ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಮಾಡಿ ಘಾಟಿಯ ಹೆದ್ದಾರಿ ಅಭಿವೃದ್ಧಿ: ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭ

ಟೆಂಡರ್‌ ಪ್ರಕ್ರಿಯೆ ಪೂರ್ಣ
Last Updated 7 ನವೆಂಬರ್ 2020, 1:49 IST
ಅಕ್ಷರ ಗಾತ್ರ

ಕೊಟ್ಟಿಗೆಹಾರ: 2019ರಲ್ಲಿ ಸುರಿದ ಮಳೆಗೆ ಚಾರ್ಮಾಡಿ ಘಾಟಿಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಭೂಕುಸಿತ ವಾಗಿತ್ತು. ಇದನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿ ಲಘು ವಾಹನಗಳು, ಮಿನಿ ಬಸ್ ಸಂಚಾರ ಆರಂಭಗೊಂಡಿದೆ. ಈ ಮಧ್ಯೆ ಘಾಟಿಯಲ್ಲಿ ಹೆದ್ದಾರಿಯ ಶಾಶ್ವತ ಅಭಿವೃದ್ಧಿಗೆ ಟೆಂಡರ್ ಕರೆದಿದ್ದು, ಇನ್ನೆರಡು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ.

ಚಾರ್ಮಾಡಿ ಘಾಟಿಯ ಒಂದು ತಿರುವಿನ ಭಾಗದಲ್ಲಿ ಕುಸಿದ ದಿಣ್ಣೆಗೆ ತಡೆಗೋಡೆ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ. ಚಿಕ್ಕಮಗಳೂರು- ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ರಸ್ತೆ ಅಭಿವೃದ್ಧಿಯಾಗದೇ ಇತರ ಘನ ವಾಹನಗಳು, ರಾಜ್ಯ ಸಾರಿಗೆ ಬಸ್‍ಗಳ ಸಂಚಾರವೂ ನಿಷೇಧವಾಗಿಯೇ ಉಳಿದಿದೆ. ಈ ರಸ್ತೆಯಲ್ಲಿ ನಿಯಮಿತ ಮಿನಿ ಬಸ್ ಸಂಚಾರ ಇದ್ದರೂ ಸಂಜೆ 6 ಗಂಟೆ ನಂತರ ಮಿನಿ ಬಸ್ ಸಂಚಾರ ಇಲ್ಲದಿರುವುದರಿಂದ ಆಸ್ಪತ್ರೆ, ಇತರ ಕಡೆ ಸಾಗುವವರಿಗೆ ತುಂಬಾ ತೊಂದರೆ ಅನುಭವಿಸುವಂತಾಗಿದೆ.

₹ 19.3 ಕೋಟಿ ವೆಚ್ಚದಲ್ಲಿ ಚಾರ್ಮಾಡಿ ಹೆದ್ದಾರಿಯಲ್ಲಿ 6 ತಡೆಗೋಡೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ಇದೇ 5ರಂದು ಪೂರ್ಣ ಗೊಂಡಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 13 ಕಿ.ಮೀ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 12 ಕಿ.ಮೀ ಒಟ್ಟು 25 ಕಿ.ಮೀಗೆ ₹ 9. 9ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿಯ ಟೆಂಡರ್ ಪೂರ್ಣವಾಗಿದೆ. ಇನ್ನು 2 ತಿಂಗಳಲ್ಲಿ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ವ್ಯಾಪಾರಕ್ಕೆ ವ್ಯತಿರಿಕ್ತ ಪರಿಣಾಮ: ‘ಚಾರ್ಮಾಡಿ ಘಾಟಿಯಲ್ಲಿ ಘನ ವಾಹನ ನಿಷೇಧ ಮಾಡಿದ್ದರಿಂದ ಈ ಹೆದ್ದಾರಿಯಲ್ಲಿ ವಾಹನ ವಿರಳವಾಗಿ ಓಡಾಟ ನಡೆಸುತ್ತಿದೆ. ಈ ರಸ್ತೆಯಲ್ಲಿ ಸಾಗುವ ಗ್ರಾಹಕರನ್ನೇ ನಂಬಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳ ಬದುಕು ಈಗ ಅಯೋಮಯವಾಗಿದೆ. ಚಾರ್ಮಾಡಿ ಘಾಟಿ ಹೆದ್ದಾರಿಯ ಶಾಶ್ವತ ಕಾಮಗಾರಿ ಶೀಘ್ರದಲ್ಲೇ ನಡೆಸಬೇಕು’ ಎಂಬುದು ಸಾರ್ವಜನಿಕರ ಒಕ್ಕೊರಲ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT