ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಅಭಿಮಾನ ನವೆಂಬರ್‌ಗೆ ಸೀಮಿತವಾಗಬಾರದು’

‘ಪಾಂಚಜನ್ಯ ಯುವ ವೇದಿಕೆ’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ
Last Updated 5 ಡಿಸೆಂಬರ್ 2022, 4:29 IST
ಅಕ್ಷರ ಗಾತ್ರ

ಕೊಪ್ಪ: ‘ನವೆಂಬರ್ ತಿಂಗಳಿಗೆ ಮಾತ್ರ ಕನ್ನಡದ ಅಭಿಮಾನ ಸೀಮಿತವಾಗಬಾರದು. ಪರಭಾಷಾ ವ್ಯಾಮೋಹ ಬಿಟ್ಟು ಕನ್ನಡದ ಉಳಿವಿಗಾಗಿ ಹೋರಾಟ ಮಾಡುವ ಅವಶ್ಯಕತೆ ಇದೆ’ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ತಾಲ್ಲೂಕಿನ ಗಡಿಕಲ್‌ನಲ್ಲಿ ಶನಿವಾರ ‘ಪಾಂಚಜನ್ಯ ಯುವ ವೇದಿಕೆ’ಯ 9ನೇ ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಸನ್ಮಾನ, ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು, ‘ಪಾಂಚಜನ್ಯ ಯುವ ವೇದಿಕೆಯು ಕನ್ನಡ ಪರ ಕಾರ್ಯಕ್ರಮಗಳು ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ’ ಎಂದರು.

‘ಕನ್ನಡ ನಾಡಿನಲ್ಲಿ ಇರುವ ಅನ್ಯ ಭಾಷಿಕರಿಗೆ ಇಲ್ಲಿನ ನೆಲ, ಜಲದ ಬಗ್ಗೆ ಪ್ರೀತಿ ಇಲ್ಲ. ಈ ನಡುವೆ ನಾವು(ಕನ್ನಡಿಗರು) ಪರಭಾಷಾ ವ್ಯಾಮೋಹಕ್ಕೆ ಒಳಗಾಗಿ ಕನ್ನಡ ಶಾಲೆಗಳಲ್ಲಿ ಹಾಜರಾತಿ ಕಡಿಮೆಯಾಗುತ್ತಿದೆ. ಸರ್ಕಾರ ಅನಿವಾರ್ಯವಾಗಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲಭಾಷೆ ಅಳವಡಿಸುವ ತೀರ್ಮಾನ ಕೈಗೊಂಡಿರುವುದನ್ನು ಗಮನಿಸಿದರೆ, ಪ್ರತಿಯೊಬ್ಬರೂ ಕನ್ನಡ, ಸಂಸ್ಕೃತಿ ಪೋಷಿಸಿ ಉಳಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಬೇಕಿದೆ’ ಎಂದರು.

‘ಕನ್ನಡ ಕಟ್ಟುವ ಕೆಲಸ ಮಾಡಿದ್ದ ಕುವೆಂಪು ಅವರು ಹುಟ್ಟಿದ ಗ್ರಾಮದಲ್ಲಿ ಇಂದು ನಾವಿದ್ದೇವೆ. ಪುನೀತ್ ರಾಜ್ ಕುಮಾರ್ ಅವರು ತಮ್ಮ ಜೀವಿತ ಅವಧಿಯಲ್ಲಿ ಎಲೆಮರೆ ಕಾಯಿಯಂತೆ ಕನ್ನಡ ಪರ, ಕನ್ನಡಿಗರಿಗಾಗಿ ಕೆಲಸ ಮಾಡಿದ್ದರು. ರಾಜ್ಯದ ಮೂಲೆ ಮೂಲೆಗಳಲ್ಲೂ ಅವರ ಹೆಸರಿನಲ್ಲಿ ಕನ್ನಡ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ತಿಳಿಸಿದರು.

ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆ 9ನೇ ತರಗತಿ ವಿದ್ಯಾರ್ಥಿನಿ ಕೆ.ಆರ್.ಬಿಂದು ‘ಭಾರತೀಯ ಸನಾತನ ಧರ್ಮ’ ವಿಷಯದ ಕುರಿತು ಭಾಷಣ ಮಾಡಿದರು. ಪಾಂಚಜನ್ಯ ಯುವ ವೇದಿಕೆ ಅಧ್ಯಕ್ಷ ಚೇತನ್ ಗಡಿಕಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರೇಕೊಡಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರೌಢಶಾಲೆ ನಿವೃತ್ತ ಶಿಕ್ಷಕರಾದ ಅನಂತಪದ್ಮನಾಭ ಅಡಿಗ, ಕೆ.ಎಸ್.ಅಣ್ಣಯ್ಯ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 7ನೇ ತರಗತಿ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ‘ರಿದಮ್ ಲೈವ್ ಮ್ಯೂಸಿಕ್ ಆರ್ಕೇಸ್ಟ್ರಾ’ ತಂಡದಿಂದ ಆರ್ಕೇಸ್ಟ್ರಾ ಮತ್ತು ನೃತ್ಯ ಪ್ರದರ್ಶನ ಜರುಗಿತು.

ಹಿರೇಕೊಡಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಧನ್ಯಶ್ರೀ ವಿಶ್ವ, ದೇವಂಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಎಸ್.ನಾಗರಾಜ್, ಸರೋಜ ನಾಗಪ್ಪಗೌಡ, ಪಾಂಚಜನ್ಯ ಯುವ ವೇದಿಕೆ ಗೌರವಾಧ್ಯಕ್ಷ ಅಸೂಡಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಅಬ್ಬಿಗುಂಡಿ ಸಚಿನ್, ಕಾರ್ಯದರ್ಶಿ ವಿಮಂತ್ ಗೌಡ, ಖಜಾಂಚಿ ತ್ರಿಭುವನ್ ಗೌಡ, ಸಹ ಖಜಾಂಚಿ ಜಯೇಶ, ಸಂಘಟನಾ ಕಾರ್ಯದರ್ಶಿ ನವೀನ್ ಆಚಾರ್ಯ, ಸಮಿತಿ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT