ಮಂಗಳವಾರ, ಜನವರಿ 31, 2023
19 °C

ಕ್ಷೇತ್ರಾಭಿವೃದ್ಧಿಯಲ್ಲಿ ಶಾಸಕರ ಶ್ರಮ ನಿರಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಡೂರು: ಕ್ಷೇತ್ರದ ಅಭಿವೃದ್ದಿಗೆ ₹2800 ಕೋಟಿಗೂ ಹೆಚ್ಚು ಅನುದಾನ ತರುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿಯೂ ಜನತೆ ಅಭಿವೃದ್ಧಿಯ ಪರವಾಗಿಯೇ ಇರುತ್ತಾರೆ ಎಂಬ ವಿಶ್ವಾಸ ತಮ್ಮದು ಎಂದು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಎಂ.ರೇವಣ್ಣಯ್ಯ ಹೇಳಿದರು.

ಬುಧವಾರ ಬಿ.ಬಸವನಹಳ್ಳಿ, ಕೆ.ಬಿದರೆ, ಕಂಚುಗಲ್, ದೇವರ ಹೊಸಳ್ಳಿ, ಚೌಡಿಪಾಳ್ಯ ಗ್ರಾಮಗಳಲ್ಲಿ 2020-21 ನೇ ಸಾಲಿನ 3054 ಪಿಆರ್‌ಇಡಿ ನಿರ್ವಹಣಾ ಅನುದಾನ ಯೋಜನೆ ಅಡಿಯಲ್ಲಿ ಒಟ್ಟು ₹3.50 ಕೋಟಿ  ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

₹643 ಕೋಟಿ ವೆಚ್ಚದ ಭದ್ರಾ ನದಿಯಿಂದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ಕ್ಷೇತ್ರದ 434 ಜನ ವಸತಿ ಪ್ರದೇಶಗಳಿಗೆ ಶುದ್ದ ಕುಡಿಯುವ ನೀರು ಸರಬರಾಜು ಮಾಡುವ ಕಾಮಗಾರಿ ಈಗಾಗಲೇ ಪ್ರಗತಿಯಲ್ಲಿದೆ.ಇದರ ಜೊತೆಗೆ ಜಲ ಜೀವನ್ ಮಿಷನ್ ಯೋಜನೆ ಅಡಿಯಲ್ಲಿ ₹122.28 ಕೋಟಿ ವೆಚ್ಚದಲ್ಲಿ ಕ್ಷೇತ್ರದ 298 ಜನ ವಸತಿ ಪ್ರದೇಶಗಳಿಗೆ ಮನೆಗಳಿಗೆ ನಲ್ಲಿ ನೀರು ಒದಗಿಸುವ ಯೋಜನೆ ಕಾಮಗಾರಿ ಮುಗಿಯುವ ಹಂತದಲ್ಲಿದ್ದು ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಹಿಂದೆಂದೂ ಆಗದಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವದನ್ನು ಕಂಡ ಕ್ಷೇತ್ರದ ಜನತೆ ಮತ್ತೆ ಶಾಸಕರನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ ಎಂದರು.

ಬಿಜೆಪಿ ಹಿಂದುಳಿದ ವರ್ಗಗಳ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್.ರಂಗನಾಥ್ ಮಾತನಾಡಿ, ‘ಕ್ಷೇತ್ರದಲ್ಲಿ ಶಾಶ್ವತ ನೀರಾವರಿ ಮತ್ತು ಗ್ರಾಮೀಣ ರಸ್ತೆಗಳ ಸುಧಾರಣೆಯನ್ನೆ ಗುರಿಯಾಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಶಾಸಕ ಬೆಳ್ಳಿಪ್ರಕಾಶ್ ಮುಂದೆಯೂ ಸಹ ಈ ಕಾರ್ಯಗಳನ್ನು ಮುಂದುವರೆಸುತ್ತಾರೆ. ಜನತೆಯ ಅಭಿಪ್ರಾಯವೂ ಅದೇ ಆಗಿದೆ’ ಎಂದರು.

ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ಮಾತನಾಡಿ, ‘ಅಭಿವೃದ್ದಿ ವಿಚಾರದಲ್ಲಿ ಶಾಸಕರು ಯಾವುದೇ ತಾರತಮ್ಯ ಮಾಡಿಲ್ಲ. ಎಲ್ಲರನ್ನೂ ಸಮಾನತೆಯಿಂದ ಒಟ್ಟಿಗೆ ಕರೆದೊಯ್ಯುವ ಕಾರ್ಯವೈಖರಿ ಅವರದು’ ಎಂದರು.

ಕೆ.ಬಿದರೆ ಗ್ರಾಮ ಪಂಚಾಯಿತಿ,ಆಣೇಗೆರೆ ಗ್ರಾಮ ಪಂಚಾಯಿತಿ ಮತ್ತು ತಿಮ್ಮಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹೇಶ್ವರಮ್ಮ, ಎ.ಜಿ.ಮಂಜುನಾಥ್, ಜಿ.ಎಸ್.ಜಾನಕಮ್ಮ, ಮುಖಂಡರಾದ ರೂಪ ಶ್ರೀನಿವಾಸ್, ಜಿ.ಎಸ್.ಪ್ರಭುಕುಮಾರ್, ಬಿ.ಎನ್.ಗಿರೀಶ್, ಕೆ.ಜೆ.ಅನಿಲ್ ಕುಮಾರ್, ಬಿ.ವಿ.ಚಂದ್ರಮ್ಮ, ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್, ಚಿನ್ನು ದೇವರಾಜ್, ಕರಿಯಪ್ಪ, ಜಿ.ಶಿವರಾಜ್, ಎಂ.ದೇವರಾಜ ನಾಯ್ಕ, ಬಿ.ಸಿ.ಪ್ರವೀಣ್ ನಾಯ್ಕ್, ಡಿ.ರೇಣುಕಾರಾಧ್ಯ, ಚರಣ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.