ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ

ಶಾಸಕ ಟಿ.ಡಿ.ರಾಜೇಗೌಡ ವಿರುದ್ಧ ಡಿ.ಎನ್. ಜೀವರಾಜ್ ವಾಗ್ದಾಳಿ
Last Updated 15 ಮೇ 2022, 4:49 IST
ಅಕ್ಷರ ಗಾತ್ರ

ಶೃಂಗೇರಿ: ‘ಶೃಂಗೇರಿ ವಿಧಾನಸಭಾ ಕ್ಷೇತ್ರದ ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕಿನ ಸರ್ಕಾರಿ ಕಚೇರಿಯಲ್ಲಿ ಅರಾಜಕತೆ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಶಾಸಕ ಟಿ.ಡಿ ರಾಜೇಗೌಡ ನೇರ ಹೊಣೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಆರೋಪಿಸಿದರು.

ಶೃಂಗೇರಿ ಕನ್ನಡ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು. ‘ಕ್ಷೇತ್ರಕ್ಕೆ ಶಾಸಕರೇ ಸರ್ಕಾರವಾಗಿದ್ದು, ಅವರಿಗೆ ಆಡಳಿತದ ಮೇಲೆ ಅಧಿಕಾರ ಇರುತ್ತದೆ. ಹೀಗಿರು ವಾಗ ಇಲ್ಲಿನ ಶಾಸಕರಿಗೆ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ. ತಾಲ್ಲೂಕು ಕಚೇರಿಗಳಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಕಚೇರಿಗಳಲ್ಲಿ ಲಂಚ, ಅಕ್ರಮ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ. ಇದು ಅರಾಜಕತೆ ಅಲ್ಲವೇ’ ಎಂದು ಪ್ರಶ್ನಿಸಿದರು.

‘ಶಾಸಕರು ಕೆಡಿಪಿ ಸಭೆಗಳನ್ನು ಕಾಲಕಾಲಕ್ಕೆ ನಡೆಸಿದ್ದರೆ ಕ್ಷೇತ್ರದ ಪ್ರಗತಿ ಕಾರ್ಯಗಳ ವಿಮರ್ಶೆ, ಅಂಕಿ-ಅಂಶಗಳ ಮುಂದಿಡುವಿಕೆ, ನಿಷ್ಕ್ರಿಯ ಅಧಿಕಾರಿಗಳನ್ನು ಹಿಡಿತಕ್ಕೆ ತರುವ ಅವಕಾಶ ಇರುತ್ತಿತ್ತು. ಆದರೆ, ನಮ್ಮ ಶಾಸಕರ 4 ವರ್ಷಗಳ ಅವಧಿಯಲ್ಲಿ ಎಷ್ಟು ಕೆಡಿಪಿ ಸಭೆ ನಡೆದಿದೆ ಮತ್ತು ಕಾಟಾಚಾರಕ್ಕೆ ನಡೆಸಿದ ಸಭೆಯಲ್ಲಿ ಪ್ರಗತಿ ಪರಿಶೀಲನೆ ಬದಲಿಗೆ ಅಧಿಕಾರಿಗಳಿಗೆ ಸನ್ಮಾನವೇ ಮುಖ್ಯವಾಗಿದೆ’ ಎಂದರು.

‘94ಸಿ ಪ್ರಕರಣದಲ್ಲಿ ಭ್ರಷ್ಟ ಅಧಿಕಾರಿಗಳನ್ನು ನೀವೇ ನೇಮಿಸಿ, ಈಗ ಸರ್ಕಾರವನ್ನು ದೂರುವುದೇಕೆ? ನಾನು ಶಾಸಕನಾಗಿದ್ದಾಗ ನನಗೆ ಇರುವ ಅಧಿಕಾರದ ಬಲದಿಂದ ಸಕಾಲಕ್ಕೆ ಸಭೆ ನಡೆಸಿ, ಅಧಿಕಾರಿಗಳಿಂದ ಯಾವ ರೀತಿ ಕೆಲಸ ಮಾಡಿಸಿಕೊಂಡಿದ್ದೇನೆ ಎಂಬುದು ದಾಖಲೆಯಲ್ಲಿದೆ. ಶೃಂಗೇರಿಯ ಭ್ರಷ್ಟ ತಹಶೀಲ್ದಾರ್ ವರ್ಗಾವಣೆಗೆ ಪತ್ರ ಕೊಟ್ಟಿದ್ದ ಶಾಸಕರು, ಏಕಾಏಕಿ ಉಲ್ಟಾ ಹೊಡೆದು ಪತ್ರದ ಸಹಿ ತನ್ನದಲ್ಲ ಎಂದು ಅವರನ್ನು ಯಾಕೆ ರಕ್ಷಿಸಿದ್ದು? ಅಂದು ನೀವು ವರ್ಗಾವಣೆ ಎತ್ತಿ ಹಿಡಿದಿದ್ದರೆ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ ಮತ್ತು ಅಮಾಯಕನೊಬ್ಬನ ಜೀವ ಹೋಗುತ್ತಿರಲಿಲ್ಲ’ ಎಂದು ಹೇಳಿದರು.

‘2018ರಿಂದ ನೆರೆ ಪರಿಹಾರ ಕಾಮಗಾರಿಗಾಗಿ ₹ 45 ಕೋಟಿ ಬಿಡುಗಡೆ ಆಗಿದೆ. ಇದನ್ನು ಎಲ್ಲಿಗೆ ಬಳಸಿದ್ದೀರಿ, ಅದರ ಗುತ್ತಿಗೆದಾರರು ಯಾರು ಎಂಬ ವಿವರವನ್ನು ಜನರ ಮುಂದೆ ಇಡಿ. ಇದು ಏನಾಗಿದೆ ಎಂಬುದನ್ನು ನಾವು ನಂತರ ಮಂಡಿಸುತ್ತೇವೆ’ ಎಂದು ಶಾಸಕ ಟಿ.ಡಿ.ರಾಜೇಗೌಡರಿಗೆ ಜೀವರಾಜ್ ಸವಾಲು ಹಾಕಿದರು.

ಗೋಷ್ಠಿಯಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ತಲಗಾರು ಉಮೇಶ್, ಶೆಟ್ಟಿಗದ್ದೆ ರಾಮಸ್ವಾಮಿ, ಜಿಲ್ಲಾ ಸಮಿತಿಯ ರಾಮಕೃಷ್ಣ, ಬಿ.ಶಿವಶಂಕರ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಕೆ.ಎಂ ಶ್ರೀನಿವಾಸ್, ವೇಣುಗೋಪಾಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT