ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಕ್ಷೇತ್ರದ ಬಹುತೇಕ ಸಮಸ್ಯೆಗೆ ಮಾಜಿ ಶಾಸಕರೇ ಕಾರಣ: ರಾಜೇಗೌಡ

Last Updated 15 ಮೇ 2022, 4:50 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಶೃಂಗೇರಿ ಕ್ಷೇತ್ರದಲ್ಲಿ ರೈತರ ಸಮಸ್ಯೆಯು ಸೇರಿದಂತೆ ಬಹುತೇಕ ಸಮಸ್ಯೆಗಳಿಗೆ ಹಿಂದಿನ ಶಾಸಕರೇ ಕಾರಣ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದ್ದಾರೆ.

‘ತಮ್ಮ ವಿರುದ್ಧ ತಾಲ್ಲೂಕು ಬಿಜೆಪಿ ಘಟಕದಿಂದ ಮೇ 16ರಂದು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿದುಬಂದಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದರೂ ಪ್ರತಿಭಟನೆ ನಡೆಸುತ್ತಿರುವುದು ಆಶ್ಚರ್ಯ ತಂದಿದೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಶೃಂಗೇರಿ ತಾಲ್ಲೂಕು ಕಚೇರಿಯಲ್ಲಿ ನಡೆದ ಪ್ರಕರಣ, ಕೊಪ್ಪದ ತಾಲ್ಲೂಕು ಕಚೇರಿಯಲ್ಲಿ ದಾಖಲೆ ಕಳವು ಪ್ರಕರಣ ಹಾಗೂ ನರಸಿಂಹರಾಜಪುರದ ತಾಲ್ಲೂಕು ಕಚೇರಿಯಲ್ಲಿ ದಾಖಲೆ ತಿದ್ದಿದ್ದ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರು ಬಹುತೇಕ ಬಿಜೆಪಿ ಮುಖಂಡರು ಮತ್ತು ಅವರ ಹಿಂಬಾಲಕರಾಗಿದ್ದಾರೆ’ ಎಂದು ದೂರಿದ್ದಾರೆ.

‘ಬಗರ್ ಹುಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಿದವರ ದಾಖಲೆ ತಿದ್ದಿದ ಆರೋಪದಡಿ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿರುವವರಲ್ಲಿ ಮಾಜಿ ಶಾಸಕ ಹಾಗೂ ಅವರ ಹಿಂಬಾಲಕರು ಸೇರಿದ್ದಾರೆ. ದಾಖಲೆ ತಿದ್ದಿದ ಪ್ರಕರಣ ನ್ಯಾಯಾಲಯದ ಮೇಟ್ಟಿಲೇರಲು ಬಿಜೆಪಿಯವರು ಕಾರಣವಾಗಿದ್ದು, ಇದರಿಂದ ಸಾಕಷ್ಟು ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬರುತ್ತಿರುವವರಿಗೆ ಹಕ್ಕುಪತ್ರ ಕೊಡಲು ಸಾಧ್ಯವಾಗಿಲ್ಲ. ಹಾಗಾಗಿ, ಬಿಜೆಪಿ ಅವರು ತಮ್ಮ ವಿರುದ್ಧ ಪ್ರತಿಭಟನೆ ಮಾಡುವ ಮೊದಲು ಮಾಜಿ ಶಾಸಕರ ವಿರುದ್ಧ ಪ್ರತಿಭಟನೆ ಮಾಡಿ ಸರ್ಕಾರದಿಂದ ಜನರಿಗೆ ನ್ಯಾಯ ಒದಗಿಸಿಕೊಡುವುದು ಉತ್ತಮ’ ಎಂದು ತಿಳಿಸಿದ್ದಾರೆ.

‘ಶೃಂಗೇರಿಯ ತಾಲ್ಲೂಕು ಕಚೇರಿ ಜೀಪ್ ಚಾಲಕನ ಆತ್ಮಹತ್ಯೆಗೆ ಕಾರಣವಾದ ಆರೋಪದ ಮೇಲೆ ಬಿಜೆಪಿಯ ಮುಖಂಡರೊಬ್ಬರ ಪತಿ ಜೈಲಿಗೆ ಹೋಗಿರುವುದು ಬಿಜೆಪಿಯವರಿಗೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ತಾಲ್ಲೂಕು ಕಚೇರಿಯಲ್ಲಿರುವ ಬಹುತೇಕ ನೌಕರರು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಅವರ ಶಿಫಾರಸ್ಸಿನ ಮೇಲೆ ಬಂದವರಾಗಿರುವುದರಿಂದ ಭ್ರಷ್ಟಾಚಾರಕ್ಕೆ ಅವರೇ ನೇರ ಹೊಣೆಗಾರರು ಎಂದು ದೂರಿದ್ದಾರೆ.

‘ಕ್ಷೇತ್ರದಲ್ಲಿ 15 ವರ್ಷ ಶಾಸಕರಾಗಿದ್ದವರು ತಮ್ಮ ದೌರ್ಬಲ್ಯ ಮುಚ್ಚಿಹಾಕಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡಿ ಪ್ರತಿಭಟನೆ ಮಾಡುವುದನ್ನು ಬಿಟ್ಟು ಜನಪರ ಕಾಳಜಿ ಇದ್ದರೆ ಪೆಟ್ರೋಲ್, ಡೀಸೆಲ್, ರಸಗೊಬ್ಬರ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಪ್ರತಿಭಟನೆ ನಡೆಸಲಿ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT