ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದ ಅಂಗಡಿ ಸ್ಥಾಪನೆಗೆ ವಿರೋಧ

ಎಮ್ಮೆದೊಡ್ಡಿ: 18 ಹಳ್ಳಿಗಳ ಗ್ರಾಮಸ್ಥರಿಂದ ಮುಸ್ಲಾಪುರ ಹಟ್ಟಿಯಲ್ಲಿ ಪ್ರತಿಭಟನೆ
Last Updated 19 ಸೆಪ್ಟೆಂಬರ್ 2021, 4:26 IST
ಅಕ್ಷರ ಗಾತ್ರ

ಬೀರೂರು: ‘ಮದ್ಯದ ಅಂಗಡಿ ಸ್ಥಾಪನೆಗೆ ಅನುವು ಮಾಡಿಕೊಡುವ ಮೂಲಕ ಗ್ರಾಮೀಣ ಜನರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ ಎಮ್ಮೆದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 18 ಹಳ್ಳಿಗಳ ಗ್ರಾಮಸ್ಥರು ಮುಸ್ಲಾಪುರ ಹಟ್ಟಿ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

‘ಮದಗದ ಕೆರೆ ವ್ಯಾಪ್ತಿಯ ಇಲ್ಲಿ ಕೆರೆ ಏರಿಗೆ ಸಮೀಪದಲ್ಲಿಯೇ ಬಾರ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ, ಪರವಾನಗಿ ಪಡೆಯಲು ನಕಲಿ ಪ್ರಮಾಣಪತ್ರಗಳನ್ನು ಒದಗಿಸಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೆ ತಾರದೆ, ಇಲ್ಲದ ಪಿಡಿಒ ಹೆಸರಿನಲ್ಲಿ ಸಹಿ ನಕಲು ಮಾಡಿ ಅಕೌಂಟೆಂಟ್ ಮೂಲಕ ವ್ಯಾಪಾರ ಉದ್ದಿಮೆ ಪರವಾನಗಿ ಪಡೆಯಲಾಗಿದೆ. ಹೋಟೆಲ್ ಆರಂಭಿ ಸುವುದಾಗಿ ಪರವಾನಗಿ ಪಡೆದು ಜನರ ಕಣ್ಣಿಗೆ ಮಣ್ಣೆರಚಿ ಮದ್ಯ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

‘ಇದು ಗ್ರಾಮೀಣ ಪ್ರದೇಶವಾಗಿದ್ದು, ತಾಲ್ಲೂಕಿನ ಜೀವನಾಡಿ ಕೆರೆ ಇರುವ ಕಾರಣ ಸುತ್ತಮುತ್ತಲ ಹತ್ತಾರು ಗ್ರಾಮಗಳ ಮಹಿಳೆಯರು ಕೃಷಿ ಚಟುವಟಿಕೆಯಲ್ಲಿ ನಿರಂತರ ಸಕ್ರಿಯವಾಗಿರುತ್ತಾರೆ. ಸಮೀಪದಲ್ಲಿಯೇ ಪ್ರೌಢಶಾಲೆ, ಮಾಧ್ಯಮಿಕ ಶಾಲೆ, ಆಸ್ಪತ್ರೆ, ಹಾಸ್ಟೆಲ್, ಪಂಚಾಯಿತಿ ಕಚೇರಿಗಳಿವೆ. ಈಗಾಗಲೇ ಈ ಪ್ರದೇಶದಲ್ಲಿ ಸಾಕಷ್ಟು ಅಪರಾಧ ಕೃತ್ಯಗಳು ನಡೆಯುತ್ತಿದ್ದು, ಮದ್ಯದ ಅಮಲಿನಲ್ಲಿ ಅಪರಾಧ ಎಸಗುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಲ್ಲಿಯೇ ಮದ್ಯದ ಅಂಗಡಿ ಆರಂಭವಾದರೆ ಕುಡುಕರ ಹಾವಳಿ ವಿಪರೀತವಾಗಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ‘ನಕಲಿ ಪ್ರಮಾಣ ಪತ್ರ ಸಲ್ಲಿಸಿ ಪಡೆದ ಪರವಾನಗಿಯೂ ನಕಲಿಯೇ ಆಗಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಕೊಡುವ ಸಿ.ಎಲ್ 7 ಸನ್ನದು ಅಡಿಯಲ್ಲಿ ಈ ಭಾಗದಲ್ಲಿ ಬಾರ್ ಆರಂಭಿಸುವ ಔಚಿತ್ಯ ಏನಿದೆ? ಅಬಕಾರಿ ಅಧಿಕಾರಿಗಳು ತಮ್ಮ ಮೂಗಿನ ನೇರಕ್ಕೆ ಕಾನೂನು ಹೇಳುತ್ತಾರೆ, ಇಲ್ಲಿನ ಜನರ ಸಂಕಷ್ಟ ಅವರಿಗೆ ಹೇಗೆ ತಿಳಿಯಬೇಕು?’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮಸ್ಥರು ಶನಿವಾರ ಸ್ಥಳದಲ್ಲಿಯೇ ಮೊಕ್ಕಾಂ ಮಾಡಿ, ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಹೋರಾಟ ಮುಂದುವರೆಸಿದ್ದರು. ಕಡೂರು ಪಿಎಸ್‍ಐ ರಮ್ಯಾ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಒದಗಿಸಿದ್ದರು. ಭಾನುವಾರ ಮತ್ತೆ ಪ್ರತಿಭಟನೆ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT