ಶನಿವಾರ, ಡಿಸೆಂಬರ್ 5, 2020
19 °C

‘ಬಿಜೆಪಿ ಜತೆ ಜೆಡಿಎಸ್‌ ಸಖ್ಯ ದುರದೃಷ್ಟಕರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ‘ಅಧಿಕಾರದಾಸೆಗಾಗಿ ಕೋಮುವಾದಿ ಬಿಜೆಪಿ ಜೊತೆ ಜೆಡಿಎಸ್ ಪಕ್ಷ ಕೈಜೋಡಿಸಿರುವುದು ದುರದೃಷ್ಟಕರ’ ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ತಿಳಿಸಿದರು.

ಕಡೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಡೂರು ಪುರಸಭೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲ ಕೋರಿ ಸಂಸದ ಪ್ರಜ್ವಲ್ ಹಾಗೂ ವೈ.ಎಸ್.ವಿ.ದತ್ತ ಅವರೊಡನೆ ಸಮಾಲೋಚನೆ ನಡೆಸಲಾಗಿತ್ತು. ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಜೆಡಿಎಸ್ ಪಕ್ಷ ಬಿಜೆಪಿ ಜೊತೆ ಕೈಜೋಡಿಸಿ ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಸೇರುತ್ತೇವೆಂಬುದನ್ನು ನಿರೂಪಿಸಿದ್ದಾರೆ. ಆ ಪಕ್ಷದವರು ಕೋಮುವಾದಿಗಳ ವಿರುದ್ಧ ಮಾತನಾಡುತ್ತಿದ್ದರು. ಈಗ ಅವರೂ ಅದೇ ಶಕ್ತಿಗಳ ಜೊತೆ ಸೇರಿರುವುದು ಏನನ್ನು ಸೂಚಿಸುತ್ತದೆ ಎಂದು ಜನತೆ ಗಮನಿಸಲಿ’ ಎಂದರು.

‘ಪುರಸಭಾ ಅಧ್ಯಕ್ಷರ ಚುನಾವಣೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದು ಯಾವ ಉದ್ದೇಶದಿಂದ ಎಂಬುದು ತಿಳಿಯಲಿಲ್ಲ. ಇದರ ಅವಶ್ಯಕತೆ ಶಾಸಕರಿಗೇನಿತ್ತು’ ಎಂದು ಪ್ರಶ್ನಿಸಿದ ಅವರು, ‘ಜನಸಾಮಾನ್ಯರ ಸಮಸ್ಯೆ ಬಗೆಹರಿಸಬೇಕಾದ ಪೊಲೀಸರು ಶಾಸಕರ ಬೆಂಗಾವಲು ಪಡೆಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇದನ್ನು ಗಮನಿಸಬೇಕು. ಕಾಂಗ್ರೆಸ್‌ನ 7 ಪುರಸಭಾ ಸದಸ್ಯರು ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಸೂರು ಚಂದ್ರಮೌಳಿ, ಪುರಸಭಾ ಸದಸ್ಯರಾದ ಮೋಹನ್ ಕುಮಾರ್, ಯಾಸೀನ್, ಜಿಮ್ ಶ್ರೀನಿವಾಸ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.