ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ‘ರೈತರ ಹಿತ ಕಾಯುವಲ್ಲಿ ಸರ್ಕಾರ ವಿಫಲ’

ರತ್ನ ಭಾರತ ರೈತ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ
Last Updated 15 ಜೂನ್ 2022, 4:52 IST
ಅಕ್ಷರ ಗಾತ್ರ

ಅಜ್ಜಂಪುರ: ‘ರೈತರ ಬೆಳೆಗೆ ಸಮರ್ಪಕ ನೀರು, ಉಚಿತ ವಿದ್ಯುತ್, ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಬೆಳೆಗೆ ನ್ಯಾಯಯುತ ಬೆಲೆ ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ರತ್ನ ಭಾರತ ರೈತ ಸಮಾಜ ರಾಜ್ಯ ಕಾರ್ಯದರ್ಶಿ ಎಂ.ಎಚ್. ಪಾಟೀಲ್ ದೂರಿದರು.

ತಾಲ್ಲೂಕಿನ ಹಣ್ಣೆ ಗ್ರಾಮದಲ್ಲಿ ಮಂಗಳವಾರ ನಡೆದ ರತ್ನ ಭಾರತ ರೈತ ಸಮಾಜ ಚಿಕ್ಕಮಗಳೂರು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ಅತಿವೃಷ್ಠಿ ಇಲ್ಲವೇ ಅನಾವೃಷ್ಠಿಯಿಂದ ರೈತರ ಬೆಳೆಯ ಇಳುವರಿ ಕುಸಿಯುತ್ತಿದೆ. ಬೆಳೆಗೆ ಬೆಲೆ ಕುಸಿತ ಮತ್ತೊಂದೆಡೆ ರೈತರನ್ನು ಸಂಕಷ್ಠಕ್ಕೆ ತಳ್ಳುತ್ತಿದೆ. ಬೆಳೆಗೆ ಮಾಡಿದ ವೆಚ್ಚವೂ ಕೈಸೇರದೇ ರೈತ ಸಾಲದ ಸುಳಿಯಲ್ಲಿ ಸಿಲುಕುತ್ತಿದ್ದಾನೆ. ಇಂತಹ ರೈತರ ಕೈಹಿಡಿಯುವಲ್ಲಿ ಸರ್ಕಾರಗಳು ನಿರಾಸಕ್ತಿ ತೋರುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸಮಾಜದ ನೂತನ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದ್ ಮಾತನಾಡಿ, ‘ರತ್ನ ಭಾರತ ರೈತ ಸಮಾಜ ನೊಂದಾಯಿತ ಸಂಘಟನೆಯಾಗಿದೆ. ರೈತರ ಬೇಕು-ಬೇಡಿಕೆ ಈಡೇರಿಕೆಗೆ ಹೋರಾಟ ಮಾಡುವ ಗುರಿ ಹೊಂದಿದೆ. ರೈತರು, ಸಂಘನೆಯಲ್ಲಿ ಹೆಸರು ನೊಂದಾಯಿಸಿಕೊಳ್ಳಬೇಕು. ಸಂಘವನ್ನು ಬಲಗೊಳಿಸಬೇಕು’ ಎಂದು ಮನವಿ ಮಾಡಿದರು.

ಹಣ್ಣೆ ಹಿರೇಮಠದ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಈ ಭಾಗದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಹನಿ ನೀರಾವರಿ ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಇದರಲ್ಲಿನ ಲೋಪದೋಷ ಸರಿಪಡಿಸಲು ಅಥವಾ ಕೆರೆಗಳಿಗೆ ನೀರು ತುಂಬಿಸಲು ಸಂಬಂಧಪಟ್ಟವರ ಮುಂದೆ ಮಂಡಿಸಲು ಅವಕಾಶವಿದೆ. ಇದನ್ನು ಸಂಘಟನೆ, ಬಳಸಿಕೊಳ್ಳಬೇಕು. ಆ ಮೂಲಕ ಸಮಸ್ತ ರೈತ ಸಮುದಾಯದ ಹಿತ ಕಾಯಬೇಕು’ ಎಂದು ಸಲಹೆ ನೀಡಿದರು.

ಹಳೇಬೀಡು ಪುಷ್ಪಗಿರಿ ಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ‘ಹಳ್ಳಿಗಳಲ್ಲಿ ಸ್ವಸಹಾಯ ಸಂಘದ ಮಾದರಿಯಲ್ಲಿ ರತ್ನ ಭಾರತ ರೈತ ಸಮಾಜ ಸಂಘ ಸ್ಥಾಪನೆಯಾಗಲಿ, ಸಂಘ ಬಲಗೊಳ್ಳಲಿ, ಇಡೀ ರೈತ ಸಮುದಾಯದ ಬೇಡಿಕೆ ಈಡೇರಿಕೆಗೆ ಶ್ರಮಿಸಲಿ’ ಎಂದು ಆಶಿಸಿದರು.

ರತ್ನ ಭಾರತ ರೈತ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚಿದಾನಂದ್, ತಾಲ್ಲೂಕು ಅಧ್ಯಕ್ಷರಾಗಿ ನವೀನ್ ಅಧಿಕಾರ ಸ್ವೀಕರಿಸಿದರು. ಮುಖಂಡರಾದ ಸೋಮಶೇಖರ್, ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT