ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಉದ್ಯೋಗ ಭದ್ರತೆಗೆ ಆಗ್ರಹ, ಹೊರಗುತ್ತಿಗೆ ನೌಕರರಿಂದ ಮುಷ್ಕರ

Last Updated 1 ಜುಲೈ 2022, 16:23 IST
ಅಕ್ಷರ ಗಾತ್ರ

ಬೀರೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಹೊರಗುತ್ತಿಗೆ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಹನ ವಾಲಕರು, ಡಾಟಾ ಎಂಟ್ರಿ ಆಪರೇಟರ್, ಕಸ ನಿರ್ವಹಣೆಗಾರರು, ವಾಟರ್‌ಮೆನ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಉದ್ಯೋಗ ಭದ್ರತೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಆಗ್ರಹಿಸಿ ಪುರಸಭೆ ಮುಂಭಾಗ ನೌಕರರು ಶುಕ್ರವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಪುರಸಭಾ ಕಚೇರಿಗೆ ಬೆಳಿಗ್ಗೆ ಬಂದ ಹೊರಗುತ್ತಿಗೆ ನೌಕರರು ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ತೆರಳಿ ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪುರಸಭೆ ಮುಂಭಾಗಕ್ಕೆ ವಾಪಸಾದರು.

ಬೀರೂರು ಪುರಸಭೆ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ‘ಕೋವಿಡ್ ಸಂದರ್ಭದಲ್ಲಿಯೂ ನಮ್ಮ ಹಿತ ಲೆಕ್ಕಿಸದೆ ನಾವು ಸ್ವಚ್ಛತಾ ಕಾರ್ಯ ನಿರ್ವಹಿಸಿದ್ದೇವೆ. ನಮ್ಮ ಕೆಲಸಕ್ಕೆ ಭದ್ರತೆ ಇಲ್ಲದೇ ಸಾಕಷ್ಟು ಕುಟುಂಬಗಳು ಬೀದಿ ಪಾಲಾಗಿವೆ ಹಾಗೂ ಎಷ್ಟೋ ನೌಕರರು ಮರಣ ಹೊಂದಿದ್ದಾರೆ. ಸರ್ಕಾರ ನಮಗೆ ಉದ್ಯೋಗ ಭದ್ರತೆ ನೀಡಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು’ ಎಂದು ಆಗ್ರಹಿದರು.

‘ನಮ್ಮ ಬೇಡಿಕೆಗಳು ಈಡೇರುವವರೆಗೂ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಯಲಿದೆ. ನೇರಪಾವತಿ ನೌಕರರು, ಪೌರ ಕಾರ್ಮಿಕರೂ ನಮ್ಮ ಬೆಂಬಲಕ್ಕೆ ಇದ್ದಾರೆ. ಮೂವತ್ತು ವರ್ಷಗಳ ನಮ್ಮ ಕಡೆಗಣನೆಗೆ ತೆರೆಬಿದ್ದು ಈಗಲಾದರೂ ನ್ಯಾಯ ಸಿಗಲೇಬೇಕು ಎಂದಷ್ಟೇ ನಮ್ಮ ಹೋರಾಟ’ ಎಂದು ಸ್ಪಷ್ಟಪಡಿಸಿದರು.

ಪೌರಕಾರ್ಮಿಕರ ಮುಷ್ಕರದ ವಿಷಯ ತಿಳಿದು ಪುರಸಭೆಗೆ ಬಂದ ಶಾಸಕ ಬೆಳ್ಳಿಪ್ರಕಾಶ್ ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ, ‘ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ಪದ್ಧತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಸೇನಾನಿಗಳ ಜೀವನಕ್ಕೆ ಭದ್ರತೆ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಕುಟುಂಬ ನೆಮ್ಮದಿಯಾಗಿದ್ದರೆ ನಗರ, ಪಟ್ಟಣಗಳು ಸ್ವಚ್ಛ, ಸ್ವಸ್ಥ ಮತ್ತು ಸುಂದರವಾಗಿರುತ್ತದೆ. ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಹೊರಗುತ್ತಿಗೆ ನೌಕರರ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟು, ಮಾನ್ಯ ಮುಖ್ಯಮಂತ್ರಿಗಳು ಮತ್ತು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಅವರ ಬೇಡಿಕೆಗಳಿಗೆ ಪರಿಹಾರ ದೊರಕುವಂತೆ ಒತ್ತಾಯಿಸಲಾಗುವುದು’ ಎಂದು ಭರವಸೆ ನೀಡಿದರು.

ಹೊರಗುತ್ತಿಗೆ ನೌಕರರಾದ ಮನು, ಧನಂಜಯ್, ಮಂಜಪ್ಪ, ಉಮೇಶ್, ಪುನೀತ್, ಪ್ರದೀಪ್, ಜಯಶಂಕರ್, ನಟರಾಜ್, ಪ್ರಸಾದ್, ಅಂಬಿಕಾ, ಪ್ರಶಾಂತ್, ಶಶಿಕುಮಾರ್, ಕುಮಾರ್, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಬಿ.ಟಿ.ಚಂದ್ರಶೇಖರ್, ಸಾಮಾಜಿಕ ಸೇವಾ ಕಾರ್ಯಕರ್ತರ ಸಂಘದ ಮಾಜಿ ಅಧ್ಯಕ್ಷ ಹೇಮಂತ್‍ ಕುಮಾರ್, ಜೆಡಿಎಸ್ ಮುಖಂಡ ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT