ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆಯಿಂದ ಕರ್ನಾಟಕಕ್ಕೆ ದೊಡ್ಡ ಆರ್ಥಿಕ ಶಕ್ತಿ: ಜೆ.ಪಿ.ನಡ್ಡಾ

ಕೊಪ್ಪದಲ್ಲಿ ಆಯೋಜಿಸಿದ್ದ ಅಡಿಕೆ ಬೆಳೆಗಾರರ ಸಮಾವೇಶ
Last Updated 21 ಫೆಬ್ರುವರಿ 2023, 6:29 IST
ಅಕ್ಷರ ಗಾತ್ರ

ಕೊಪ್ಪ: ‘ಕರ್ನಾಟಕದಲ್ಲಿ 2017ರಲ್ಲಿ 2.79 ಸಾವಿರ ಹೆಕ್ಟೇರ್ ಅಡಿಕೆ ಬೆಳೆಯುವ ಪ್ರದೇಶವಿತ್ತು. ಈಗ 5.49 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆಯಿಂದ ಕರ್ನಾಟಕಕ್ಕೆ ದೊಡ್ಡ ಆರ್ಥಿಕ ಶಕ್ತಿ ಸಿಕ್ಕಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ಸೋಮವಾರ ಬಿಜೆಪಿ ಆಯೋಜಿಸಿದ್ದ ಆಯೋಜಿಸಿದ್ದ ‘ಅಡಿಕೆ ಬೆಳೆಗಾರರ ಸಮಾವೇಶ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ‘ಯಡಿಯೂರಪ್ಪ ಅವರು 1982ರಲ್ಲಿ ಅಡಿಕೆ ಬೆಳೆಗಾರರ ಪರವಾಗಿ 65 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಿದ್ದರು’ ಎಂದು ತಿಳಿಸಿದರು.

‘ನಿಜವಾದ ರೈತ ನಾಯಕ ಪ್ರಧಾನಿ ನರೇಂದ್ರ ಮೋದಿ. ರೈತರಿಗೆ ವಿಮೆ ಮೂಲಕ ₹ 1.20 ಲಕ್ಷ ಕೋಟಿ ಹಣವನ್ನು ರೈತರಿಗೆ ವಿತರಿಸಲಾಗಿದೆ. ಕೃಷಿ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ವಾರ್ಷಿಕ ₹ 6 ಸಾವಿರದಂತೆ ಪ್ರತಿವರ್ಷ ₹ 11.78 ಕೋಟಿ ರೈತರಿಗೆ ತಲುಪಿಸುತ್ತಿದ್ದೇವೆ’ ಎಂದರು.

‘2017ರಲ್ಲಿ ಅಡಿಕೆಗೆ ಪ್ರತಿ ಕ್ವಿಂಟಲ್ ಗೆ ₹ 19 ಸಾವಿರ ಸಿಗುತ್ತಿತ್ತು, 2021 ರಲ್ಲಿ ₹ 35 ಸಾವಿರಕ್ಕೂ ಹೆಚ್ಚಾಗಿದೆ, ಸಾಗರ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ದರ ₹ 40 ಸಾವಿರಕ್ಕೆ ಬಂದಿದೆ. ಹೊರಗಿನಿಂದ ಆಮದಾಗುತ್ತಿದ್ದ ಅಡಿಕೆ ಮೇಲೆ ಹೆಚ್ಚಿನ ಸುಂಕ ವಿಧಿಲಾಗಿದೆ, ಕಳಪೆ ಅಡಿಕೆ ಮಾರಟವನ್ನು ತಡೆಗಟ್ಟಲು ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ತಡೆಗಟ್ಟಲು ಕೇಂದ್ರ ಮಟ್ಟದಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲು ಕಾರ್ಯಪ್ರವೃತ್ತರಾಗಿದ್ದೇವೆ. ಅದು ರೈತರ ಪರವಾಗಿ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ. ತೀರ್ಥಹಳ್ಳಿಯಲ್ಲಿ ಸಂಶೋಧನೆಗಾಗಿ ₹ 10 ಕೋಟಿ ಮೀಸಲಿಡಲಾಗಿದೆ’ ಎಂದರು.

‘ಅಡಿಕೆ ಬೆಳೆ ನಾಶವಾಗಿರುವುದಕ್ಕೆ ರಾಜ್ಯದಲ್ಲಿ ಬಜೆಟ್‌ನಲ್ಲಿ ₹ 4 ಕೋಟಿಯಷ್ಟು ಪರಿಹಾರ ಒದಗಿಸಲು ಕ್ರಮ ವಹಿಸಿದೆ. ಕೇಂದ್ರ ಹಾಗೂ ರಾಜ್ಯದ ಡಬಲ್ ಎಂಜಿನ್ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ವಿಧಾನ ಪರಿಷತ್ ಸದಸ್ಯ ನವೀನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಮುಖಂಡರಾದ ಗಿರೀಶ್ ಪಟೇಲ್, ಚನ್ನಬಸಪ್ಪ, ಎಸ್.ಎನ್.ರಾಮಸ್ವಾಮಿ, ಜೆ.ಪುಣ್ಯಪಾಲ್, ಎಚ್.ಕೆ.ದಿನೇಶ್ ಹೊಸೂರು, ಕೊಪ್ಪ ಮಂಡಲ ಅಧ್ಯಕ್ಷ ಅದ್ದಡ ಸತೀಶ್, ಎನ್.ಆರ್.ಪುರದ ಅರುಣ್ ಕುಮಾರ್, ಶೃಂಗೇರಿಯ ಉಮೇಶ್ ತಲಗಾರ್ ಇದ್ದರು.

ಅಡಿಕೆ ಮಾನ ಕಳೆದವರು ಕಾಂಗ್ರೆಸ್‌ನವರು: ಸಿ.ಟಿ.ರವಿ

‘ಅಡಿಕೆ ವಿಷಕಾರಕ ವಸ್ತು ಎಂದು ಸುಪ್ರೀಂ ಕೋರ್ಟ್‌ನಲ್ಲಿ 2013 ರಲ್ಲಿ ಅಡಿಷನಲ್ ಸಾಲಿಸಿಟರ್ ಜನರಲ್ ಆಗಿದ್ದ ಇಂದಿರಾ ಜೈಸಿಂಗ್ ಅವರು ಹೇಳಿದ್ದರು. ಅಡಿಕೆ ಮಾನ ಕಳೆದವರು ಕಾಂಗ್ರೆಸ್‌ನವರು. ಕಾಂಗ್ರೆಸ್ ಇದ್ದಾಗ ಅಡಿಕೆ ಆಮದು ಸುಂಕ 1 ಕೆ.ಜಿಗೆ ₹ 75 ಇತ್ತು, ಈಗ ₹ 350ಕ್ಕೆ ಹೆಚ್ಚಿಸಿದೆ. 2015-16ರಲ್ಲಿ ಕ್ವಿಂಟಲ್ ಅಡಿಕೆಗೆ ₹ 1 ಲಕ್ಷದ ಆಸುಪಾಸಿಗೆ ಹೋಗಿತ್ತು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಶಾಸಕರು ರೈತರ ಪರ ಮಾತನಾಡಿಲ್ಲ: ಜೀವರಾಜ್

2013ರಲ್ಲಿ ವಿಶ್ವ ತಂಬಾಕು ದಿನದಂದು ಸಿದ್ದರಾಮಯ್ಯ ಸರ್ಕಾರ, ಯು.ಟಿ.ಖಾದರ್ ಮಂತ್ರಿ ಇದ್ದಾಗ ಕರ್ನಾಟಕದಲ್ಲಿ ಗುಟ್ಕಾ ಬ್ಯಾನ್ ಮಾಡಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಬೆಳಗಾವಿಯಲ್ಲಿ ಗುಟ್ಕಾ ಫ್ಯಾಕ್ಟರಿ ಮಾಡಲು ಜಾಗ ಕೊಟ್ಟರು. 1 ಕೋಟಿಗೂ ಹೆಚ್ಚು ಅಡಿಕೆ ಬೆಳೆಗಾರರ ಕುಟುಂಬವಿದೆ. ಕ್ಷೇತ್ರದ ಶಾಸಕರು ಅಧಿವೇಶನದಲ್ಲಿ ಹಳದಿ ಎಲೆ, ಎಲೆಚುಕ್ಕಿ ರೋಗದ ಪರಿಹಾರಕ್ಕೆ ಕೇಳಲಿಲ್ಲ, ಕೇಳಿದ್ದರೆ ಕ್ಷೇತ್ರಕ್ಕೆ ಹಣ ಸಿಗುತ್ತಿತ್ತು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಹೇಳಿದರು.

ಅಡಿಕೆ ಬೆಳೆ ರಕ್ಷಣೆಗೆ ಬದ್ಧ: ಶೋಭಾ

ಅಡಿಕೆ ಆಮದು ಸುಂಕ ಹೆಚ್ಚಿಸುವಂತೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆ ಬೆಳೆ ರಕ್ಷಣೆ ಮಾಡುವಂತೆ ಪ್ರಧಾನಿಯವರ ಬಳಿ ಮನವಿ ಮಾಡಿದ್ದೆವು, ಅದರಂತೆ ಆಮದು ಸುಂಕ ₹ 350ಕ್ಕೆ ಹೆಚ್ಚಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಅಡಿಕೆ ಪರವಾಗಿ ವಾದ ಮಾಡಲು ಒಳ್ಳೆಯ ವಕೀಲರ ನೇಮಕಕ್ಕೆ ಸೂಚಿಸಿದ್ದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT