ಸಂದೇಶ, ಚಿತ್ರ ಸಾಮಾಜಿಕ ಜಾಲಾತಾಣದಲ್ಲಿ ಹರಡಿದ್ದು ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ದಿನೇದಿನೇ ರಸ್ತೆ ಹಾಳಾಗುತ್ತಿದೆ’ ಎಂದು ಪ್ರವಾಸಿ ಕಾರು ಚಾಲಕ ರಫೀಕ್‌ ಹೇಳುತ್ತಾರೆ.

ಮಳೆ ಬಿಡುವು ನೀಡಿದ ನಂತರ ಮಣ್ಣಿನ ರಾಶಿ ತೆರವುಗೊಳಿಸಲಾಗುವುದು ಎಂದು ಲೋಕೋಪಯೋಗಿ ಎಂಜಿನಿಯರುಗಳು ಹೇಳಿದ್ದರು. ಆದರೆ, ತೆರವಿಗೆ ಗಮನ ಹರಿಸಿಲ್ಲ. ಶ್ರೀರಾಮಸೇನೆ ವತಿಯಿಂದ ಜರುಗುವ ದತ್ತಮಾಲಾ ಅಭಿಯಾನಕ್ಕೆ ದಿನಗಣನೆ ಆರಂಭವಾಗಿದೆ. ಅಭಿಯಾನದ ಕೊನೆ ದಿನ ಸಹಸ್ರಾರು ದತ್ತಭಕ್ತರು ದತ್ತಪಾದುಕೆ ದರ್ಶನಕ್ಕೆ ಗಿರಿಗೆ ತೆರಳುತ್ತಾರೆ.

‘ಚಂದ್ರದ್ರೋಣ ಪರ್ವತಶ್ರೇಣಿಯ ಶೋಲಾ ಕಾಡು ಸೂಕ್ಷ್ಮ ಪ್ರದೇಶ. ಸಹಸ್ರಾರು ವಾಹನಗಳ ಸಂಚಾರದಿಂದ ಗಿರಿಶ್ರೇಣಿ ನಲುಗುತ್ತಿದೆ. ಪ್ರವಾಸಿಗರ ದಂಡು, ವಾಹನಗಳ ಅಬ್ಬರ ಇಲ್ಲಿನ ಪರಿಸರಕ್ಕೆ ಮಾರಕವಾಗಿದೆ. ಅಳಿಲು, ಮೊಲ, ಹಾವು ಮೊದಲಾದವು ವಾಹನಗಳಿಗೆ ಬಲಿಯಾಗಿವೆ. ಪ್ರವಾಸೋದ್ಯಮ ಹೆಸರಿನಲ್ಲಿ ಪರಿಸರ ಹಾಳು ಮಾಡುವುದು ಸರಿಯಲ್ಲ. ವಾಹನಗಳ ಸಂಚಾರಕ್ಕೆ ಕಡಿವಾಣ ಹಾಕಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರಾಸಕ್ತರೊಬ್ಬರು ಒತ್ತಾಯಿಸಿದ್ದಾರೆ.

* ರಿಪೇರಿ ಕೆಲಸವನ್ನು ಶೀಘ್ರದಲ್ಲಿ ಶುರು ಮಾಡಲಾಗುವುದು. ಮಣ್ಣಿನ ರಾಶಿ ತೆರವುಗೊಳಿಸಲಾಗುವುದು. ಗುಂಡಿಗಳಿಗೆ ಜಲ್ಲಿ ಹಾಕಿ ಮುಚ್ಚಿ ಡಾಂಬರು ಹಾಕುತ್ತೇವೆ. ರಸ್ತೆಯನ್ನು ಅಣಿಗೊಳಿಸುತ್ತೇವೆ.

– ಎಚ್‌.ಎಲ್‌.ಬಸವರಾಜು,ಎಇಇ, ಲೋಕೋಪಯೋಗಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT