ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಯಿಂದ ಪಿಎಸ್‌ಐಗೆ ಧಮ್ಕಿ: ಆಡಿಯೊ ವೈರಲ್‌

Last Updated 6 ಮೇ 2022, 15:52 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲಂದೂರು ಠಾಣೆಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದ ಪಿಎಸ್‌ಐ ರವೀಶ್‌ ಅವರಿಗೆ ಶಾಸಕ ಎಂ.ಪಿ. ಕುಮಾರಸ್ವಾಮಿ ಫೋನ್‌ ಮಾಡಿ ವಾಪಸ್‌ ಹೋಗುವಂತೆ ಧಮ್ಕಿ ಹಾಕಿರುವ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಕುಮಾರ ಸ್ವಾಮಿ ಅವರು ಏಕವಚನದಲ್ಲಿ ಪಿಎಸ್ಐಗೆ ದಬಾಯಿಸಿದ್ದಾರೆ ಎನ್ನಲಾದ ಆಡಿಯೊದಲ್ಲಿನ ಸಂಭಾಷಣೆ ಇಂತಿದೆ.

ಕುಮಾರಸ್ವಾಮಿ: ಹಲೋ ಯಾರಪ್ಪ ಇದು ನಂಬರ್‌

ರವೀಶ್‌: ಸರ್‌, ನಾನು ರವೀಶ್‌ ಮಾತಾಡೋದು

ಕು: ಈಗ, ಎಲ್ಲಿದ್ದೀಯಾ?

ರ: ಸರ್‌, ಸ್ಟೇಷನ್‌ನಲ್ಲಿ ಇದ್ದೇನೆ

ಕು: ನೀನು ಬೇಡ ಎಂದು ನಿನ್ನೆ ನಾನು ಹೇಳಿದ್ದೆನಲ್ಲಾ

ರ: ಐಜಿ ಸಾಹೇಬ್ರು ಫೋನ್‌ ಮಾಡಿ ಚಾರ್ಜ್‌ ತೆಗೆದುಕೊಳ್ಳಲು ತಿಳಿಸಿದರು ಸಾರ್‌

ಕು: ನೀನು ಮರ್ಯಾದೆಯಿಂದ ವಾಪಸ್‌ ಹೋಗು, ಸ್ಟೇಷನ್‌ನಲ್ಲಿ ಇರಬೇಡ

ರ: ಸರ್‌

ಕು: ಮರ್ಯಾದೆಯಿಂದ ವಾಸಪ್‌ ಹೋಗಲೆ, ಹೇಳಿದ್ಹಂಗೆ ಕೇಳು, ರೆಕಾರ್ಡ್‌ ಮಾಡಿಕೋ ಬೇಕಿದ್ದರೆ

ರ: ಸರ್‌, ಇಲ್ಲ ಅಲ್ಲಿಗೆ ಬರ್ತಿನಿ, ನಿಮ್ಮ ಹತ್ತಿರ ಬರುತ್ತೇನೆ

ಕು: ಮರ್ಯಾದೆಯಿಂದ ವಾಪಸ್‌ ಹೋಗು, ಬಂದ್‌ ದಾರಿಯಲ್ಲಿ ಹೋಗು, ಇಲ್ಲದಿದ್ದರೆ ನಾಳೆನೇ ಡೆಪ್ಯುಟೆಷನ್‌ ಮಾಡಿಸುತ್ತೀನಿ ನೋಡು, ಇಲ್ಲಿ ನಡೆಯಲ್ಲ

ರ: ಸರ್‌

ಕು: ಐಜಿಗೆ ಎಷ್ಟು ಲಂಚ ಕೊಟ್ಟಿದ್ದೀಯಾ, ನನಗೆ ಗೊತ್ತಿಲ್ವಾ ಯಾರ್ಯಾರಿಗೆ ಎಷ್ಟು ಕೊಟ್ಟಿದ್ದೀಯಾ ಅಂತ

ರ: ಸರ್‌, ಇಲ್ಲ ಆ ಥರಾ ಏನಿಲ್ಲ ಸರ್‌, ನಾನೇನೂ ಕೊಟ್ಟಿಲ್ಲ. ಅವರೇ ಫೋನ್‌ ಹೇಳಿದರು

ಕು: ಮರ್ಯಾದೆಯಾಗಿ ಬಂದ ದಾರಿಯಲ್ಲಿ ಹೋಗು

ರ: ಸರ್‌, ನಾಳೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ

ಕು: ಯಾವನು ಐಜಿ, ಐಜಿಯಲ್ಲ ಮೂಡಿಗೆರೆ ನೋಡೋರು

ರ: ಸರ್‌, ನಾಳೆ ಬರುತ್ತೇನೆ

ಕು: ಐಜಿ ಅವನಿಗೆ ಹೇಳು

ರ: ಸರಿ ಸರ್‌, ನಾಳೆ ಬಂದು ನಿಮ್ಮನ್ನು ಭೇಟಿಯಾಗುತ್ತೇನೆ

ಕು: ಹೋಗಲೇ ನೀನು ಬರಬೇಡ, ಬಂದ್ರೆ ಒದ್ದು ಓಡಿಸುತ್ತೇನೆ

ರ: ನಾಳೆ ಬಂದು ಭೇಟಿಯಾಗುತ್ತೇನೆ ಸರ್‌

ಕು: ಮರ್ಯಾದೆಯಿಂದ ಹೋಗು

‘ಹಕ್ಕುಚ್ಯುತಿ ಮಂಡಿಸುವೆ’

‘ಪಿಎಸ್ಐ ಫೋನ್ ಸಂಭಾಷಣೆ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಸದನ ಸಮಿತಿಗೆ ಹಕ್ಕುಚ್ಯುತಿ ಮಂಡಿಸುತ್ತೇನೆ’ ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕನನ್ನು ‘ಬ್ಲ್ಯಾಕ್ ಮೇಲ್’ ಮಾಡುವ ತಂತ್ರವನ್ನು ಪಿಎಸ್‌ಐ ಮಾಡಿದ್ದಾರೆ. ಫೋನ್‌ ಸಂಭಾಷಣೆ ರೆಕಾರ್ಡ್ ಮಾಡಿದ್ದಕ್ಕೆ ಆತ ವಿವರಣೆ ನೀಡಬೇಕು. ನಾನು ಯಾರ ಕ್ಷಮೆಯನ್ನೂ ಕೇಳಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

‘ನಾನು ಆವಾಜ್‌ ಹಾಕಿದ್ದು ನಿಜ. ನನ್ನ ಅನುಮತಿ ಇಲ್ಲದೇ ಆತ ನಮ್ಮ ಕ್ಷೇತ್ರಕ್ಕೆ ಬಂದಿದ್ದಾನೆ. ಚುನಾವಣೆ ವರ್ಷ ಇದು. ಶಾಸಕರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುವ ಪರಿಪಾಟ ಇದೆ. ಈ ಪಿಎಸ್ಐ ನನ್ನ ಕ್ಷೇತ್ರಕ್ಕೆ ಬೇಡ ಎಂದು ಹೇಳಿದ್ದೆ. ಆದರೂ, ಐಜಿ ಹೇಳಿದ್ದಾರೆ ಎಂದು ಆತ ರಾತ್ರಿ ಬಂದು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾನೆ’ ಎಂದು ತಿಳಿಸಿದರು.

‘ಶಾಸಕ ಹೇಳಿದ ಅಧಿಕಾರಿಯನ್ನು ಅವರ ಕ್ಷೇತ್ರಕ್ಕೆ ಹಾಕುವ ಸಂಪ್ರದಾಯ ಇದೆ. ಐಜಿಪಿ ದೊಡ್ಡ ವ್ಯಕ್ತಿಯಲ್ಲ. ಐಜಿಪಿ ದುಡ್ಡು ಪಡೆದು ಆತನನ್ನು ಇಲ್ಲಿಗೆ ಹಾಕಿರಬಹುದು. ಪೊಲೀಸರ ಬಣ್ಣವನ್ನು ಬಯಲಿಗೆ ಎಳೆಯುತ್ತೇನೆ. ಯಾವ ಬ್ರಾಂದಿ ಶಾಪ್‌ನಲ್ಲಿ ಎಷ್ಟು ವಸೂಲಿ ಮಾಡುತ್ತಾರೆ ಎಲ್ಲ ಗೊತ್ತು’ ಎಂದು ಉತ್ತರಿಸಿದರು.

‘ನಾನು ಆ ಪಿಎಸ್‌ಐಗೆ ಶಿಫಾರಸು ಪತ್ರ ನೀಡಿಲ್ಲ. ನನ್ನ ಕ್ಷೇತ್ರಕ್ಕೆ ಯಾರನ್ನು ಹಾಕಬೇಕು ಎಂದು ಶೀಘ್ರದಲ್ಲಿ ಹೇಳುವುದಾಗಿ ಸಂಬಂಧಪಟ್ಟವರಿಗೆ ತಿಳಿಸಿದ್ದೆ. ಶಿಫಾರಸು ಪತ್ರದಲ್ಲಿರುವ ಸಹಿ ನನ್ನದಲ್ಲ. ಪತ್ರದ ಬಗ್ಗೆಯೂ ತನಿಖೆ ಮಾಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT