ಗುರುವಾರ , ಆಗಸ್ಟ್ 22, 2019
21 °C

ಕೊಚ್ಚಿ ಹೋದ ಬದುಕು; ಕಣ್ಣೀರ ಕೋಡಿ

Published:
Updated:
Prajavani

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಹಾಮಳೆಯ ರುದ್ರನರ್ತನಕ್ಕೆ ಬದುಕು ಕೊಚ್ಚಿ ಹೋಗಿ, ಜನರು ಕಣ್ಣೀರಿಡುವಂತಾಗಿದೆ.

ಹಲವು ಕಡೆಗಳಲ್ಲಿ ರಸ್ತೆ, ಗುಡ್ಡ, ಮನೆ, ತೋಟ, ಹೊಲಗದ್ದೆಗಳು ಮಳೆಗೆ ಆಪೋಶನವಾಗಿವೆ. ನೆಂಟರು–ಸ್ನೇಹಿತರ ಮನೆ, ನಿರಾಶ್ರಿತರ ಕೇಂದ್ರಗಳಲ್ಲಿ ಸಂತ್ರಸ್ತರು ಆಶ್ರಯ ಪಡೆದಿದ್ದು, ದಿಕ್ಕುತೋಚದಂತಾಗಿದ್ದಾರೆ.


ಮಲೆಮನೆಯಲ್ಲಿ ಮಳೆಗೆ ಮನೆಗಳು ಕುಸಿದಿರುವುದು

‘ನಮ್ಮೂರು ಹಟ್ಟೆಹಾರದಲ್ಲಿ ಗುಡ್ಡದಮಣ್ಣು ಕುಸಿದು ಮೂರು ದಿನಗಳಿಂದ ಮನೆಯಲ್ಲಿ ಸಿಲುಕಿಕೊಂಡಿದ್ದೆವು. ವಿದ್ಯುತ್‌ ಇಲ್ಲದೆ ರಾತ್ರಿ ಭಯದಲ್ಲಿ ದಿನದೂಡಿದೆವು. ಅಣ್ಣ ಸಂದೀಪ ಅವರ ಮನೆ ನೆಲಸಮವಾಗಿದೆ, ನಮ್ಮದು ಅರ್ಧ ಕುಸಿದಿದೆ. ನೆರೆಹೊರೆಯ ಮಹಿಳೆಯರು ಕಷ್ಟಪಟ್ಟು ನಿರಾಶ್ರಿತರ ಕೇಂದ್ರಕ್ಕೆ ತಲುಪಿಸಿದರು. 9 ತಿಂಗಳ ಕೂಸು ಇದೆ’ ಎಂದು ಮಲೆಮನೆ ನಿರಾಶ್ರಿತರ ಕೇಂದ್ರದಲ್ಲಿರುವ ಬಾಣಂತಿ ದಿವ್ಯಾ ಅಲವತ್ತು ಕೊಂಡರು.

‘ಮನೆ ಮಳೆ ಪಾಲಾಗಿದೆ. ಈಗ ಕೇಂದ್ರವೇ ಗತಿ. ಕಡಿದಾದ ಹಾದಿಯಲ್ಲಿ ಕೆಸರಿನಲ್ಲಿ ಬರುವಾಗ ಕಾಲಿಗೆ ಪೆಟ್ಟು ಬಿದ್ದಿದೆ. ಮಳೆಯಿಂದಾಗಿ ಬದುಕು ಮೂರಾಬಟ್ಟೆಯಾಗಿದೆ. ಮುಂದೇನು ದಿಕ್ಕು ತೋಚುತ್ತಿಲ್ಲ. ಯಾರು ಕೇಳುತ್ತಾರೆ ನಮ್ಮ ಗೋಳು...’ ಎಂದು ಕೇಂದ್ರ
ದಲ್ಲಿನ ರತ್ನಮ್ಮ ನೋವು ತೋಡಿಕೊಂಡರು.

ಗುಡ್ಡದ ಮಣ್ಣು ಕುಸಿದು ಮಲೆಮನೆಯಲ್ಲಿನ ಆರು ಮನೆಗಳು ಕುಸಿದಿವೆ. ಕುಟುಂಬವೊಂದು ಮನೆಯ ಅಟ್ಟದಲ್ಲಿಯೇ ಇಡೀ ರಾತ್ರಿ ಕಗ್ಗತ್ತಲಿನಲ್ಲಿ ಕಳೆದಿದೆ.

ಗುಡ್ಡಪ್ರದೇಶದಲ್ಲಿ ಎಲ್ಲೆಂದರಲ್ಲಿ ನೀರು ನುಗ್ಗಿ ಹಳ್ಳಗಳು, ಕೊರಕಲುಗಳಾಗಿವೆ. ಬಂಡೆಗಳು, ಮರಗಳು ಉರುಳಿ ಬಂದು ಹಲವಾರು ಕಡೆ ಜಮಾಯಿಸಿವೆ. ಅಡಿಕೆ, ಬಾಳೆ, ಕಿತ್ತಳೆ, ಕಾಫಿ ತೋಟಗಳು, ಗದ್ದೆಗಳು ಹಾಳಾಗಿವೆ. ಮಲೆನಾಡು ಈಗ ಅಕ್ಷರಶಃ ಸಂಕಷ್ಟ ಬೀಡಾಗಿದೆ.

Post Comments (+)