ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು | ನವಭಾರತ ನಿರ್ಮಾಣ ಬಿಜೆಪಿ ಕನಸು

ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದಲ್ಲಿ ಇಂಧನ ಸಚಿವ ಸುನಿಲ್ ಕುಮಾರ್
Last Updated 26 ಜೂನ್ 2022, 6:12 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ಬಿಜೆಪಿಯನ್ನು ಕೇವಲ ಒಂದು ಜಾತಿಗೆ ಸೀಮಿತವಾಗಿ ಕಟ್ಟಿಲ್ಲ. ರಾಷ್ಟ್ರೀಯತೆಯ ಕಲ್ಪನೆಯನ್ನು ಕಣ್ಣ ಮುಂದೆ ಇಟ್ಟುಕೊಂಡು ಪಕ್ಷ ಕಟ್ಟಲಾಗಿದೆ. ನವಭಾರತದ ನಿರ್ಮಾಣ ಪಕ್ಷದ ಕನಸು. ಹಿಂದುಳಿದ ವರ್ಗದ ಆಯೋಗದ ಪರಿಕಲ್ಪನೆ ನೀಡಿದ್ದು ಬಿಜೆಪಿ’ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.

ಕಡ್ಲೆಮಕ್ಕಿಯಲ್ಲಿರುವ ನಾರಾಯಣ ಗುರು ಸಮುದಾಯ ಭವನದಲ್ಲಿ ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು,‘ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿತ ವರ್ಗದ ಮುಖವಾಡ ಹಾಕಿಕೊಂಡು ಮುಸ್ಲಿಮರ ಒಲೈಕೆ ಮಾಡುತ್ತಿದ್ದಾರೆ. ಕನಕದಾಸ, ಓಬವ್ವ ಜಯಂತಿ ನಡೆಸಲು ಮುಂದಾಗಿದ್ದು ಬಿಜೆಪಿ ಸರ್ಕಾರ. ನಾರಾಯಣ ಗುರುಗಳ ಹೆಸರಿನಲ್ಲಿ ರಾಜ್ಯದ ಐದು ಕಡೆಗಳಲ್ಲಿ ವಸತಿ ನಿಲಯ ಸ್ಥಾಪಿಸಿದ್ದು ನಮ್ಮ ಸರ್ಕಾರ. ಇದ್ಯಾವುದನ್ನೂ ಮಾಡದೆ ಟಿಪ್ಪು ಜಯಂತಿ ಆಚರಿಸಿ ನಾನು ಹಿಂದುಳಿದ ವರ್ಗದ ನಾಯಕ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ, ನಿಜವಾಗಿಯೂ ಹಿಂದುಳಿದ ವರ್ಗದ ನಾಯಕ ಯಾರು’ ಎಂದು ಪ್ರಶ್ನಿಸಿದರು.

ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ‘ರಾಜ್ಯದಲ್ಲಿ 3.5 ಕೋಟಿ ಒಬಿಸಿ ಸಮುದಾಯದ ಜನರಿದ್ದಾರೆ. ಎಲ್ಲಾ ಸಮುದಾಯದ ಚಿಂತಕರನ್ನು ಒಟ್ಟು ಗೂಡಿಸುವ ಕೆಲಸ ಆಗಬೇಕಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಒಬಿಸಿ ಮತದಾರರು ನಿರ್ಣಾಯಕರಾಗಿದ್ದಾರೆ. ಹಿಂದುಳಿದ ವರ್ಗ ರಾಜಕೀಯ, ಔದ್ಯೋಗಿಕವಾಗಿ ಬೆಳೆದಾಗ ಮಾತ್ರ ರಾಮರಾಜ್ಯದ ಕನಸು ನನಸಾಗಲು ಸಾಧ್ಯ’ ಎಂದರು.

‘ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರ ಮೊದಲ ಬಾರಿಗೆ 75 ಜನ ಹಿಂದುಳಿದ ವರ್ಗದವರು ಸಚಿವ ಸ್ಥಾನ ಅಲಂಕರಿಸಿದ್ದಾರೆ. ಸಹಕಾರ ರಂಗದಲ್ಲಿ ಶೇ 2 ಮೀಸಲಾತಿ ಘೋಷಿಸಿದ ಪರಿಣಾಮ 92 ಸಾವಿರ ಹಿಂದುಳಿದ ಸಮುದಾಯದ ಜನ ಮುಖ್ಯವಾಹಿನಿಗೆ ಬಂದಿದ್ದಾರೆ. ಹಿಂದುಳಿದ ವರ್ಗದವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ 39 ಕಡೆಗಳಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಹಿಂದುಳಿದ ವರ್ಗದವರನ್ನು ರಾಜಕೀಯವಾಗಿ, ಶೈಕ್ಷಣಿಕವಾಗಿ ಬಲಿಷ್ಠಗೊಳಿಸುವುದು ನಮ್ಮ ಉದ್ದೇಶ’ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮಾತನಾಡಿ, ‘ಹಿಂದುಳಿದ ವರ್ಗದ ಮತದಾರರು ಎಲ್ಲಾ ಸಂದರ್ಭದಲ್ಲೂ ಬಿಜೆಪಿ ಕೈ ಹಿಡಿದಿದ್ದಾರೆ. ಕ್ಷೇತ್ರದಲ್ಲಿ ಆಡಳಿತ ವೈಫಲ್ಯದಿಂದಾಗಿ ಈಗಾಗಲೇ 7 ಜನ ಸರ್ಕಾರಿ ನೌಕರರು ಜೈಲಿಗೆ ಹೋಗಿದ್ದಾರೆ. ಈ ಪಟ್ಟಿ ಇನ್ನಷ್ಟು ಬೆಳೆದರೂ ಆಶ್ಚರ್ಯವಿಲ್ಲ. ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕಿನ ಕುಂಬಾರ, ವಿಶ್ವಕರ್ಮ, ಬ್ರಾಹ್ಮಣ, ಮುಂಡಾಲ ಸಮಾಜದ ಸಭಾಭವನ, ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡಿದೆ’ ಎಂದರು.

ಮೂಡಿಗೆರೆ ಶಾಸಕ ಕುಮಾರಸ್ವಾಮಿ, ಶಾಸಕ ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಆಶೋಕ್ ಕುಮಾರ್, ಜಿಲ್ಲಾ ಅಧ್ಯಕ್ಷ ವೆನಿಲ್ಲಾ ಭಾಸ್ಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮುರುಡಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಸ್ವಾಮಿ, ಶಿಲ್ಪಾ ರವಿ, ಪ್ರಭಾಕರ ಪ್ರಣಸ್ವಿ, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ನಾರಾಯಣಾಚಾರ್ ಇದ್ದರು.

ಸಮಸ್ಯೆ ಆಲಿಸದ ಸಚಿವ– ಆಕ್ರೋಶ: ಕೃಷಿ ಭೂಮಿಗೆ ಪಂಟ್‌ಸೆಟ್ ಅಳವಡಿಸಲು ರೈತರಿಂದ ಹಣ ಕಟ್ಟಿಸಿಕೊಂಡ ನಂತರ ಅಗತ್ಯವಾಗಿ ಬೇಕಾದ ಕಂಬ, ತಂತಿ ಮೆಸ್ಕಾಂ ನೀಡುತ್ತಿಲ್ಲ ಎಂಬ ದೂರಿನ ಬಗ್ಗೆ ರೈತರು, ಪತ್ರಕರ್ತರು ಸಚಿವ ಸುನಿಲ್ ಕುಮಾರ್ ಅವರನ್ನು ಕೇಳಲು ಮುಂದಾಗುತ್ತಿದ್ದಂತೆ ಯಾರ ಜೊತೆಗೂ ಮಾತನಾಡದೆ ಸಚಿವರು ಕಾರು ಹತ್ತಿದರು. ಇದರಿಂದಾಗಿ ಸ್ಥಳದಲ್ಲಿದ್ದ ಹಲವಾರು ಜನ ರೈತರು ಆಕ್ರೋಶಗೊಂಡು, ‘ಸಚಿವರಿಗೆ ಜನಸಾಮಾನ್ಯರ ಸಮಸ್ಯೆ ಆಲಿಸುವ ಸೌಜನ್ಯ ಕೂಡ ಇಲ್ಲ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT