ಹೊರನಾಡು ಬದಲಿ ಮಾರ್ಗದ ಭರಪೂರ ಜಲಪಾತಗಳು!

7

ಹೊರನಾಡು ಬದಲಿ ಮಾರ್ಗದ ಭರಪೂರ ಜಲಪಾತಗಳು!

Published:
Updated:
Deccan Herald

ಕಳಸದಲ್ಲಿ ಮಳೆಯು ತಂದಿರುವ ಅನಾಹುತಗಳ ಪಟ್ಟಿ ದೊಡ್ಡದೇ ಇದೆ. ಕೃಷಿಗೆ ಭಾರಿ ನಷ್ಟ ತಂದ ವರ್ಷಧಾರೆಯು ಅನೇಕ ಮನೆಗಳನ್ನೂ ನೆಲಸಮ ಮಾಡಿದೆ. ಸತತ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಮಟ್ಟ ದಾಖಲೆಯ ಮಟ್ಟಕ್ಕೆ ಏರುತ್ತಾ ಕಳಸ- ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆಯನ್ನು ಈ ಬಾರಿ ಬಹುಪಾಲು ಮಾಯವೇ ಮಾಡಿದೆ.

ಆದರೆ, ಮಳೆಯ ಈ ಅವಾಂತರಗಳ ಮಧ್ಯೆಯೂ ಪ್ರಕೃತಿಯ ಸೊಬಗು ಪ್ರಕೃತಿಪ್ರಿಯರಲ್ಲಿ ಸಂತಸವನ್ನು ಉಂಟು ಮಾಡಿದೆ. ರಸ್ತೆಯ ಪಕ್ಕದಲ್ಲಿ ಅಲ್ಲಲ್ಲಿ ಬೆಟ್ಟಗುಡ್ಡದಿಂದ ಜಲಧಾರೆ ಸುರಿಯುತ್ತಿದ್ದು, ಜಲಪಾತದ ಆಕಾರದಲ್ಲಿ ಕಂಗೊಳಿಸುತ್ತಿವೆ.

ಹೆಬ್ಬೊಳೆ ಸೇತುವೆ ಮೇಲೆ ಭದ್ರಾ ನದಿ ನೀರು ಹರಿದಾಗಲೆಲ್ಲಾ ಕಳಸ- ಹೊರನಾಡು ರಸ್ತೆಯ ಸಂಚಾರವೇ ಕಡಿತ ಎಂಬ ತಪ್ಪು ಮಾಹಿತಿ ಕೆಲವರಲ್ಲಿದೆ. ಆದರೆ, ಇದಕ್ಕೆ ಪರ್ಯಾಯವಾದ ಹಳುವಳ್ಳಿ-ಹೊರನಾಡು ರಸ್ತೆ ಬಗ್ಗೆ ಪ್ರಚಾರವೇ ಇಲ್ಲದೆ ಪ್ರವಾಸಿಗರು ತಮ್ಮ ಅನ್ನಪೂರ್ಣೇಶ್ವರಿ ದರ್ಶನದ ಯೋಜನೆಯನ್ನೆ ಕೈಬಿಡುತ್ತಿದ್ದಾರೆ.

ಕಳಸ- ಹಳುವಳ್ಳಿ- ಅಡಕೋಡು- ದಾರಿಮನೆ- ಹೊರನಾಡು ಈಗ ಉತ್ತಮ ಸ್ಥಿತಿಯಲ್ಲಿ ಇರುವ ಪ್ರಮುಖ ಜಿಲ್ಲಾ ರಸ್ತೆಯೇ ಆಗಿದೆ. ಕೆಲವೊಮ್ಮೆ ಭೂಕುಸಿತದಂತಹ ಘಟನೆ ನಡೆದರೂ ಲೋಕೋಪಯೋಗಿ ಇಲಾಖೆ ತುರ್ತಾಗಿ ತೆರವು ಕಾರ್ಯಾಚರಣೆ ಮಾಡುತ್ತಲೇ ಇದೆ. ಆದ್ದರಿಂದ ಈ ಬದಲಿ ಮಾರ್ಗ ಬಳಸಿ ಎಂತಹ ಮಳೆಯ ದಿನದಲ್ಲೂ ಹೊರನಾಡು ತಲುಪಬಹುದಾಗಿದೆ.
ಈ ಪರ್ಯಾಯ ರಸ್ತೆಯಲ್ಲಿ ಸಂಚರಿಸುವ ಪ್ರವಾಸಿಗರಿಗೆ ಸಿಗುವ ವಿಶೇಷ ಲಾಭ ಸಿಗುತ್ತದೆ. ಇಲ್ಲಿ ರಸ್ತೆ ಬದಿಯೇ ಕಂಡು ಬರುವ ಎರಡು ಮೋಹಕ ಜಲಪಾತಗಳು ಎಲ್ಲರ ಗಮನ ಸೆಳೆಯುತ್ತದೆ. ಹಳುವಳ್ಳಿಯಿಂದ ಹೊರನಾಡಿನ ಕಡೆಗೆ ಸುಮಾರು 3 ಕಿ.ಮೀ ಸಾಗುತ್ತಿದ್ದಂತೆ ರಸ್ತೆಯ ಬಲಭಾಗದ ಧರೆಯಿಂದ ಭೋರ್ಗರೆತದ ಸದ್ದು ಕೇಳಿ ಬರುತ್ತದೆ.

ಸುಮಾರು 40 ಅಡಿ ಎತ್ತರದಿಂದ ನೇರವಾಗಿ ಧುಮುಕುವ ಪುಟ್ಟ ಹಳ್ಳವೊಂದು ಭಾರಿ ಮಳೆಯ ದಿನಗಳಲ್ಲಿ ಸೃಷ್ಟಿಸುವ ಜಲಪಾತ ಇದು. ಇದಕ್ಕೆ ಸಮಾನಾಂತರವಾಗಿ 20 ಅಡಿ ದೂರದಲ್ಲಿ ಬೆಳ್ಳನೆಯ ಮತ್ತೊಂದು ಜಲಪಾತವೂ ಅಷ್ಟೇ ವೇಗವಾಗಿ ಧರೆಯನ್ನು ಅಪ್ಪಲು ಧುಮುಕುತ್ತದೆ. ಮೊದೆಗಳ ನಡುವಿನ ಕತ್ತಲಿನಿಂದ ಧುಮುಕುವ ಈ ಜಲಪಾತ ಅಲ್ಲಿ ಬೆಳಕನು ಸೃಷ್ಟಿಸುವ ದೃಶ್ಯ ವಿಸ್ಮಯ ತರುತ್ತದೆ.

ಹಾಗೆ ಮತ್ತೆರಡು ಕಿ.ಮೀ ಮುಂದಕ್ಕೆ ಸಾಗಿದರೆ ಅಡಕೋಡು ಬಳಿ ಮತ್ತೊಂದು ಜಲಧಾರೆ ಗಮನ ಸೆಳೆಯುತ್ತದೆ. 30 ಅಡಿ ಎತ್ತರವಿದ್ದರೂ ನಾಲ್ಕೈದು ಬಾರಿ ಬಂಡೆಗಳ ಮೇಲೆ ಬಳುಕುತ್ತಾ ಇಳೆಯನ್ನು ಅಪ್ಪುವ ವೈಯಾರ ನೋಡುವುದೇ ಚಂದ. ಅನೇಕ ಪ್ರವಾಸಿಗರು ಮತ್ತು ಮಕ್ಕಳು ಈ ಎರಡೂ ಜಲಪಾತಗಳ ಬಳಿ ನಿಂತು ಜಲರಾಶಿಗೆ ಮೈಯೊಡ್ಡುವ ಅನುಭವ ಪಡೆಯುತ್ತಾರೆ.

ಹೆಬ್ಬೊಳೆ ರಸ್ತೆ ಕಡಿತದ ಭೀತಿಯಲ್ಲಿ ಹಳುವಳ್ಳಿ ಮೂಲಕ ಹೊರನಾಡು ತಲುಪುವ ಧಾವಂತದಲ್ಲಿರುವ ಪ್ರವಾಸಿಗರಿಗೆ ಈ ಎರಡೂ ಜಲಪಾತಗಳು ವಿಸ್ಮಯ ಮೂಡಿಸುವ ಜತೆಗೆ ತುಸು ಮನಸಿಗೆ ಮುದ ನೀಡುತ್ತದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !