ಶನಿವಾರ, ಆಗಸ್ಟ್ 24, 2019
23 °C

ಗಾಲಿಕುರ್ಚಿ ಆಸರೆ; ಅಡ್ಡೆ ಮೂಲಕ ರಕ್ಷಣೆ

Published:
Updated:

ಚಿಕ್ಕಮಗಳೂರು: ಶಸ್ತ್ರಚಿಕಿತ್ಸೆಯಾಗಿ ಮನೆಯಲ್ಲಿ ಹಾಸಿಗೆಯಲ್ಲಿದ್ದ ಆಲೇಖಾನ್‌ ಹೊರಟ್ಟಿ ಗ್ರಾಮದ ನಾರಾಯಣಗೌಡ ಅವರನ್ನು ಗಾಲಿಕುರ್ಚಿಯಲ್ಲಿ ಕೂರಿಸಿಕೊಂಡು ಸೇನಾ ತಂಡದವರು ಅಡ್ಡೆಯಲ್ಲಿ ಹೊತ್ತು ತಂದು ಪರಿಹಾರ ಕೇಂದ್ರಕ್ಕೆ ತಲುಪಿಸಿದ್ದಾರೆ.

ನಾರಾಯಣ ಗೌಡ ಅವರಿಗೆ ಅಪಘಾತದಲ್ಲಿ ಪೆಟ್ಟು ಬಿದ್ದು ಶಸ್ತ್ರಚಿಕಿತ್ಸೆಯಾಗಿ ವಿಶ್ರಾಂತಿಯಲ್ಲಿದ್ದಾರೆ. ನಡೆದಾಡಲು ಕಾಲು ಸ್ವಾಧೀನ ಇಲ್ಲ. ಸುಮಾರು 8 ಕಿಲೋ ಮೀಟರ್‌ ದೂರದವರೆಗೆ ಅಡ್ಡೆಯಲ್ಲಿ ಹೊತ್ತು ತಂದಿದ್ದಾರೆ. ವಿದ್ಯುತ್‌ ಇಲ್ಲದೆ, ಭಾರಿ ಮಳೆಯಲ್ಲಿ ಕತ್ತಲಿನಲ್ಲಿ ನಾಲ್ಕು ದಿನಗಳಿಂದ ದಿಕ್ಕು ತೋಚದೆ ಕಂಗಾಲಾಗಿದ್ದ ನಾರಾಯಣಗೌಡ ಅವರನ್ನು ಸೇನಾ ತಂಡ ರಕ್ಷಣೆ ಮಾಡಿದೆ.

ಗುಡ್ಡದ ಕೆಸರು, ಕಲ್ಲು, ಮುಳ್ಳಿನ ದುರ್ಗಮ ಹಾದಿ ಸವೆಸಿ ಗ್ರಾಮದಿಂದ ಮಲಯ ಮಾರುತ ಪ್ರದೇಶದವರೆಗೆ ಹೊತ್ತು ತಂದು ಅಲ್ಲಿಂದ ವಾಹನದಲ್ಲಿ ಸಾಗಿಸಿದ್ದಾರೆ. ಸೇನಾ ತಂಡದ 20ಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆ ಮಾಡಿದ್ದಾರೆ.

ವರುಣ ಅಬ್ಬರಕ್ಕೆ ಆಲೇಖಾನ್‌ ಗ್ರಾಮವನ್ನು ಸಂಪರ್ಕಿಸುವ ಎರಡೂ ಮಾರ್ಗಗಳಲ್ಲಿ ಗುಡ್ಡ ಕುಸಿದು ನಾಲ್ಕು ದಿನಗಳಿಂದ ರಸ್ತೆ ಸಂಚಾರ ಕಡಿತವಾಗಿತ್ತು. ಎಡಬಿಡದೆ ಮಳೆ ಸುರಿಯುತ್ತಿದ್ದರಿಂದ ಎರಡು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಸಾಧ್ಯವಾಗಿರಲಿಲ್ಲ. ಕಾರ್ಯಾಚರಣೆಗೆ ಶನಿವಾರ ಸೇನಾ ತಂಡ ಕರೆಸಲಾಗಿತ್ತು.

ಶನಿವಾರ ತಡ ರಾತ್ರಿಯಿಂದ ಮಳೆ ಬಿಡುವು ನೀಡಿದೆ. ಸೇನಾ ತಂಡದವರು ಭಾನುವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಗ್ರಾಮದಲ್ಲಿ ಸಿಲುಕಿಕೊಂಡಿದ್ದ 75 ಮಂದಿ ರಕ್ಷಿಸಲಾಗಿದೆ.

ಸಂಚಾರ ನಿಷೇಧ: ಗಿರಿಶ್ರೇಣಿ ಭಾಗದ ಕೆಲವು ಕಡೆ ಗುಡ್ಡ ಕುಸಿದಿದೆ. ಹೀಗಾಗಿ, ಬಾಬಾ ಬುಡನ್‌ಗಿರಿ, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸಹಿತ ಗಿರಿಶ್ರೇಣಿ ತಾಣಗಳಿಗೆ ಇದೇ 14ರವರೆಗೆ ಸಂಚಾರ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಆದೇಶ ಹೊರಡಿಸಿದ್ದಾರೆ.

Post Comments (+)