ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಕ್ಷ ಸಂಘಟನೆ, ಜನಸೇವೆಗೆ ಹೆಚ್ಚಿನ ಒತ್ತು‘-ಎಂ.ಕೆ.ಪ್ರಾಣೇಶ್

ಬಿಜೆಪಿ ಕಚೇರಿ: ಅಭಿನಂದನಾ ಕಾರ್ಯಕ್ರಮದಲ್ಲಿ ಎಂ.ಕೆ.ಪ್ರಾಣೇಶ್
Last Updated 31 ಜನವರಿ 2021, 2:22 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅಧಿಕಾರ ಶಾಶ್ವತವಲ್ಲ. ಉತ್ತಮ ನಡವಳಿಕೆಯೊಂದಿಗೆ ಜನಸೇವೆ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಉಪ ಸಭಾಪತಿಯಾದರೂ ನಾನೊಬ್ಬ ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿರುತ್ತೇನೆ. ಬಿಜೆಪಿ ವೇದಿಕೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ. ಪಕ್ಷದ ಹೊರಗೆ ಪಕ್ಷಾತೀತವಾಗಿ ಕೆಲಸ ಮಾಡುತ್ತೇನೆ. ಉಪ ಸಭಾಪತಿ ಸ್ಥಾನದ ಗೌರವ, ಘನತೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ’ ಎಂದು ಹೇಳಿದರು.

‘ವಿಧಾನ ಪರಿಷತ್‌ಗೆ ಎರಡು–ಮೂರು ಬಾರಿ ಆಯ್ಕೆಯಾಗಿರುವ ಹಿರಿಯರು ಪಕ್ಷದಲ್ಲಿದ್ದಾರೆ. ನಾನು ಉಪ ಸಭಾಪತಿ ಸ್ಥಾನದ ಆಕಾಂಕ್ಷಿಯಾಗಿರಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ವಿಧಾನ ಪರಿಷತ್ ಬಿಜೆಪಿ ಸದಸ್ಯರ ಸಭೆಯಲ್ಲಿ ನಾನೂ ಇಬ್ಬರ ಹೆಸರನ್ನು ಶಿಫಾರಸು ಮಾಡಿದ್ದೆ. ಪರಿಷತ್‌ನಲ್ಲಿ ನಾನು ಎಲ್ಲರೊಂದಿಗೆ ನಡೆದುಕೊಂಡ ರೀತಿ ಹಾಗೂ 37 ವರ್ಷಗಳ ರಾಜಕೀಯ ಅನುಭವವನ್ನು ಪಕ್ಷ ಗುರುತಿಸಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

‘ಏಳು ವರ್ಷದವನಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)ದ ಒಡನಾಟ ಬೆಳೆಯಿತು. ಆರ್‌ಎಸ್‌ಎಸ್‌ ಮುಖಂಡ ದಯಾನಂದ ನಾಯಕ್ ಅವರೊಂದಿಗೆ ಸಂಘಟನೆಯ ಶಾಖೆಗಳಿಗೆ ಹೋಗುತ್ತಿದ್ದೆ. ಅಲ್ಲಿಂದಲೇ ನನ್ನ ವ್ಯಕ್ತಿತ್ವ ರೂಪುಗೊಳ್ಳಲು ಆರಂಭವಾಯಿತು. ಆಟೊ ಚಾಲಕರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. 1989ರಲ್ಲಿ ಬಿಜೆಪಿ ಸೇರ್ಪಡೆಯಾದೆ. ಪಕ್ಷದ ಯುವ ಮೋರ್ಚಾದ ತಾಲ್ಲೂಕು, ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸುವ ಅವಕಾಶ ದೊರೆಯಿತು’ ಎಂದು ಹೇಳಿದರು.

‘ಆರ್ಥಿಕವಾಗಿ ಸಬಲರಾಗಿದ್ದವರು ರಾಜಕೀಯದಲ್ಲಿ ಅಧಿಕಾರ ಪಡೆದು ಕೊಳ್ಳುವುದು ಸಾಮಾನ್ಯವಾಗಿತ್ತು. ಅಧಿಕಾರದಲ್ಲಿದ್ದವರು ಕಾರ್ಯಕರ್ತ ರನ್ನು ಕಡೆಗಣಿಸುತ್ತಿದ್ದರು. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಅದೇ ಸಂಸ್ಕೃತಿ ಮುಂದು ವರಿಯುತ್ತಿದೆ. ಬಿಜೆಪಿಯಲ್ಲಿ ಬಹುತೇಕ ಕಡಿಮೆಯಾಗಿದೆ’ ಎಂದು ಹೇಳಿದರು.

ಪಕ್ಷದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಗಣೇಶ್‌ರಾವ್‌ ಮಾತನಾಡಿ, ‘ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಯ ಗಳಿಸುವುದು ಕಷ್ಟವಾಗಿತ್ತು. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕನಸಿನ ಮಾತಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಎಂ.ಕೆ.ಪ್ರಾಣೇಶ್, ಎಂ.ಪಿ.ಕುಮಾರಸ್ವಾಮಿ ಅವರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಚುನಾಯಿತರಾಗಿದ್ದರು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ, ಉಪಾಧ್ಯಕ್ಷ ಪ್ರೇಂಕುಮಾರ್, ಮುಖಂಡರಾದ ವರಸಿದ್ಧಿ ವೇಣುಗೋಪಾಲ್, ರವೀಂದ್ರ ಬೆಳವಾಡಿ, ಮಧುಕುಮಾರ್‌ರಾಜ್‌ ಅರಸ್, ಈ.ಆರ್.ಮಹೇಶ್, ಕೋಟೆರಂಗನಾಥ್ ಇದ್ದರು.

‘ಮೊಬೈಲ್‌ ನಿಷೇಧ: ಸಭಾಪತಿ ಜತೆ ಚರ್ಚೆ’

ಚಿಕ್ಕಮಗಳೂರು: ವಿಧಾನ ಪರಿಷತ್ ಅಧಿವೇಶನದಲ್ಲಿ ಮೊಬೈಲ್‌ ನಿಷೇಧಿಸುವ ಬಗ್ಗೆ ಸಭಾಪತಿ ಅವರೊಂದಿಗೆ ಚರ್ಚಿಸಲಾಗುವುದು ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಅಶ್ಲೀಲ ಚಿತ್ರ ವೀಕ್ಷಿಸಿರುವ ಬಗ್ಗೆ ಮಾಧ್ಯಮದಲ್ಲಿ ವರದಿಗಳು ಪ್ರಸಾರವಾಗಿರುವುದು ಗಮನಕ್ಕೆ ಬಂದಿದೆ. ಸದನದಲ್ಲಿ ನೆಟ್‌ವರ್ಕ್ ಜಾಮರ್ ಅಳವಡಿಸಿದ್ದಾರೆ. ಸದಸ್ಯರು ಮೊಬೈಲ್ ಬಳಸಲು ಪ್ರತ್ಯೇಕ ಸ್ಥಳ, ತುರ್ತು ಕರೆ ಮಾಡಲು ಲ್ಯಾಂಡ್‌ಲೈನ್ ವ್ಯವಸ್ಥೆ ಇದೆ. ಸದನದೊಳಕ್ಕೆ ಮೊಬೈಲ್ ಕೊಂಡೊಯ್ಯುವ ಅಗತ್ಯ ಇಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT