ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಪಕ್ಷಕ್ಕೆ ಶಾರೀಕ್ ಗುರು: ಜೀವರಾಜ್ ವ್ಯಂಗ್ಯ

ಡ್ಲೆಮಕ್ಕಿಯಲ್ಲಿ ಪರಿಶಿಷ್ಟ ಜಾತಿ ಸಮಾಜದ ಸಮಾವೇಶ
Last Updated 20 ಮಾರ್ಚ್ 2023, 6:15 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ‘ಎಲೆಮಡಲಿನಲ್ಲಿ ದಲಿತರು, ಬಡವರು ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬಲಾಢ್ಯರು ಹಾಕಿರುವ ಬೇಲಿಯನ್ನು ತೆಗೆಸಲು ಇದೂವರೆಗೂ ಶಾಸಕ ರಾಜೇಗೌಡರಿಂದ ಸಾಧ್ಯವಾಗಿಲ್ಲ. ಇದರಿಂದಾಗಿ ಬಡವರು, ದಲಿತರು ದೇವಸ್ಥಾನಕ್ಕೆ ಹೊಗಲಾರದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮುಖ್ಯ ಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಆರೋಪಿಸಿದರು.

ಇಲ್ಲಿನ ಕಡ್ಲೆಮಕ್ಕಿಯಲ್ಲಿರುವ ನಾರಾಯಣಗುರು ಸಮುದಾಯಭವನದಲ್ಲಿ ಭಾನುವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಸಮಾಜದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ. ಕೊಪ್ಪದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ. ಅಲ್ಲಿ ಹಾಳಾಗಿರುವ ಯಂತ್ರಗಳನ್ನು ದುರಸ್ತಿ ಮಾಡಿಸಲೂ ರಾಜೇಗೌಡರಿಂದ ಆಗದಿರುವುದು ದುರಂತ’ ಎಂದರು.

‌‘ಕಳೆದ ಚುನಾವಣೆಯಲ್ಲಿ ಕಾಲೊನಿ ಕಾರ್ಯಕರ್ತರು ನನ್ನ ಕೈ ಹಿಡಿದಿದ್ದರು. ಸಂಪೂರ್ಣ ಒಂದೇ ವರ್ಗದ ಜನರು ಇರುವ ಜಿಲ್ಲೆಯ ಅತಿದೊಡ್ಡ ಕಾಲೊನಿಯಾದ ಬರ್ಕನಕಟ್ಟದಲ್ಲಿ ಬಿಜೆಪಿಗೆ ಅತಿ ಹೆಚ್ಚು ಮತ ಬಿದ್ದಿತ್ತು. ಆದರೆ, ಬನ್ನೂರು ಕಾಲೊನಿ ರಸ್ತೆ ಕಾಂಕ್ರೀಟಿಕರಣಕ್ಕೆ ಮಂಜೂರಾಗಿದ್ದ ಅನುದಾನ ಯಾರ ಮನೆ ಬಾಗಿಲಿಗೆ ಹೋಗಿದೆ ಎಂಬುದನ್ನು ಶಾಸಕರು ಸ್ಪಷ್ಟ
ಪಡಿಸಬೇಕು’ ಎಂದು ಆಗ್ರಹಿಸಿದರು.

ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ಮೊದಲು ಉಚಿತ ವಿದ್ಯುತ್, ಮಹಿಳೆಯರಿಗೆ ಗೌರವಧನ ನೀಡಲಿ ಎಂದು ಆಗ್ರಹಿಸಿದ ಅವರು, ‘ವಿದ್ಯುತ್ ಕೇಳಿದ ಸುಳ್ಯದ ವ್ಯಕ್ತಿಯನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಸಚಿವರು. ಕ್ಷೇತ್ರದಲ್ಲಿ ಮತದಾರರಿಗೆ ಕುಕ್ಕರ್ ನೀಡುವ ಮೂಲಕ ಕುಕ್ಕರ್ ಸ್ಫೋಟದ ಆರೋಪಿ ಶಾರೀಕ್ ಕಡೆಯವರು ಎಂಬುದನ್ನು ತೋರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಶಾರೀಕ್ ಗುರುವಾಗಿದ್ದಾನೆ’ ಎಂದು ವ್ಯಂಗ್ಯವಾಡಿದರು.

ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ‘ಸಮಾನತೆ ನೀಡುವ ಚಿಂತನೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ. ಹಿಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಆಗಬಾರದು ಎಂಬ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ ದಲಿತರನ್ನೂ ಸೋಲಿಸಿದರು. ದಲಿತ ವರ್ಗಕ್ಕೆ ಸೇರಿದ್ದ ಕಾಂಗ್ರೆಸ್ ಶಾಸಕರ ಮನೆಯನ್ನು ಸುಟ್ಟಾಗಲೂ ಕಾಂಗ್ರೆಸ್ ಪಕ್ಷ ಯಾವ ಮುಖಂಡರೂ ಅವರ ಪರ ನಿಲ್ಲಲಿಲ್ಲ’ ಎಂದು ಆರೋಪಿಸಿದರು.

ಸಭೆಯ ನಂತರ ಎರಡು ಸಾವಿರಕ್ಕೂ ಅಧಿಕ ಜನರಿಗೆ ಬಾಡೂಟ ಹಾಕಲಾಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕಲ್ಮರುಡಪ್ಪ, ಜಿಲ್ಲಾ ಪಂಚಾಯಿತಿ
ಮಾಜಿ ಸದಸ್ಯ ರಾಮಸ್ವಾಮಿ, ಶೃಂಗೇರಿ ಶಿವಣ್ಣ, ತಾಲ್ಲೂಕು ಅಧ್ಯಕ್ಷ ಅರುಣಕುಮಾರ್, ಸುಬ್ರಹ್ಮಣಿ, ದೀಪಕ್ ದೊಡ್ಡಯ್ಯ, ಶ್ರೀನಿವಾಸ್, ಅಂಬ್ಲೂರು ರಾಮಕೃಷ್ಣ, ಪ್ರಶಾಂತ್, ಕೃಷ್ಣ, ರವಿ, ವೆಂಕಟೇಶ್, ರಾಮು, ಸುಜಾತಾ ಇದ್ದರು.

ತಿರುಚಿದ ಆಡಿಯೊ: ಜೀವರಾಜ್‌ ವಾಗ್ದಾಳಿ

‘ನಾನು ವೇದಿಕೆಯಲ್ಲಿ ಭಾಷಣ ಮಾಡಿದ ವಿಡಿಯೊದಲ್ಲಿನ ಆಡಿಯೊವನ್ನು ಕುಡಿದು ಮಾತನಾಡಿದಂತೆ ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಬಿಡುವ ಮೂಲಕ ಮಜಾ ತಗೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದ ಮಾನಸಿಕ ಆಸ್ವಸ್ಥನೊಬ್ಬ, ಈ ಹಿಂದೆ ನನ್ನ ಮನೆಯಲ್ಲೇ ತಿಂದುಂಡವನು’ ಎಂದು ಜೀವರಾಜ್‌ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT