ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆ ಮಾರುಕಟ್ಟೆ ಸುಸಜ್ಜಿತಗೊಳಿಸಲು ಆಗ್ರಹ

ಬೀರೂರು ಪುರಸಭೆ- ಬಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು
Last Updated 8 ಫೆಬ್ರುವರಿ 2023, 7:16 IST
ಅಕ್ಷರ ಗಾತ್ರ

ಬೀರೂರು: 2023-24ನೇ ಸಾಲಿಗೆ ಪುರಸಭೆ ಆಯವ್ಯಯ ಮಂಡನೆ ಹಿನ್ನೆಲೆಯಲ್ಲಿ ಬಜೆಟ್ ಪೂರ್ವಭಾವಿ ಸಭೆ ಮಂಗಳವಾರ ಇಲ್ಲಿ ಎಂ.ಪಿ.ಸುದರ್ಶನ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಾರ್ವಜನಿಕರ ಪರವಾಗಿ ವಿಷಯ ಪ್ರಸ್ತಾಪಿಸಿದ ಕೆ.ಎಸ್.ಸೋಮಶೇಖರ್, ಪಟ್ಟಣದ ಸಂತೆ ಮೈದಾನದಲ್ಲಿ ಗ್ರಾಹಕರು ಮತ್ತು ವರ್ತಕರಿಗೆ ಸೂಕ್ತ ಮೂಲ ಸೌಕರ್ಯಗಳು ಇಲ್ಲ. ಸಂತೆ ಹರಾಜಿನಿಂದ ಪುರಸಭೆಗೆ ವಾರ್ಷಿಕ ಆದಾಯ ಬಂದರೂ ವ್ಯಾಪಾರ ನಡೆಸಲು ಕಟ್ಟೆ, ಚಾವಣಿ ನಿರ್ಮಾಣ, ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ, ರಸ್ತೆಗಳ ಡಾಂಬರೀಕರಣ ಸಮರ್ಪಕವಾಗಿಲ್ಲ. ಮಾರುಕಟ್ಟೆ ಪ್ರದೇಶವನ್ನು ಸುಸಜ್ಜಿತಗೊಳಿಸುವಲ್ಲಿ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪಟ್ಟಣದ ಹೊರವಲಯದಲ್ಲಿ ಸ್ವಾಗತ ಮತ್ತು ವಂದನೆ ಕಮಾನುಗಳನ್ನು ಅಳವಡಿಸಲು ಹಲವಾರು ಬಾರಿ ಮನವಿ ಮಾಡಲಾಗಿತ್ತು. ಆದರೆ, ಈವರೆಗೆ ಕ್ರಮ ವಹಿಸಿಲ್ಲ. ಪಟ್ಟಣದ ಹಲವು ಬಡಾವಣೆಗಳ ಖಾಲಿ ನಿವೇಶನಗಳಲ್ಲಿ ವಿಪರೀತ ಕಳೆಗಿಡಗಳು ಬೆಳೆದಿವೆ. ಈ ಹಿಂದೆ ಪುರಸಭೆ ವತಿಯಿಂದ ನಿವೇಶನಗಳನ್ನು ಸ್ವಚ್ಛಗೊಳಿಸಿ ನಿವೇಶನದಾರರ ಕಂದಾಯಕ್ಕೆ ಸೇರಿಸಿ ದಂಡ ವಸೂಲು ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಈ ಕುರಿತು ಕ್ರಮ ವಹಿಸಬೇಕು. ಪಟ್ಟಣದ ಹಲವು ಬಡಾವಣೆಗಳಲ್ಲಿ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿ ಮಾಡಬೇಕು. ಯುಜಿಡಿ ಅವ್ಯವಸ್ಥೆಯ ಆಗರವಾಗಿದ್ದು ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ನಾಗರಿಕ ರಾಜು ಕೋರಿದರು.

ಕೆ.ಎನ್.ವಿನಾಯಕ್ ಮಾತನಾಡಿ, ‘ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಉದ್ಯಾನಗಳಲ್ಲಿ ಬಹುತೇಕ ಉದ್ಯಾನಗಳು ನಿರ್ಲಕ್ಷ್ಯಕ್ಕೆ ಮತ್ತು ಒತ್ತುವರಿಗೆ ಒಳಗಾಗಿವೆ. ಇದಕ್ಕೆ ಭದ್ರತೆ ಕಲ್ಪಿಸಿ ಹೆಚ್ಚಿನ ಅನುದಾನ ನೀಡಿ, ಪರಿಸರ ಸಂರಕ್ಷಣೆ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಮನವಿ ಮಾಡಿದರು.

ನಾಗರಿಕರ ಕೋರಿಕೆಗೆ ಉತ್ತರಿಸಿದ ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್, ‘ಸಭೆಯಲ್ಲಿ ವ್ಯಕ್ತವಾಗಿರುವ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಮೀಸಲಿಟ್ಟು, ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಲಾಗುವುದು. ಈಗಾಗಲೇ ಪಟ್ಟಣದ ನಾಲ್ಕು ಮುಖ್ಯರಸ್ತೆಗಳ ಅಭಿವೃದ್ಧಿ ಹಾಗೂ ವಿದ್ಯುತ್ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸ್ವಾಗತ ಕಮಾನು ಅಳವಡಿಸುವಲ್ಲಿ ವಿಳಂಬವಾಗಿದೆ. ಆದರೆ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಬೈಪಾಸ್ ಕಾಮಗಾರಿ ಪೂರ್ಣಗೊಂಡ ನಂತರ ನಿಗದಿತ ಸ್ಥಳದಲ್ಲಿ ಅಳವಡಿಸಲಾಗುವುದು’ ಎಂದರು.

ಉಪಾಧ್ಯಕ್ಷೆ ಮೀನಾಕ್ಷಮ್ಮ, ಮುಖ್ಯಾಧಿಕಾರಿ ಎನ್.ಮಂಜಪ್ಪ, ಸದಸ್ಯರಾದ ಎನ್.ಎಂ.ನಾಗರಾಜ್, ರಘು, ಮಾನಿಕ್‍ಬಾಷಾ, ಜಿ.ಲಕ್ಷ್ಮಣ್, ಸಹನಾ ಸಾಕಮ್ಮ, ಭಾಗ್ಯಲಕ್ಷ್ಮಿ ಮೋಹನ್, ಆರೋಗ್ಯ ನಿರೀಕ್ಷಕ ಲಕ್ಷ್ಮಣ್, ಕಚೇರಿ ವ್ಯವಸ್ಥಾಪಕ ಪ್ರಕಾಶ್, ಕಂದಾಯ ಅಧಿಕಾರಿ ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT