ಬುಧವಾರ, ಜೂನ್ 29, 2022
25 °C
ಕೊಳವೆಬಾವಿ ವಿದ್ಯುತ್‌ ಸಂಪರ್ಕಕ್ಕೆ ರೈತರಿಂದ ಹೆಚ್ಚುವರಿ ಹಣ ವಸೂಲಿ ಆರೋಪ

ಬೀರೂರು: ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀರೂರು: ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಸರ್ಕಾರ ನಿಗದಿ ಪಡಿಸಿರುವ ದರಕ್ಕಿಂತ ಹೆಚ್ಚುವರಿಯಾಗಿ ಹಣ ವಸೂಲು ಮಾಡಲಾಗುತ್ತಿದೆ ಎಂದು ಜನಸಂಪರ್ಕ ಸಭೆಯಲ್ಲಿ ರೈತರೊಬ್ಬರು ಆರೋಪಿಸಿದರು.

ಮೆಸ್ಕಾಂ ಉಪವಿಭಾಗೀಯ ಕಚೇರಿ ಯಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆಯಲ್ಲಿ ಜೋಡಿತಿಮ್ಮಾಪುರದ ರೈತ ಓಂಕಾರಪ್ಪ ಮಾತನಾಡಿ, ಕೊಳವೆಬಾವಿಗೆ ವಿದ್ಯುತ್‌ ಸಂಪರ್ಕಕ್ಕೆ ಸರ್ಕಾರ ₹19,240 ನಿಗದಿಪಡಿಸಿದೆ. ಆದರೆ ಗುತ್ತಿಗೆದಾರರು ₹ 24 ಸಾವಿರ ದಿಂದ ₹ 25ಸಾವಿರ ಹಣ ವಸೂಲು ಮಾಡುತ್ತಾರೆ. ವಿವರ ಕೇಳಿದರೆ ಇಲಾ ಖೆಯ ಮೇಲೆ ಸಬೂಬು ಹೇಳುತ್ತಾರೆ. ರೈತರು ನೇರವಾಗಿ ಸರ್ಕಾರಕ್ಕೆ ಹಣ ಪಾವತಿಸಲೂ ಅವಕಾಶವಿಲ್ಲ. ಅಲ್ಲಿಯೂ ಗುತ್ತಿಗೆದಾರರ ಅನುಮತಿ ಪತ್ರ ಕೇಳುತ್ತಾರೆ. ಮೆಸ್ಕಾಂ ಈ ಬಗ್ಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಎಇಇ ನಂದೀಶ್, ಕೆಲಸಗಳನ್ನು ಗುತ್ತಿಗೆದಾರರ ಮೂಲಕವೇ ಮಾಡಬೇಕು ಎನ್ನುವುದು ಸರ್ಕಾರದ ಆದೇಶ. ಹಾಗಾಗಿ ನೇರವಾಗಿ ಹಣ ಪಾವತಿ ಮಾಡಲು ಅವಕಾಶವಿಲ್ಲ. ಹೆಚ್ಚುವರಿ ಹಣ ವಸೂಲಿ ಆರೋಪದ ಕುರಿತು ಗುತ್ತಿಗೆದಾರರೊಂದಿಗೆ ಸಭೆ ನಡೆಸುವುದಾಗಿ ತಿಳಿಸಿದರು.

‌ಜೋಡಿತಿಮ್ಮಾಪುರ ಗ್ರಾಮದ 25 ಕೆವಿ ಪರಿವರ್ತಕಕ್ಕೆ ನಿರಂತರ ಜ್ಯೋತಿಯಿಂದ ವಿದ್ಯುತ್ ಸರಬರಾಜಾ ಗುತ್ತಿದ್ದು, ಕೆಲವು ರೈತರು ನೀರಾವರಿ ಪಂಪ್‍ಸೆಟ್‍ಗಳಿಗೆ ಅದರಿಂದ ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕು, ಗ್ರಾಮದ ರೈಲ್ವೆ ಗೇಟ್‍ನಿಂದ ಒಂದು ಕಿ.ಮೀ ದೂರದವರೆಗೂ ವಾಣಿಜ್ಯ ಮಳಿಗೆಗಳು ಮತ್ತು ಶಾಲೆ ಇದ್ದು ಅವುಗಳಿಗೆ ನಿರಂತರ ಜ್ಯೋತಿ ಸಂಪರ್ಕ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದರು.

ವಾಣಿಜ್ಯ ಮಳಿಗೆಗಳು ಮತ್ತು ಶಾಲೆಗೆ ಹೊಸದಾಗಿ ಕಂಬ ಮತ್ತು ಪರಿವರ್ತಕ ಅಳವಡಿಸಿ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಈ ಕುರಿತು ಕ್ರಮ ವಹಿಸಲಾಗುವುದು, ಅನಧಿಕೃತವಾಗಿ ಪರಿವರ್ತಕದಿಂದ ಸಂಪರ್ಕ ಪಡೆದಿರುವುದು ಗಮನಕ್ಕೆ ಬಂದಿದ್ದು, ಅವುಗಳ ಸಂಪರ್ಕ ಕಡಿತಗೊಳಿಸುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ. ಇಲಾಖೆಯು ನಿಯ ಮಾನುಸಾರ ಕ್ರಮ ಜರುಗಿಸಲಾಗುತ್ತದೆ ಎಂದು ಎಂಜಿನಿಯರ್ ಮಾಹಿತಿ ನೀಡಿದರು.

ಗಾಳಿಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಆನಂದ್, ‘ಗ್ರಾಮದಲ್ಲಿ ಎಲ್ಲಾ ಮನೆಗಳಿಗೂ ನಿರಂತರ ಜ್ಯೋತಿ ಸಂಪರ್ಕವಿದೆ. ಆದರೆ, ಒಂದು ಬೀದಿಯ 20 ಮನೆಗಳಿಗೆ ಮಾತ್ರ ಸಂಪರ್ಕ ನೀಡುತ್ತಿಲ್ಲ. ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಪರಿಹಾರ ಕಂಡುಕೊಂಡು ಗ್ರಾಮೀಣ ಜನರಿಗೆ ಸೌಲಭ್ಯ ಕಲ್ಪಿಸುವಲ್ಲಿ ಮುಂದಾಗಲಿ’ ಎಂದು ಒತ್ತಾಯಿಸಿದರೆ, ಹೊಗರೇಹಳ್ಳಿ ಪರ್ವತಪ್ಪ ತಮ್ಮ ನಿವಾಸಕ್ಕೆ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನಂದೀಶ್, ‘8 ತಿಂಗಳಿನಿಂದ ಆ ಬೀದಿಗೆ ಸಂಪರ್ಕ ನೀಡಲು ನಮ್ಮ ತಂಡ ಪ್ರಯತ್ನಿಸಿದೆ. ಖಾಸಗಿ ವ್ಯಕ್ತಿಯೊಬ್ಬರ ಆಕ್ಷೇಪಣೆಯಿಂದ ಕೆಲಸ ಪೂರ್ಣಗೊಳಿಸಲು ಆಗುತ್ತಿಲ್ಲ. ನಿಮ್ಮ ಗ್ರಾಮದ ಜನರಿಗೆ ವಿದ್ಯುತ್ ಪೂರೈಸಲು ನಿಮ್ಮವರೇ ಅಡ್ಡಿಯಾದರೆ ನಾವು ಹೇಗೆ ಪರಿಹರಿಸುವುದು ಎಂದು ಪ್ರಶ್ನಿಸಿದರು. ಪೊಲೀಸ್ ಸಹಾಯ ಪಡೆದು ಸಂಪರ್ಕ ಕಲ್ಪಿಸಲು ಮುಂದಾ ಗುವಂತೆ ಗ್ರಾಮಸ್ಥರು ಕೋರಿದರು.

ಹೊಗರೇಹಳ್ಳಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರು.

ಬೀರೂರು ಪಟ್ಟಣದ ಕುಂಬಾರಬೀದಿ ನಿವಾಸಿ ಶಿವಕುಮಾರ್, ಮೂರು ವರ್ಷಗಳಿಂದ ಮನೆ ಮುಂದೆ ಇರುವ ಹಳೆ ಕಂಬ ಮತ್ತು ತಂಗಿ ಬದಲಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕ್ರಮವಹಿಸುತ್ತಿಲ್ಲ ಎಂದು ಏರುದನಿಯಲ್ಲಿ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ, ‘ಆ ಕಂಬದಲ್ಲಿರುವ ತಂತಿ ಬದಲಿಸುವ ಸಮಯದಲ್ಲಿ ತಂತಿ ನಿಮ್ಮ ಮನೆಯ ಮೇಲೆ ಬೀಳುವ ಸಾಧ್ಯತೆ ಗಳಿವೆ. ಆದ್ದರಿಂದ ಆ ಹಳೆಯ ಕಂಬಗಳನ್ನು ತೆಗೆದಿರಲಿಲ್ಲ. ಅಧಿಕಾರಿ ಗಳೊಂದಿಗೆ ಸ್ಥಳ ಪರಿಶೀಲಿಸಿ ತೆರವು ಕಾರ್ಯ ನಡೆಸಲಾಗುವುದು’ ಎಂದರು.

ಎಇ ರಮೇಶ್, ಹಿರೇನಲ್ಲೂರು ಜೆಇ ಕಿಶೋರ್, ಎಇ ಸುಧಾ, ಯಗಟಿ ಜೆಇ ರಮೇಶ್, ಹಿರಿಯ ಸಹಾಯಕಿ ಓಂಕಾರಮ್ಮ ಮತ್ತು ನಾಗರಿಕರಾದ ಮಲ್ಲಪ್ಪ, ಪುಟ್ಟಸ್ವಾಮಿ, ಗಿರೀಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು