ಗುರುವಾರ , ಅಕ್ಟೋಬರ್ 17, 2019
22 °C

ಪ್ರಾಯೋಗಿಕವಾಗಿ ಹರಿದ ಭದ್ರೆ: ಕಾಲುವೆಗಳ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು

Published:
Updated:
Prajavani

ತರೀಕೆರೆ: ತಾಲ್ಲೂಕಿನ ಬೆಟ್ಟತಾವರೆಕೆರೆ ಪಂಪ್ ಹೌಸ್-2ರ ಮೂಲಕ ಮಳೆಯಿಂದ ಸಂಗ್ರಹವಾಗಿದ್ದ ನೀರನ್ನು ಭದ್ರಾ ಮೇಲ್ದಂಡೆ ಕಾಲುವೆಗಳ ಮೂಲಕ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರಕ್ಕೆ ಪ್ರಾಯೋಗಿಕವಾಗಿ ಹರಿಸಲಾಗಿದ್ದು, ಸದ್ಯದಲ್ಲಿಯೇ ಭದ್ರೆಯ ನೀರು ದೂರದ ಜಿಲ್ಲೆಗಳಿಗೆ ಸೇರುವುದು ನಿಶ್ಚಿತವಾದಂತಾಗಿದೆ.

ಗುರುವಾರ ಭದ್ರಾ ಮೇಲ್ದಂಡೆ ಯೋಜನೆಯ ಅಧಿಕಾರಿಗಳ ತಂಡವು ಈ ಕಾರ್ಯಕ್ಕೆ ಚಾಲನೆ ನೀಡಿದ್ದು, ಪ್ರಾಯೋಗಿಕ ನೀರಿನ ಹರಿವು ಯಶಸ್ವಿಯಾಗಲಿದ್ದು, ಮುಂದಿನ ದಿನಗಳಲ್ಲಿ ಸರ್ಕಾರವು ಅಧಿಕೃತ ಚಾಲನೆ ನೀಡಲಿದೆ.

ಬೆಟ್ಟತಾವರೆಕೆರೆಯ ಪಂಪ್ ಹೌಸ್ -2ರಿಂದ ಪ್ರಾಯೋಗಿಕವಾಗಿ 500 ಕ್ಯೂಸೆಕ್‌ ನೀರನ್ನು ಹರಿಯಬಿಡಲಾಗಿದೆ. 18,412 ಅಶ್ವಶಕ್ತಿಯ ವಿದ್ಯುತ್ ಯಂತ್ರಗಳಿಂದ 44 ಮೀಟರ್ ಎತ್ತರಕ್ಕೆ ನೀರನ್ನು ಲಿಫ್ಟ್ ಮಾಡಿ ನಂತರ ಕಾಲುವೆಗಳಲ್ಲಿ ಗ್ರಾವೀಟೆಷನ್ ಮೂಲಕ ನರಸೀಪುರ, ಅಜ್ಜಂಪುರ, ಹೆಬ್ಬೂರು ಸುರಂಗ ಮಾರ್ಗ, ವೈಜಂಕ್ಷನ್, ವೇದಾವತಿ ವ್ಯಾಲಿ ನಂತರದಲ್ಲಿ ವಾಣಿ ವಿಲಾಸ ಸಾಗರಕ್ಕೆ ಎರಡು ದಿನಗಳಲ್ಲಿ ತಲುಪಲಿದೆ ಎಂದು ಭದ್ರಾ ಮೇಲ್ದಂಡೆ ಎಇಇ ರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರೈತರಿಂದ ಎದುರಾಗಿದ್ದ ಪ್ರತಿರೋಧ : ಯೋಜನೆಯ ಆರಂಭದಲ್ಲಿ ತಾಲ್ಲೂಕಿನ ರೈತರು ಅಂತರ್ಜಲ ಕುಸಿಯುವ ಭೀತಿಯಿಂದಾಗಿ ಕಾಮಗಾರಿಗೆ ತೀವ್ರ ವಿರೋಧ ವ್ಯಕ್ತಪಡಿಸಿ ಭೂಮಿಯನ್ನು ನೀಡಲು ನಿರಾಕರಿಸಿದ್ದರು. ನಂತರ ಕುಡ್ಲೂರು, ನಾಗವಂಗಲ, ಮುಂಡ್ರೆ ಹಾಗೂ ಇತರೇ ಭಾಗದ ರೈತರು ಸರ್ಕಾರ ನೀಡಿದ ವಾಗ್ದಾನದಂತೆ ಕೆರೆಗಳಿಗೆ ಮೊದಲು ನೀರು ತುಂಬಿಸಿ ನಂತರದಲ್ಲಿ ನೀರು ಹರಿಸಿ ಎಂದು ಪ್ರತಿರೋಧ ವ್ಯಕ್ತಪಡಿಸಿದ್ದರು.

ಯೋಜನೆಯ ರೂಪುರೇಷೆ: ಸುಮಾರು ₹ 13 ಸಾವಿರ ಕೋಟಿಯ ಈ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯನ್ನು ರಾಜ್ಯ ಸರ್ಕಾರವು 2008ರಲ್ಲಿ ಕೈಗೆತ್ತಿಕೊಂಡಿತ್ತು. ಭದ್ರಾ ನದಿಯಿಂದ ಲಭ್ಯವಿರುವ 29.9 ಟಿಎಂಸಿ ಅಡಿ ನೀರನ್ನು ಹನಿ ನೀರಾವರಿ ಪದ್ಧತಿ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬರುವ 5.57 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಮಾಡುವುದರೊಂದಿಗೆ ಒಟ್ಟು 367 ಕೆರೆಗಳನ್ನು ತುಂಬಿಸುವುದಾಗಿದೆ..

Post Comments (+)