ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೋಟಿಗಾಗಿ ಬಿಜೆಪಿಯಿಂದ ಬಿಎಸ್‌ವೈ ಧ್ಯಾನ: ಕುಮಾರಸ್ವಾಮಿ

Last Updated 25 ಫೆಬ್ರುವರಿ 2023, 12:55 IST
ಅಕ್ಷರ ಗಾತ್ರ

ಶೃಂಗೇರಿ: ‘ನರೇಂದ್ರ ಮೋದಿ ಮತ್ತು ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದಾರೆ. ಬಿಎಸ್‌ವೈ ಹೆಸರು ಹೇಳದಿದ್ದರೆ ವೋಟುಗಳು ಕೈತಪ್ಪುತ್ತವೆ ಎಂದು ಅವರ ಧ್ಯಾನ ಮಾಡಲು ಶುರು ಮಾಡಿದ್ದಾರೆ, ಈಗಾಲಾದರೂ ಅವರ ಧ್ಯಾನ ಮಾಡುತ್ತಿರುವುದಕ್ಕೆ ಮೆಚ್ಚಿಕೊಳ್ಳಬೇಕು’ ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದರು.

‘ಅಮಿತ್‌ ಶಾ ಅವರು ವಸ್ತುಸ್ಥಿತಿ ಹೇಳಬೇಕು. 100 ಸುಳ್ಳು ಹೇಳಿ ನಿಜ ಮಾಡಲು ಅವರು ಹೊರಟಿದ್ದಾರೆ. ಬಿಜೆಪಿಗೆ ಬೆಂಬಲಿಸಿದರೆ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಕಳೆದ ಮೂರೂವರೆ ವರ್ಷಗಳ ಬಿಜೆಪಿ ಆಡಳಿತ ಭ್ರಷ್ಟಾಚಾರದಿಂದ ಕೂಡಿದೆಯೇ ಎಂಬುದನ್ನು ಬಿಡಿಸಿ ಹೇಳಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ ನಿದರ್ಶನಗಳು ಇವೆ. ಕರ್ನಾಟಕದಲ್ಲೂ ಕೆಲ ಸ್ವಾಮೀಜಿಗಳು, ಧಾರ್ಮಿಕ ಭಾವನೆಗಳನ್ನು ಜನರ ಮುಂದಿಟ್ಟು ಚುನಾವಣೆ ತಂತ್ರ ಹೆಣೆಯಲು ಬಿಜೆಪಿಯವರು ಮುಂದಾಗಿದ್ದಾರೆ ಎಂಬುದನ್ನು ಟಿವಿಯಲ್ಲಿ ನೋಡಿದ್ದೇನೆ. ಯಾರನ್ನಾದರೂ ಕಣಕ್ಕಿಳಿಸಲಿ ಆದರೆ, ಅವರನ್ನು ಸ್ವಾರ್ಥಕ್ಕಾಗಿ ಬಿಜೆಪಿ ನಾಯಕರು ಬಳಸಿಕೊಳ್ಳಬಾರದು. ಧಾರ್ಮಿಕ ಕ್ಷೇತ್ರ, ಗುರು ಭಕ್ತಿ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವುದಕ್ಕೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

‘ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಎಡೆಮಾಡಿದ್ದರು ಎಂದು ಅಮಿತ್‌ ಶಾ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಕ್ಕೆ, ಶಾಸಕರ ಖರೀದಿಗೆ ಯಾವ ಹಣ ಬಳಕೆ ಮಾಡಿದರು? ಹಣ ಎಲ್ಲಿಂದ ಬಂತು?’ ಎಂದು ಅವರು ಪ್ರಶ್ನಿಸಿದರು.
‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ ಅವರನ್ನು ತಾನು ನೋಡಿಕೊಳ್ಳುತ್ತೇನೆ ಎಂದು ಅಮಿತ್‌ ಶಾ ಅವರು ಕಾರ್ಯಕರ್ತರಿಗೆ ಹೇಳಿದ್ದಾರೆ. ನೋಡಿಕೊಳ್ಳುತ್ತೇನೆ ಎಂದರೆ ಅರ್ಥ ಏನು? ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯ (ಇಡಿ) ಅಥವಾ ಇನ್ನಾವುದನ್ನು ಬಿಟ್ಟು ನೋಡಿಕೊಳ್ಳುತ್ತೀರಿ? ಎಂದೂ ಕೇಳಿದರು.

‘ಜೆಡಿಎಸ್‌ನವರು ಗೆದ್ದೆತ್ತಿನ ಬಾಲ ಹಿಡಿಯುತ್ತಾರೆ ಎಂದು ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಯಾರ ಬಾಲವನ್ನು ಹಿಡಿಯಲು ಜೆಡಿಎಸ್‌ನವರು ಹೋಗಿಲ್ಲ. ಗೆದ್ದಂಥ ಎರಡೂ ರಾಷ್ಟ್ರೀಯ ಪಕ್ಷಗಳು ಸೋತ ಪಕ್ಷದ ಬಾಲ ಹಿಡಿಯಲು ಬಂದ್ದಿದ್ದರು’ ಎಂದು ಕುಟುಕಿದರು.
‘15ನೇ ವಿಧಾನಸಭೆ ಅಧಿವೇಶನದ ಕೊನೆ ದಿನ ಶಾಸಕರು ರಾಜಕೀಯ ಮಜಲುಗಳನ್ನು ಮೆಲುಕು ಹಾಕಿದ್ದಾರೆ. ಪರಸ್ಪರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂತಿಮ ವಿದಾಯ ಸಂದರ್ಭದಲ್ಲಾದರೂ ಮನಸ್ಸುಬಿಚ್ಚಿ ಮಾತಾಡಿರುವುದು ಸಮಾಧಾನಕರ ಬೆಳವಣಿಗೆ. ಇದೊಂದು ಹೊಸ ಬೆಳವಣಿಗೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಈಗ ಮಂಡಿಸಿರುವುದು ಚುನಾವಣಾ ಬಜೆಟ್‌. ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಈ ಬಜೆಟ್‌ ಕಾರ್ಯಕ್ರಮಗಳು ಕಾರ್ಯಗತವಾಗಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT