ತಪ್ಪದ ತೆಪ್ಪದ ಸಹವಾಸ

7

ತಪ್ಪದ ತೆಪ್ಪದ ಸಹವಾಸ

Published:
Updated:
ಮೂಡಿಗೆರೆ ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಕುಡಿಗೆ ವಿದ್ಯಾರ್ಥಿಗಳು ಭದ್ರಾನದಿಯನ್ನು ತೆಪ್ಪದಲ್ಲಿ ದಾಟುತ್ತಿರುವುದು.

ಮೂಡಿಗೆರೆ: ತಾಲ್ಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆದಿವಾಸಿಗಳ ಕುಟುಂಬದಲ್ಲಿ ವಾಸಿಸುತ್ತಿರುವ ಹೊಳೆಕೂಡಿಗೆ ಗ್ರಾಮಸ್ಥರು ಭದ್ರಾನದಿಯನ್ನು ತೆಪ್ಪದ ಮೂಲಕ ದಾಟುವ ಸಹವಾಸ ತಪ್ಪದೇ ಪರದಾಡುತ್ತಿದ್ದಾರೆ.

ಹೊಳೆಕೂಡಿಗೆ ಗ್ರಾಮದಿಂದ ಮಾಗುಂಡಿ ಅಥವಾ ಬಾಳೆಹೊನ್ನೂರಿಗೆ ತಲುಪಲು ಈ ಆದಿವಾಸಿ ಕುಟುಂಬಗಳು ಧುಮ್ಮಿಕ್ಕಿ ಹರಿಯುತ್ತಿರುವ ಭದ್ರಾ ನದಿಯನ್ನು ತೆಪ್ಪದ ಮೂಲಕ ದಾಟಬೇಕಿದ್ದು, ವಿದ್ಯಾರ್ಥಿಗಳು, ಗ್ರಾಮಸ್ಥರು ಜೀವಭಯದಲ್ಲಿ ನದಿಯನ್ನು ದಾಟುತ್ತಿದ್ದಾರೆ.

ಭದ್ರಾನದಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ತೆಪ್ಪದಲ್ಲಿ ಸಂಚಾರ ದುಸ್ತರವಾಗಿದೆ. ಇಲ್ಲಿನ ಆದಿವಾಸಿ ಕುಟುಂಬಗಳು ತೆಪ್ಪದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ಮಾಧ್ಯಮಗಳು ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಗ್ರಾಮಸ್ಥರ ಅಳಲಾಗಿದ್ದು, ಭದ್ರಾ ನದಿಗೊಂದು ಸೇತುವೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ನಾಲ್ಕು ಆದಿವಾಸಿ ಕುಟುಂಬಗಳು ವಾಸಿಸುತ್ತಿರುವ ಈ ಗ್ರಾಮದಲ್ಲಿ ಸುಮಾರು 15ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಅವರೆಲ್ಲರೂ ಪ್ರತಿದಿನ ತೆಪ್ಪದಲ್ಲಿಯೇ ಸಂಚರಿಸಿ ಬಾಳೆಹೊನ್ನೂರು ಅಥವಾ ಮಾಗುಂಡಿ ಶಾಲೆಯನ್ನು ತಲುಪಬೇಕಾದ ದುಃಸ್ಥಿತಿ ಎದುರಾಗಿದೆ. ತುಂಬಿ ಹರಿಯುತ್ತಿರುವ ಭದ್ರಾನದಿಯಲ್ಲಿ ವಿದ್ಯಾರ್ಥಿಗಳೇ ತೆಪ್ಪವನ್ನು ಮುನ್ನೆಡೆಸುವುದು ಮೈ ಜುಮ್ಮೆನ್ನಿಸುತ್ತದೆ. ಈ ಗ್ರಾಮದ ಮಹಿಳೆಯರು ಬಾಳೆಹೊನ್ನೂರು, ಮಾಗುಂಡಿಗಳಲ್ಲಿ ಕೂಲಿ ಕೆಲಸಕ್ಕಾಗಿ ತೆರಳಲು ಇದೇ ತೆಪ್ಪದ ಮೂಲಕ ಸಾಗಬೇಕಿದ್ದು, ಮಳೆ ಹೆಚ್ಚಾದರೆ ನದಿಯ ನೀರಿನ ಮಟ್ಟ ಹೆಚ್ಚಳವಾಗಿ ಕೂಲಿ ಕೆಲಸಕ್ಕೆ ತೆರಳದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಮದಲ್ಲಿ ಮಹಿಳೆಯರು, ವೃದ್ಧರು ಆಸ್ಪತ್ರೆಗಳಿಗೆ ತೆರಳಲು ತೆಪ್ಪದವರೆಗೂ ಹೆಗಲಿನ ಮೇಲೆ ಹೊತ್ತುಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಕ್ಕೆ ರಸ್ತೆಯಿಲ್ಲದ ಕಾರಣ, ಗ್ರಾಮದವರೊಂದಿಗೆ ಹೊರಗಿನವರ ಒಡನಾಟವೂ ಕಡಿಮೆಯಾಗಿದ್ದು, ಗ್ರಾಮದ ಯುವಕರಿಗೆ ವೈವಾಹಿಕ ಸಂಬಂಧ ಗಗನ ಕುಸುಮವಾಗಿ ಮಾರ್ಪಟ್ಟಿದೆ. ಸಂಬಂಧ, ನೆಂಟರಿಷ್ಟರ ಸಂಪರ್ಕವೂ ಕಡಿತವಾಗಿದ್ದು, ಮಳೆಗಾಲದಲ್ಲಿ ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಬಂಧುಗಳು ನದಿ ದಾಟಲು ಭೀತರಾಗುವುದರಿಂದ ನಾಲ್ಕು ಮನೆಯವರಷ್ಟೇ ಸೇರಿ ಅಂತ್ಯಕ್ರಿಯೆ ನಡೆಸಬೇಕಾಗುತ್ತದೆ.

ಗ್ರಾಮಕ್ಕೆ ಬಾಳೆಹೊಳೆ ಮಾರ್ಗವಾಗಿ ಸಂಪರ್ಕ ಕಲ್ಪಿಸಲು ಮಣ್ಣಿನ ರಸ್ತೆಯಿದ್ದು, ಇದು ಸಂಪೂರ್ಣ ಗುಂಡಿಬಿದ್ದು, ನಡೆದು ಸಂಚರಿಸಲು ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಈ ರಸ್ತೆ ದುರಸ್ತಿಯಾದರೆ 8 ಕಿ.ಮೀ. ಸುತ್ತಿ ಬಾಳೆಹೊಳೆಯನ್ನು ಸಂಪರ್ಕಿಸಿ ಬಾಳೆಹೊನ್ನೂರಿಗೆ ತೆರಳಬಹುದಾಗಿದೆ.

ಕೂಡಲೇ ಹೊಳೆಕೂಡಿಗೆ ಗ್ರಾಮಕ್ಕೆ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ಕಲ್ಪಿಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕಗ್ಗನಹಳ್ಳ ಗ್ರಾಮದ ಹೊಳೆಕೂಡಿಗೆಯು ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇದುವರೆಗೂ ಕಂದಾಯವನ್ನು ಇಡಕಣಿ ಗ್ರಾಮ ಪಂಚಾಯಿತಿಗೆ ಕಟ್ಟುತ್ತಿದ್ದೇವೆ. ಅನೇಕ ಬಾರಿ ಪತ್ರಿಕೆಗಳು ವರದಿ ಮಾಡಿದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಯಾವುದೇ ಪರಿಹಾರ ಕೈಗೊಂಡಿಲ್ಲದಿರುವುದರಿಂದ ತುಂಬಿ ಹರಿಯುತ್ತಿರುವ ಭದ್ರಾನದಿಯನ್ನು ಜೀವ ಬಿಗಿ ಹಿಡಿದುಕೊಂಡು ತೆಪ್ಪದಲ್ಲಿ ದಾಟಬೇಕಾಗಿದೆ ಎಂದು ಗ್ರಾಮಸ್ಥ ಸಂದೇಶ್‌ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !