ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ಕಟ್ಟೀಮನಿ ಸಾಹಿತ್ಯ ಸಹಕಾರಿ

‘ಬಸವರಾಜಕಟ್ಟೀಮನಿ:ಮರು ಚಿಂತನೆ’ ಸಮಾವೇಶದಲ್ಲಿ ಡಾ.ಕುಮಾರ ಅಭಿಮತ
Last Updated 18 ಜುಲೈ 2019, 12:54 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬಸವರಾಜ ಕಟ್ಟೀಮನಿ ಅವರ ಸಾಹಿತ್ಯದಲ್ಲಿ ಸಮಾಜ ಸುಧಾರಣೆಯ ಧ್ವನಿ ಇದೆ. ಸೃಜನಶೀಲ ವ್ಯಕ್ತಿತ್ವ ರೂಪಿಸಿಕೊಳ್ಳಲು ಅವರ ಸಾಹಿತ್ಯ ಸಹಕಾರಿ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.

ಬೆಳಗಾವಿಯ ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಕ್ಯಾತನಬೀಡು ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಎಸ್‌ಟಿಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಬಸವರಾಜ ಕಟ್ಟೀಮನಿ:ಮರು ಚಿಂತನೆ’ ರಾಜ್ಯಮಟ್ಟದ ಸಮಾವೇಶ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಂಪರೆಯ ಪ್ರಗತಿಶೀಲ ಮತ್ತು ಆಧುನಿಕ ಸಾಹಿತ್ಯ ಬೆಳವಣಿಗೆಯಲ್ಲಿ ಕಟ್ಟೀಮನಿ ಪಾತ್ರ ಮಹತ್ವದ್ದಾಗಿದೆ. ಜಾತಿ ಪದ್ಧತಿ, ಶೋಷಣೆ, ದೌರ್ಜನ್ಯ, ವರದಕ್ಷಿಣೆ ವಿರುದ್ಧ ಅವರು ಸಾಹಿತ್ಯ ರಚಿಸಿದ್ದಾರೆ ಎಂದರು.

ಕಟ್ಟೀಮನಿ ಅವರು ಕಾರ್ಲ್‌ ಮಾರ್ಕ್ಸ್ ತತ್ವಗಳಿಂದ ಪ್ರಭಾವಿತರಾಗಿದ್ದರು. ಬಹುಮುಖ ಪ್ರತಿಭೆಯಾಗಿದ್ದರು. ಸಾಹಿತಿ, ಕವಿ, ಅಂಕಣಕಾರ, ಕಾದಂಬರಿಕಾರರಾಗಿದ್ದರು. ವಿಧಾನಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು ಎಂದರು.

ಎಸ್‌ಟಿಜೆ ಶಿಕ್ಷಣ ಸಂಸ್ಥೆ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್.ನಂಜುಂಡಪ್ಪ ಮಾತನಾಡಿ, ಕಟ್ಟೀಮನಿ ಅವರು 692 ಸಣ್ಣ ಕಥೆಗಳು, 40 ಕಾದಂಬರಿ ರಚಿಸಿದ್ದಾರೆ. ಮಾಡಿ ಮಡಿದವರು, ಜ್ವಾಲಾಮುಖಿ, ಬೀದಿಯಲ್ಲಿ ಬಿದ್ದವಳು, ಜರತಾರಿ ಜಗದ್ಗುರು, ಖಾನಾವಳಿ ಪ್ರಮುಖವಾದವು ಎಂದರು.

ಸಾಹಿತಿ ಡಾ.ಬಸವರಾಜ ಸಾದರ ಮಾತನಾಡಿ, ಕಟ್ಟೀಮನಿ ಅವರು 1919ರ ಅಕ್ಟೋಬರ್ 5ರಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮದ ಬಡಕುಟುಂಬದಲ್ಲಿ ಜನಿಸಿದರು. ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸದಸ್ಯರಾದ ಶಿರೀಷಜೋಷಿ, ರಾಮಕೃಷ್ಣ ಮರಾಠೆ, ಬಳಾಸಾಹೇಬ ಲೋಕಾಪುರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮಂಜುನಾಥಸ್ವಾಮಿ, ಕ್ಯಾತನಬೀಡು ಪ್ರತಿಷ್ಠಾನದ ಅಧ್ಯಕ್ಷ ರವೀಶ್ ಬಸಪ್ಪ, ಎಸ್‌ಟಿಜೆ ಮಹಿಳಾ ಕಾಲೇಜಿನ ಪ್ರಾಚಾರ್ಯೆ ಪ್ರೊ.ಜೆ.ಕೆ.ಭಾರತಿ, ಪಿಯು ವಿಭಾಗದ ಪ್ರಾಚಾರ್ಯ ಹಳದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT