ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಮತ್ತೆ ಪ್ರಧಾನಿಯಾಗಲೆಂದು ಹರಕೆ: ಸಿ.ಟಿ.ರವಿ

ದತ್ತ ಜಯಂತಿ ನಿಮಿತ್ತ ಭಿಕ್ಷಾಟನೆ ಪಡಿ ಸಂಗ್ರಹ
Last Updated 21 ಡಿಸೆಂಬರ್ 2018, 9:57 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 350ಕ್ಕೂ ಹೆಚ್ಚು ಸ್ಥಾನ ಪ್ರಾಪ್ರಿಯಾಗಲಿ, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು ಹರಕೆ ಹೊತ್ತಿದ್ದೇನೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಸಿ.ಟಿ.ರವಿ ಇಲ್ಲಿ ಶುಕ್ರವಾರ ಹೇಳಿದರು.

ದತ್ತ ಜಯಂತಿ ನಿಮಿತ್ತ ನಗರದಲ್ಲಿ ಭಿಕ್ಷಾಟನೆ ಮಾಡಿ ಪಡಿ (ಅಕ್ಕಿ, ಬೆಲ್ಲ) ಸಂಗ್ರಹ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ನೇತೃತ್ವ ಭಾರತಕ್ಕೆ ಅಗತ್ಯ ಇದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶದ ಭವಿಷ್ಯ ಮತ್ತಷ್ಟು ಗಟ್ಟಿಯಾಗುತ್ತದೆ’ ಎಂದರು.

‘ಸ್ವಾರ್ಥರಹಿತ ರಾಜಕಾರಣ ಅಗತ್ಯ ಇದೆ. ಮೋದಿ ಅವರು ನಿಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಅವರು ಪ್ರಧಾನಿಯಾದ ನಂತರ ಜಾಗತಿಕಮಟ್ಟದಲ್ಲಿ ದೇಶಕ್ಕೆ ಗೌರವ ಲಭಿಸಿದೆ. ದೇಶದ ಪ್ರಗತಿ ನಿಟ್ಟಿನಲ್ಲಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಶ್ರೀಗುರುದತ್ತಾತ್ರೇಯಗೆ ಹರಕೆ ಮಾಡಿಕೊಂಡಿದ್ದೇನೆ’ ಎಂದು ಹೇಳಿದರು. .

‘ಮತ್ತೊಬ್ಬರ ಭಾವನೆ ಅಗೌರವಿಸುವ ಮಾತುಗಳನ್ನು ಆಡಬಾರದು. ಇದನ್ನು ಮುಖ್ಯಮಂತ್ರಿ ಅರ್ಥ ಮಾಡಿಕೊಳ್ಳಬೇಕು. ದತ್ತಾತ್ರೇಯ ಪೀಠ ಅತ್ರಿಕ್ರಮಿಸಿರುವವರಿಗೆ ಬುದ್ಧಿ ಹೇಳಬೇಕಾದವರು, ಓಟಿನ ಆಸೆಗಾಗಿ ದತ್ತಪೀಠದ ಭಕ್ತಿ ಮತ್ತು ಶಕ್ತಿ ಆಂದೋಲನಕ್ಕೆ ಅವಹೇಳನ ಮಾಡುವುದನ್ನು ಜನರು ಒಪ್ಪುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ನೀವು ವೈಯುಕ್ತಿಕ ಸ್ವಾರ್ಥದ ದೃಷ್ಟಿಯಿಂದ ದೇಗುಲಕ್ಕೆ ತೆರಳಬಹುದು. ಕಳೆದಕೊಂಡಿರುವ ದತ್ತಪೀಠವನ್ನು ಮರಳಿ ಪಡೆಯಲು ಸಂಕಲ್ಪವಾಗಿ ನಾವು ದತ್ತಜಯಂತಿ, ದತ್ತಮಾಲೆ ಅಭಿಯಾನ ಆರಂಭಿಸಿದ್ದೇವೆ. ಇದು ನಮ್ಮ ತಲೆಮಾರಿನಿಂದ ಆರಂಭವಾಗಿರಬಹುದು, ಈ ತಲೆಮಾರಿಗೆ ಕೊನೆಯಾಗುವುದಿಲ್ಲ. ದತ್ತಪೀಠ ಮುಕ್ತಿ ನಂತರವೂ ಭಕ್ತಿಯ ಆಂದೋಲನವಾಗಿ ಮುಂದುವರಿಯುತ್ತದೆ. ಇದಕ್ಕೆ ಅಪಮಾನ, ಅವಹೇಳನ ಮಾಡಬಾರದು’ ಎಂದರು.

‘ದತ್ತ ಜಯಂತಿ ಸಂಭ್ರಮದ ವಾತಾವರಣದಲ್ಲಿ ನಡೆಯಬೇಕು. ಆ ರೀತಿ ಮಾಡುವುದು ಸರ್ಕಾರದ ಕರ್ತವ್ಯ. ಭಯಮುಕ್ತ ವಾತಾವರಣ ನಿರ್ಮಾಣ ಮಾಡಬೇಕು. ದತ್ತಜಯಂತಿಯಂದು ಅಂಗಡಿಮುಂಗಟ್ಟು ಬಾಗಿಲು ತೆರೆಯದಂತೆ ನಿರ್ಬಂಧ ಹೇರಿರುವುದು ಸರಿಯಲ್ಲ. ಭಯದ ವಾತಾವರಣ ನಿರ್ಮಿಸುವಂಥ ಅತಿರೇಕದ ಕಾರ್ಯಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೈಹಾಕಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT