ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು ಜಿಲ್ಲಾ ಉತ್ಸವ ಆಯೋಜನೆಗೆ ಕ್ರಮ

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ
Last Updated 1 ನವೆಂಬರ್ 2019, 15:38 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಬಹುವರ್ಷಗಳಿಂದ ನಡೆಸಬೇಕೆಂದು ಯೋಜಿಸಿದ್ದ ‘ಚಿಕ್ಕಮಗಳೂರು ಜಿಲ್ಲಾ ಉತ್ಸವ’ವನ್ನು 2020ರ ಫೆಬ್ರುವರಿ ಅಂತ್ಯದೊಳಗೆ ಆಯೋಜಿಸಲು, ನಗರದ ಕುವೆಂಪು ಕಲಾಮಂದಿರದ ಕಾಯಕಲ್ಪ ನೀಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಕನ್ನಡ ರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಚಿಕ್ಕಮಗಳೂರು ಸಂಸ್ಕೃತಿಯನ್ನು ಒಂದು ಸೂರಿನಡಿ ಅಳವಡಿಸುವಂಥ ‘ಥೀಮ್‌ ಪಾರ್ಕ್‌’ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಕನ್ನಡ ನಾಡಿನ ಸಾಮ್ರಾಜ್ಯಗಳಲ್ಲಿ ಒಂದಾದ ಹೊಯ್ಸಳ ರಾಜಮನೆತನಕ್ಕೆ ಜನ್ಮವಿತ್ತ ಜಿಲ್ಲೆ ಇದು. ಈ ನೆಲದ ಸಾಹಿತ್ಯ ಪರಂಪರೆಗಳೂ ಮಹತ್ವದ್ದಾಗಿವೆ. 915ಕ್ಕೂ ಹೆಚ್ಚು ಶಾಸನಗಳು ಇಲ್ಲಿನ ಇತಿಹಾಸ ದಾಖಲಿಸಿವೆ ಎಂದರು.

ಕನ್ನಡ ಸಾಹಿತ್ಯಕ್ಕೆ 2000 ವರ್ಷಗಳ ಸುದೀರ್ಘ ಇತಿಹಾಸ ಇದೆ. ಕ್ರಿ.ಶ.450ರ ಹಲ್ಮಿಡಿ ಶಾಸನ ಇದಕ್ಕೆ ಸ್ಪಷ್ಟ ನಿದರ್ಶನ. ಕನ್ನಡದ ಮೊದಲ ಈ ಶಾಸನದಲ್ಲಿ ಚಿಕ್ಕಮಗಳೂರಿನ ಮುಗುಳುವಳ್ಳಿಯ ಉಲ್ಲೇಖವೂ ಇದೆ. ಮಾನವ ಇತಿಹಾಸದ ಆರಂಭದ ಹಳೆ ಶಿಲಾಯುಗದ ಕುರುಹುಗಳು ಈ ಜಿಲ್ಲೆಯ ಪ್ರಾಚೀನತೆಗೆ ಸಾಕ್ಷಿಯಾಗಿವೆ ಎಂದು ವಿಶ್ಲೇಷಿಸಿದರು.

ರುದ್ರಭಟ್ಟ, ಲಕ್ಷ್ಮೀಶ, ಅಕ್ಕನಾಗಮ್ಮ , ನುಲಿಯ ಚಂದಯ್ಯ, ಎ.ಆರ್‌.ಕೃಷ್ಣಶಾಸ್ತ್ರಿ, ಮಲ್ಲಿಕಾ ಕಡಿದಾಳ್‌, ಕಾಶಿವಿಶ್ವನಾಥಶೆಟ್ಟಿ, ಸುಮತೀಂದ್ರ ನಾಡಿಗ್‌, ಬಿ.ಟಿ.ಲಲಿತಾನಾಯಕ್‌ ಮೊದಲಾದ ಕವಿಸಾಹಿತಿಗಳಿಗೆ ಜಿಲ್ಲೆಯ ಹಿರಿಮೆ ಹೆಚ್ಚಿದೆ.

ಕುವೆಂಪು ಹುಟ್ಟಿದ್ದು ಈ ಜಿಲ್ಲೆಯಲ್ಲಿ. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಬದುಕಿದ್ದ ಈ ಮಣ್ಣಿನಲ್ಲಿ. ಜಾನಪದ ಜಗತ್ತಿನಲ್ಲಿ ತಮ್ಮದೇ ಛಾಪು ಒತ್ತಿದ ಕೆ.ಆರ್‌.ಲಿಂಗಪ್ಪ, ಗೊ.ರು.ಚನ್ನಬಸಪ್ಪ ಮೊದಲಾದವರು ಈ ಜಿಲ್ಲೆಯವರು. ಭರತನಾಟ್ಯ ಕ್ಷೇತ್ರದ ಸಾಧಕಿ ವೆಂಕಟಲಕ್ಮಮ್ಮ, ಸುಗಮ ಸಂಗೀತ ಕ್ಷೇತ್ರದ ಸಾಧಕಿ ಬಿ.ಕೆ.ಸುಮಿತ್ರಾ ಇಲ್ಲಿನವರು ಎಂದು ಹೇಳಿದರು.

‘ವಡ್ಡಾರಾಧನೆ’, ‘ಕವಿರಾಜ ಮಾರ್ಗ’ ಈ ಮೇರು ಕೃತಿಗಳೇ ಅಲ್ಲದೇ ಪಂಪ, ಪೊನ್ನ, ರನ್ನ, ಜನ್ನ, ಕುಮಾರವ್ಯಾಸ, ಲಕ್ಷ್ಮೀಶ, ವಚನಕಾರರು ದಾಸವರೇಣ್ಯರು, ಸರ್ವಜ್ಞ, ರತ್ನಾಕರವರ್ಣಿ, ಮುದ್ದಣ... ಹೇಳಿದಷ್ಟೂ ನಮ್ಮ ಕವಿಗಳ , ಸಾಹಿತ್ಯದ ಹಿರಿಮೆ ಹೆಚ್ಚುತ್ತಾ ಸಾಗುತ್ತದೆ. ಆಧುನಿಕ ಯುಗದಲ್ಲಿ ಕನ್ನಡದ ವೈಶಾಲ್ಯ ಮತ್ತಷ್ಟು ಹೆಚ್ಚಿದೆ. ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಹೀಗೆ ಅತ್ಯಂತ ವಿಶಾಲ ಸ್ತರದಲ್ಲಿ ಹರಡಿಕೊಂಡು ಬೆಳೆದಿದೆ ಎಂದು ವಿವರಿಸಿದರು.

ಸ್ವಾತಂತ್ರ್ಯ ನಂತರವೂ ಕನ್ನಡನಾಡಿಗೆ ತನ್ನದೇ ಆದ ಅಸ್ಮಿತೆ ಇರಲಿಲ್ಲ. ಹೈದರಾಬಾದ್‌, ಮದ್ರಾಸ್‌, ಬಾಂಬೆ ಪ್ರದೇಶಗಳಲ್ಲದೆ ಸಾಂಗ್ಲಿ, ಮಿರ್ಜಿ ಮುಂತಾದ 19 ಪ್ರದೇಶಗಳ ಚೂರುಚೂರುಗಳಲ್ಲಿ ಕನ್ನಡಿಗರ ಆತ್ಮಾಭಿಮಾನ ಹರಿದು ಹಂಚಿಹೋಗಿತ್ತು. ಈ ನೋವನ್ನು ನೀಗಿ ನಮ್ಮತನದ, ಕನ್ನಡತನದ ನಲಿವನ್ನು ತರಲು ಏಕೀಕರಣದ ಹೋರಾಟ ಮಾಡಿದ ಸಹಸ್ರಾರು ಕನ್ನಡಿಗರ ಶ್ರಮದ ಫಲ ರಾಜ್ಯೋತ್ಸವದ ಈ ದಿನ. 1956 ನ.1ರಂದು ‘ವಿಶಾಲ ಮೈಸೂರು’ ರಾಜ್ಯವನ್ನು ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದರೆ, 1973 ನ.1ರಂದು ‘ಕರ್ನಾಟಕ’ ಹೆಸರನ್ನು ನೀಡಿ ಕನ್ನಡಿಗರ ಅಭಿಮಾನವನ್ನು ಹೆಚ್ಚಿಸಿತು ಎಂದು ವಿಶ್ಲೇಷಿಸಿದರು.

ಕನ್ನಡದ ಪುಸ್ತಕಗಳನ್ನು ಹೆಚ್ಚಾಗಿ ಓದುವ, ಕನ್ನಡ ಸಂಸ್ಕೃತಿಯನ್ನು ಅಭಿಮಾನಿಸಿ ಪ್ರೀತಿಸುವ ಮನೋಭಾವ ಜನರಲ್ಲಿ ಬರಬೇಕು. ಹಳಗನ್ನಡದ ಸತ್ವವನ್ನುಮಕ್ಕಳಿಗೆ ಆಮೂಲಾಗ್ರವಾಗಿ ಪರಿಚಯಿಸಲು ಕನ್ನಡ ಸಂಘಸಂಸ್ಥೆಗಳು ಕಟೀಬದ್ಧರಾಗಬೇಕು. ಕನ್ನಡ ಕೃತಿಗಳನ್ನು ಇಂಗ್ಲಿಷ್‌ ಸೇರಿದಂತೆ ಭಾರತೀಯ ಭಾಷೆಗಳಿಗೆ ಅನುವಾದಿಸುವ ಮೂಲಕ ಕನ್ನಡದ ವಿದ್ವತ್ತಿನ ಪರಿಚಯವನ್ನು ಜಗತ್ತಿಗೆ ಮಾಡಿಕೊಡಬೇಕು. ಕನ್ನಡ ಶಾಲೆಗಳು ಆತ್ಮವಿಶ್ವಾಸದಿಂದ ತಲೆಯೆತ್ತಿ ನಿಲ್ಲುವ ವಾತಾವರಣ ನಿರ್ಮಾಣಕ್ಕೆ ಸರ್ಕಾರ ಎಲ್ಲ ಪ್ರಯತ್ನ ಮಾಡಲಿದೆ ಎಂದು ತಿಳಿಸಿದರು.

ಭಾಷೆಯು ಸಂಸ್ಕೃತಿಯ ಕೀಲಿ ಕೈ. ಭಾಷೆ ಜೀವಂತವಾಗಿರುವುದು ಅದು ಮಿದುಳಿನಲ್ಲಿ ಶೇಖರವಾಗುವುದರಿಂದ ಅಲ್ಲ. ರಕ್ತ ಮಾಂಸದಲ್ಲಿ ಸೇರಿ ಹೃದಯಸ್ಥವಾದಾಗ ಮಾತ್ರ ಭಾಷೆಗೆ ಚೈತನ್ಯ ಬರುತ್ತದೆ. ಕನ್ನಡಮ್ಮನ ನಿತ್ಯ ಸಚಿವ ಮಂಡಲ ಕನ್ನಡ ನಾಡಿನಲ್ಲಿ ಸದಾ ಜಾಗೃತವಾಗಿರಲಿ ಎಂದು ಆಶಿಸಿದರು.ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರುತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT