ಸ್ಮಶಾನ; ಮೂಲಸೌಲಭ್ಯ ಮರೀಚಿಕೆ

ತರೀಕೆರೆ: ಸ್ವಾತ್ರಂತ್ಯ ಪಡೆದು ಏಳುವರೆ ದಶಕ ಕಳೆದರೂ ತರೀಕೆರೆ ಪಟ್ಟಣದಲ್ಲಿ ಮೂಲಸೌಲಭ್ಯಗಳು ಮರಿಚೀಕೆಯಾಗಿವೆ. ಪಟ್ಟಣದಲ್ಲಿ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ, ಅದಕ್ಕೆ ತಕ್ಕಂತೆ ಅಗತ್ಯ ಸೌಲಭ್ಯಗಳು ಕಲ್ಪಿಸಿಲ್ಲ ಎಂಬ ದೂರು ವ್ಯಕ್ತವಾಗಿದೆ.
ಪ್ರತಿಯೊಂದು ಪ್ರದೇಶದಲ್ಲೂ ಸ್ಮಶಾನ ಅಗತ್ಯವಾಗಿ ಬೇಕು. ಜಮೀನು ಇದ್ದವರು ಶವ ಸಂಸ್ಕಾರವನ್ನು ತಮ್ಮ ಜಮೀನಿನಲ್ಲಿ ಮಾಡಿಕೊಂಡರೆ, ಸ್ವಂತ ಜಾಗ ಇಲ್ಲದವರು ಸ್ಮಶಾನವನ್ನೇ ಆಶ್ರಯಿಸುತ್ತಾರೆ. ಆದರೆ, ತರೀಕೆರೆಯಲ್ಲಿ ಇರುವ ಸ್ಮಶಾನವನ್ನು ಪ್ರಭಾವಶಾಲಿಗಳು ಒತ್ತುವರಿ ಮಾಡಿ ಅಡಿಕೆ, ತೆಂಗು ಗಿಡಗಳನ್ನು ಬೆಳೆಸಿದ್ದಾರೆ. ಉಳಿದ ಜಾಗದಲ್ಲಿ ಗಿಡಮರಗಳು ಬೆಳೆದು ನಿಂತಿವೆ. ಪಟ್ಟಣದಲ್ಲಿ ಮತ್ತೊಂದು ಸ್ಮಶಾನ ಇದೆಯಾದರೂ ಅಲ್ಲಿಗೆ ಹೋಗಲು ಸೂಕ್ತ ದಾರಿ ಇಲ್ಲ.
ಪಟ್ಟಣದ ವಿವಿಧೆಡೆ ಒಟ್ಟು 11.35 ಎಕರೆ ವಿಸ್ತೀರ್ಣದ ಸ್ಮಶಾನವಿದೆ. ಅಲ್ಲಿ ಬ್ರಾಹ್ಮಣ, ದಲಿತರಿಗೆ ಪ್ರತ್ಯೇಕವಾದ ಸ್ಮಶಾನಗಳಿವೆ. ಆದರೆ, ಶವ ಸಂಸ್ಕಾರಕ್ಕೆ ಹೋಗಲು ಮತ್ತು ಕಟ್ಟಿಗೆ ಮುಂತಾದ ವಸ್ತುಗಳನ್ನು ಅಲ್ಲಿಗೆ ತೆಗೆದುಕೊಂಡು ಹೋಗಲು ದಾರಿ ಇಲ್ಲದೆ ಪರದಾಡುವಂತಾಗಿದೆ.
ರೈಲ್ವೆ ಕೆಳ ಸೇತುವೆ ಮೂಲಕ ಸಂಸ್ಕಾರಕ್ಕೆ ಹೋಗಬೇಕಾಗಿದೆ.
ಈ ಕೆಳ ಸೇತುವೆ ಮೂಲಕ ಪಟ್ಟಣದ ತ್ಯಾಜ್ಯ ನೀರು ಹಾಗೂ ಚಿಕ್ಕರೆ ಕೋಡಿ ನೀರು ಹರಿದು ಹೋಗುವುದರಿಂದ ಕೊಳಚೆ ನೀರಿನಲ್ಲಿ ಸಂಸ್ಕಾರಕ್ಕೆ ಹೋಗಬೆಕಾದ ಅನಿವಾರ್ಯತೆ ಎದುರಾಗಿದೆ ಎಂದು ಸ್ಥಳೀಯರು ದೂರುತ್ತಾರೆ.
‘ಪ್ರಭಾವಶಾಲಿಗಳ ಅತಿಕ್ರಮಣದಿಂದ ಸ್ಮಶಾನ ಒತ್ತುವರಿಯಾದರೆ ಇರುವ ಸ್ಮಶಾನಕ್ಕೆ ಸೂಕ್ತ ದಾರಿ, ನೀರಿನ ವ್ಯವಸ್ಥೆ, ದೀಪದ ವ್ಯವಸ್ಥೆ, ಕಾಂಪೌಂಡ್, ಕಾವಲುಗಾರ, ಸ್ವಚ್ಛತೆ ಇಲ್ಲದಿರುವುದು ಸಾರ್ವಜನಿಕರಿಗೆ ತಲೆನೋವಾಗಿದೆ. ಚುನಾವಣೆಯಲ್ಲಿ ದಲಿತರ ಬಗ್ಗೆ ಅನುಕಂಪ ತೋರುವ ರಾಜಕಾರಣಿಗಳು ಸ್ಮಶಾನಕ್ಕೆ ದಾರಿ ವ್ಯವಸ್ಥೆ ಮಾಡದಿರುವುದು ಅವರ ರಾಜಕೀಯ ಇಚ್ಚಾಶಕ್ತಿಯನ್ನು ತೋರಿಸುತ್ತದೆ’ ಎನ್ನುತ್ತಾರೆ ಛಲವಾದಿ ಸಮಾಜದ ಉಪಾಧ್ಯಕ್ಷ ನಾಗರಾಜ್.
ಕಾನೂನು ತೊಡಕು: ಸ್ಥಳೀಯ ಪುರಸಭೆಯು ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕಾದರೆ ಅದು ಕಂದಾಯ ಇಲಾಖೆಯಿಂದ ಪುರಸಭೆ ವ್ಯಾಪ್ತಿಗೆ ಬರಬೇಕು. ಆದರೆ, ಕಂದಾಯ ಇಲಾಖೆಯವರು ಸರ್ವೆ ಮಾಡಿಸಿ ಒತ್ತುವರಿದಾರರಿಂದ ತೆರವುಗೂಳಿಸಿ ಪುರಸಭೆಗೆ ಜಾಗವನ್ನು ಹಸ್ತಾಂತರ ಮಾಡಬೇಕಾಗಿದೆ. ಸ್ಮಶಾನಕ್ಕೆ ಸೂಕ್ತ ಸಂಪರ್ಕ ರಸ್ತೆ ಇಲ್ಲದಿರುವುದು ರೈಲ್ವೆ ಇಲಾಖೆಯ ಜಾಗವಾಗಿರುವುದರಿಂದ ಮತ್ತೊಂದು ಕೆಳ ಸೇತುವೆ ನಿರ್ಮಾಣ ಮಾಡಬೇಕು ಅಥವಾ ಕೋಟೆ ಕ್ಯಾಂಪಿನಿಂದ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ ರೈಲ್ವೆ ಇಲಾಖೆ ಒಪ್ಪಿಗೆ ಹಾಗೂ ಭೂ ಹಿಡುವಳಿದಾರ ಅನುಮತಿ ಅಗತ್ಯವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಕಂದಾಯ ಇಲಾಖೆಯಿಂದ ಸ್ಮಶಾನವು ಪುರಸಭೆಗೆ ಹಸ್ತಾಂತರವಾದ ಕೊಡಲೇ ನೀರು, ಸ್ವಚ್ಛತೆ ಸೇರಿದಂತೆ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದು ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಮಹಂತೇಶ್.
ರೈಲ್ವೆ ಇಲಾಖೆ ಅಧಿಕಾರಿಗಳ ಜೊತೆ ಹಾಗೂ ಹಿಡುವಳಿ ಜಮೀನು ಮಾಲೀಕರೊಂದಿಗೆ ಮಾತುಕತೆ ಮಾಡಲಾಗಿ ಅವರ ಅನುಮತಿ ಪಡೆದು ಸ್ಮಶಾನಕ್ಕೆ ದಾರಿ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಸಿದ್ದಲಿಂಗರೆಡ್ಡಿ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.