ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್ಐ ಅಮಾನತು, ಕ್ರಮಕ್ಕೆ ಆಗ್ರಹ

Last Updated 24 ಅಕ್ಟೋಬರ್ 2018, 14:16 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಿಜೆಪಿ ಮುಖಂಡ ಶಿವಣ್ಣ ಅರೆಗುಡಿಗೆ ಮೇಲೆ ನಗರಠಾಣೆ ಪಿಎಸ್‌ಐ ರಘು ಹಲ್ಲೆ ಮಾಡಿದ್ದು, ಅವರನ್ನು ಅಮಾನತುಗೊಳಿಸಬೇಕು ಎಂದು ಬಿಜೆಪಿ ಮುಖಂಡರು, ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನಾಕಾರರು ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಜಮಾಯಿಸಿ ಪ್ರತಿಭಟನೆ ಮಾಡಿದರು. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಸಿ.ಟಿ.ರವಿ ಮಾತನಾಡಿ, ‘ಶಿವಣ್ಣ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲು ಅಧಿಕಾರ ಇದೆ. ಆದರೆ, ದೌರ್ಜನ್ಯ ಎಸಗಲು ಪೊಲೀಸರಿಗೆ ಅಧಿಕಾರ ಇಲ್ಲ. ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿ ದರ್ಪ ತೋರಿದ್ದಾರೆ. ಕ್ರಮ ಜರುಗಿಸಲೇಬೇಕು’ ಎಂದು ಒತ್ತಾಯಿಸಿದರು.

‘ಈ ಪಿಎಸ್‌ಐ ಈ ವರ್ತನೆ ಹೊಸದಲ್ಲ. ಈ ಹಿಂದೆ ನಾಲ್ಕೈದು ಪ್ರಕರಣಗಳಲ್ಲಿ ಸಮಸ್ಯೆಯಾಗಿತ್ತು, ಎಚ್ಚೆತ್ತುಕೊಳ್ಳಬಹುದು ಎಂದುಕೊಂಡಿದ್ದೆವು. ತಪ್ಪು ಮಾಡಿರುವವರನ್ನು ನಾವು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ತಪ್ಪು ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

‘ಠಾಣೆಗೆ ಕರೆದೊಯ್ದು ಥಳಿಸಲು ಅವರಿಗೇನು ಅಧಿಕಾರ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ, ರಾಜಕಾರಣ ಮಾಡುವುದಿಲ್ಲ. ಸಿ.ಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಕ್ರಮ ಕೈಗೊಳ್ಳಲಿ. ಕೂಲಂಕಷವಾಗಿ ತನಿಖೆ ಮಾಡಬೇಕು. ಪೊಲೀಸರೇ ರೌಡಿಗಳಂತೆ ವರ್ತಿಸಿದರೆ ಮಟ್ಟಹಾಕಲು ಮತ್ತೊಬ್ಬ ರೌಡಿ ಹುಟ್ಟಿಕೊಳ್ಳುತ್ತಾನೆ. ರೌಡಿಗಳಂತೆ ವರ್ತಿಸುವವರು ಪೊಲೀಸ್‌ ಇಲಾಖೆಯಲ್ಲಿ ಇದ್ದರೆ ಇಲಾಖೆಗೆ ಕೆಟ್ಟ ಹೆಸರು ಮೆತ್ತಿಕೊಳ್ಳುತ್ತದೆ’ ಎಂದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ‘ಕ್ಷುಲ್ಲಕ ಕಾರಣಕ್ಕೆ ಶಿವಣ್ಣ ಅವರನ್ನು ಪಿಎಸ್‌ಐ ರಘು ಥಳಿಸಿದ್ದಾರೆ. ದರ್ಪ ತೋರಿ, ರಕ್ತ ಬರುವಂತೆ ಹೊಡೆದಿದ್ದಾರೆ. ಹಿಂದೊಮ್ಮೆ ಬಿಜೆಪಿ ಕಾರ್ಯಕರ್ತರೊಬ್ಬರಿಗೆ ಹೊಡೆದಿದ್ದರು. ಖಾಕಿ ದುರುಪಯೋಗ ಆಗುತ್ತಿರುವುದಕ್ಕೆ ಈ ಪ್ರಕರಣ ಸಾಕ್ಷಿ. ಪಿಎಸ್‌ಐ ಅವರನ್ನು ಅಮಾನತು ಮಾಡಬೇಕು. ಬೇರೆ ಜಿಲ್ಲೆಗೆ ವರ್ಗಾಯಿಸಬೇಕು’ ಎಂದು ಒತ್ತಾಯಿಸಿದರು.

ವಿಧಾನಪರಿಷತ್ತಿನ ಸದಸ್ಯ ಎಂ.ಕೆ.ಪ್ರಾಣೇಶ್‌ ಮಾತನಾಡಿ, ‘ಶಿವಣ್ಣ ಮೇಲೆ ಪಿಎಸ್‌ಐ ರಘು ಅವರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದರ ಹಿಂದೆ ದುರುದ್ದೇಶ ಇದೆ. ಈ ಅಧಿಕಾರಿಯ ವರ್ತನೆ ಪುನರಾವರ್ತನೆ ಆಗುತ್ತಿದೆ. ಅವರನ್ನು ತಕ್ಷಣ ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರು ಜಿಲ್ಲಾ ಪೊಲೀಸ್‌ ಕಚೇರಿಗೆ ಎಸ್ಪಿಗೆ ಮನವಿ ಸಲ್ಲಿಸಿದರು. ಬಿಜೆಪಿ ಮುಖಂಡರಾದ ಎಂ.ಎಸ್‌.ಭೋಜೇಗೌಡ, ಕಲ್ಮುರುಡಪ್ಪ, ವರಸಿದ್ಧಿ ವೇಣುಗೋಪಾಲ್‌, ರಾಜಪ್ಪ, ಸಿ.ಎಚ್‌.ಲೋಕೇಶ್‌, ಪ್ರೇಮ್‌ಕುಮಾರ್‌, ಬಣಕಲ್‌ ಶಾಮಣ್ಣ, ದೇವರಾಜಶೆಟ್ಟಿ, ರಾಜಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT