ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ವೇ ಬಿಲ್‌: ಹಂತಗಳಲ್ಲಿ ಜಾರಿಗೆ ತರಲು ವರ್ತಕರ ಒಕ್ಕೂಟ ಸಲಹೆ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಏಪ್ರಿಲ್‌ನಿಂದ ದೇಶದಾದ್ಯಂತ ಇ–ವೇ ಬಿಲ್‌ ಸುಸೂತ್ರವಾಗಿ ಜಾರಿಗೆ ತರಲು ಅದನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಬೇಕು ಎಂದು ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ)ಅಭಿಪ್ರಾಯಪಟ್ಟಿದೆ.

‘ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ವರ್ತಕ ಸಮುದಾಯ ಸಿದ್ಧ ಇದೆ. ಇದನ್ನು ಮುಂದೂಡಬೇಕೆಂದು ನಾವು ಬಯಸುವುದಿಲ್ಲ. ದೇಶದಾದ್ಯಂತ ಏಕಕಾಲಕ್ಕೆ ಜಾರಿಗೆ ತಂದರೆ ವ್ಯವಸ್ಥೆ ಕುಸಿದು ಬೀಳುವ ಸಾಧ್ಯತೆ ಇದೆ. ಫೆಬ್ರುವರಿ 15ರಂದು ಜಾರಿಗೆ ತರಲು ಹೊರಟಾಗ ವ್ಯವಸ್ಥೆ ಕೈಕೊಟ್ಟಿತ್ತು. ಇದೇ ಕಾರಣಕ್ಕೆ ಇದನ್ನು ಹಂತ ಹಂತವಾಗಿ ಜಾರಿಗೆ ತರಬೇಕು ಎನ್ನುವುದು ನಮ್ಮ ಸಲಹೆಯಾಗಿದೆ’ ಎಂದು ‘ಸಿಎಐಟಿ’ಯ ರಾಷ್ಟ್ರೀಯ ಅಧ್ಯಕ್ಷ ಬಿ. ಸಿ. ಭಾರ್ತಿಯಾ ಹೇಳಿದ್ದಾರೆ.

‘ಆರಂಭದಲ್ಲಿ ಇದನ್ನು ₹ 100 ಕೋಟಿಗಿಂತ ಹೆಚ್ಚಿನ ವಹಿವಾಟುದಾರರಿಗೆ ಅನ್ವಯಿಸಬೇಕು. ಮೊದಲ ಹಂತದಲ್ಲಿಯೇ ಗಮನಾರ್ಹ ಸಂಖ್ಯೆಯ ತೆರಿಗೆದಾರರು ಇದರ ವ್ಯಾಪ್ತಿಗೆ ಬರುತ್ತಾರೆ. ಹಂತ ಹಂತವಾಗಿ ವಹಿವಾಟು ಮೊತ್ತ ತಗ್ಗಿಸಿ ಎಲ್ಲರನ್ನೂ ಇದರ ವ್ಯಾಪ್ತಿಗೆ ತರಬೇಕು. ಆರಂಭದಿಂದಲೇ  ₹ 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸರಕು ಸಾಗಾಣಿಕೆಯನ್ನು ಈ ವ್ಯವಸ್ಥೆಯ ವ್ಯಾಪ್ತಿಗೆ ತರುವುದರಿಂದ ಸರ್ವರ್‌ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

‘ಜಿಎಸ್‌ಟಿ ಮಂಡಳಿಯ ಭರವಸೆಯ ಹೊರತಾಗಿಯೂ ವರ್ತಕ ಸಮುದಾಯದಲ್ಲಿ ಈಗಲೂ ಆತಂಕ ಮನೆ ಮಾಡಿದೆ. ಜಿಎಸ್‌ಟಿ ಅಳವಡಿಕೆ ಸರ್ಕಾರ ಹೇಳಿದಷ್ಟು ಸುಲಭವಲ್ಲ. ಸಣ್ಣ ವರ್ತಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳ ಕಿರುಕುಳಕ್ಕೂ ಒಳಗಾಗಿದ್ದಾರೆ’ ಎಂದು ಹೇಳಿದ್ದಾರೆ.

ಇ–ವೇ ಬಿಲ್‌ ವ್ಯವಸ್ಥೆಯಲ್ಲಿ, ₹ 50 ಸಾವಿರ ಮೊತ್ತದ ಸರಕುಗಳನ್ನು 10 ಕಿ.ಮೀ ಆಚೆಗೆ ಸಾಗಿಸುವ ಮುಂಚೆಯೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT